ಕಡತ
(ಸಾಂದರ್ಭಿಕ ಚಿತ್ರ)
ಬೆಂಗಳೂರು: ನಗರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕಣೆಯು ಯಾವುದೇ ಲೋಪದೋಷಗಳಿಲ್ಲದಂತೆ ನಡೆಸಬೇಕು ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕಣೆ-2025 ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಬೆಂಗಳೂರು ಜಿಲ್ಲೆಯಾದ್ಯಂತ ಒಟ್ಟು 8,972 ಮತಗಟ್ಟೆ ಕೇಂದ್ರಗಳ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬರುವ ದೂರುಗಳಿಗೆ ಶೀಘ್ರ ಸ್ಪಂದಿಸಬೇಕು. ರಾಜಕೀಯ ಪಕ್ಷಗಳು ಕೇಳುವ ಮಾಹಿತಿಯನ್ನು ಕೂಡಲೇ ನೀಡಬೇಕು. ಯಾವುದೇ ನ್ಯೂನತೆಗಳಿಲ್ಲದಂತೆ ಪರಿಷ್ಕರಣೆ ಕಾರ್ಯವನ್ನು ನಡೆಸಲು ಸೂಚನೆ ನೀಡಿದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕಣೆಯನ್ನು ನಡೆಸುವ ಬೂತ್ ಮಟ್ಟದ ಅಧಿಕಾರಿಗಳು ರಜಾ ದಿನಗಳಲ್ಲೂ ಕೆಲಸ ಮಾಡಬೇಕು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮತ್ತು ಈ ಸಂಬಂಧ ಬೂತ್ ಮಟ್ಟದ ಏಜೆಂಟ್‌ಗಳನ್ನು ನೇಮಿಸಲು ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಕೋರಿದರು.
ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಿಶೇಷ ಸಮಗ್ರ ಪರಿಷ್ಕರಣೆ ಕುರಿತಂತೆ ಸಾಂವಿಧಾನಿಕ ನಿಯಮಗಳು, ಶಾಸನಾತ್ಮಕ ನಿಯಮಗಳು, ವಿಶೇಷ ಸಮಗ್ರ ಪರಿಷ್ಕರಣೆಯ ಇತಿಹಾಸ, ವಿಶೇಷ ಉದ್ದೇಶಿತ ಪರಿಷ್ಕರಣೆ, ವಿಶೇಷ ಸಾರಾಂಶ ಪರಿಷ್ಕರಣೆಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಶೇಷ ಶಿಬಿರ ನಡೆಸಲಾಗುವುದು. ಜೊತೆಗೆ 15 ದಿನಕ್ಕೊಮ್ಮೆ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಲಾಗುವುದು. ಅದಲ್ಲದೆ ನಾಗರಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಮಾಜಿನ ಜಾಲತಾನದಲ್ಲಿ ಕಿರು ಚಿತ್ರ, ಪೋಸ್ಟರ್ ಗಳನ್ನು ಸಿದ್ಧಪಡಿಸಲಾಗುವುದೆಂದು ಮಾಹಿತಿ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.