ADVERTISEMENT

ನೀವೂ ಮತ ಹಾಕಿ, ಬೇರೆಯವರನ್ನೂ ಪ್ರೇರೇಪಿಸಿ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್

​ಪ್ರಜಾವಾಣಿ ವಾರ್ತೆ
Published 25 ಜನವರಿ 2024, 16:00 IST
Last Updated 25 ಜನವರಿ 2024, 16:00 IST
<div class="paragraphs"><p>ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ&nbsp;ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಅವರು&nbsp;ಹೊಸ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಿದರು </p></div>

ನಗರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಅವರು ಹೊಸ ಮತದಾರರಿಗೆ ಗುರುತಿನ ಚೀಟಿಯನ್ನು ವಿತರಿಸಿದರು

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ ನೀವು ಮತದಾನ ಮಾಡಬೇಕು. ಜೊತೆಗೆ ನಿಮ್ಮ ಸುತ್ತಮುತ್ತ ಇರುವ ಮತದಾರರನ್ನೂ ಮತ ಹಾಕುವಂತೆ ಪ್ರೇರಣೆ ನೀಡಬೇಕು ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ತಿಳಿಸಿದರು.

ADVERTISEMENT

ನಗರದಲ್ಲಿ ಗುರುವಾರ ಬಿಬಿಎಂಪಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಬಲಿಷ್ಠ ಚುನಾವಣಾ ಆಯೋಗವನ್ನು ಜನವರಿ 25, 1950 ರಂದು ರಚಿಸಲಾಯಿತು. ಇದು ಭಾರತೀಯ ಪ್ರಜಾಪ್ರಭುತ್ವಕ್ಕೆ ಮಹತ್ವದ ದಿನ. ಮತದಾರರನ್ನು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಮತ್ತು ಮತದಾನಕ್ಕೆ ಪ್ರೇರೇಪಿಸಲು ಮೀಸಲಾಗಿರುವ ದಿನ ಎಂದು ವಿವರಿಸಿದರು.

ಜಗತ್ತಿನಲ್ಲಿ ಹಲವು ಆಡಳಿತ ವ್ಯವಸ್ಥೆಗಳಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತ್ರ ಆಡಳಿತ ಅಧಿಕಾರ ಸಂಪೂರ್ಣ ಜನರ ಮೇಲಿರುತ್ತದೆ. ಮತದಾನ ಕಡ್ಡಾಯಗೊಳಿಸಬೇಕು ಎಂಬ ಚರ್ಚೆಗಳು ನಡೆದಿದ್ದವು. ಕಡ್ಡಾಯಗೊಳಿಸುವ ಬದಲು ಮತದಾರರನ್ನು ಮತದಾನಕ್ಕೆ ಪ್ರೇರೇಪಿಸುವ ಮೂಲಕ ಪ್ರಜಾತಂತ್ರವನ್ನು ಯಶಸ್ವಿಗೊಳಿಸಬೇಕು ಎಂದು ನಿರ್ಧರಿಸಲಾಗಿತ್ತು. ಜಾಗೃತ ಮತದಾರರು ಮಾತ್ರ ಈ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸಲು ಸಾಧ್ಯ ಎಂದು ತಿಳಿಸಿದರು.

ಎಲ್ಲರೂ ಜಾಗೃತ ಮತದಾರರಾಗಬೇಕು. ಮುಂದಿನ ಚುನಾವಣೆಯಲ್ಲಿ ಶೇ 100 ಮತದಾನವಾಗಬೇಕು ಎಂದು ಹೇಳಿದರು.

ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿ, ‘ಯುವ ಮತದಾರರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು, ಬುಡಕಟ್ಟು ಸಮುದಾಯದವರು ಸೇರಿದಂತೆ ಎಲ್ಲರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಎಲ್ಲ ಯುವ ಮತದಾರರು ಸ್ವಯಂಪ್ರೇರಿತವಾಗಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ‘ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಮತದಾರರ ಪಟ್ಟಿ ಪರಿಷ್ಕರಣೆ, ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವುದು ಸೇರಿದಂತೆ ಇನ್ನಿತರೆ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅಧಿಕಾರಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಪ್ರಶಂಸಿಸಲಾಗುವುದು’ ಎಂದು ಹೇಳಿದರು.

ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಕೂರ್ಮರಾವ್‌, ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್, ಚುನಾವಣಾ ವಿಭಾಗದ ವಿಶೇಷ ಆಯುಕ್ತ ರಾಮಚಂದ್ರನ್ ಭಾಗವಹಿಸಿದ್ದರು.

ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಕಲಾವಿದರು ಪುರಭವನದಲ್ಲಿ ಮತದಾನ ಜಾಗೃತಿ ಕಲಾಕೃತಿಗಳನ್ನು ರಚಿಸಿದರು

ಮತದಾನದ ಬಗ್ಗೆ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಂಗಳೂರು ಮತ್ತು ತುಮಕೂರಿನ ಕಲಾ ಶಿಕ್ಷಕರು, ವಿದ್ಯಾರ್ಥಿಗಳು ಮತದಾನ ಜಾಗೃತಿಯ ಕಲಾಕೃತಿಗಳನ್ನು ರಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.