ADVERTISEMENT

ಮತದಾರರ ಸಮೀಕ್ಷೆ| ಠಾಣೆ ಎದುರು ಬಿಜೆಪಿ ಕಾಂಗ್ರೆಸ್ ಪ್ರತಿಭಟನೆ: ಪರಸ್ಪರ ಆರೋಪ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 19:40 IST
Last Updated 3 ಡಿಸೆಂಬರ್ 2022, 19:40 IST
   

ಬೆಂಗಳೂರು: ಮತದಾರರ ಸಮೀಕ್ಷೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಯಶವಂತಪುರ ಠಾಣೆ ಎದುರು ಶನಿವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಮಾಜಿ ಕಾರ್ಪೊರೇಟರ್ ಬಿಜೆಪಿಯ ವೆಂಕಟೇಶ್ ಹಾಗೂ ಕಾಂಗ್ರೆಸ್‌ನ
ಎಸ್‌. ಕುಸುಮಾ ನೇತೃತ್ವದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು, ಪರಸ್ಪರ ಆರೋಪ– ಪ್ರತ್ಯಾರೋಪ ಮಾಡಿ ಘೋಷಣೆ ಕೂಗಿದರು.

ಎರಡೂ ಪಕ್ಷದವರು ಠಾಣೆ ಎದುರು ಏಕಕಾಲದಲ್ಲಿ ಸೇರಿದ್ದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಿಂದ ಹೋಗುವಂತೆ ಪೊಲೀಸರು ಸೂಚಿಸಿದರೂ ಪ್ರತಿಭಟನಕಾರರು ಕ್ಯಾರೆ ಎನ್ನಲಿಲ್ಲ.

ADVERTISEMENT

‘ಯಶವಂತಪುರ ಬಿ.ಕೆ. ನಗರದ 8ನೇ ಅಡ್ಡರಸ್ತೆ ಮನೆಯೊಂದಕ್ಕೆ ಬಂದಿದ್ದ ಇಬ್ಬರು, ಮತದಾರರ ಮಾಹಿತಿ ಕಲೆಹಾಕುತ್ತಿದ್ದರು. ಆಮಿಷವೊಡ್ಡಿ ಮತದಾನ ಗುರುತಿನ ಚೀಟಿ ಪಡೆದುಕೊಳ್ಳಲು ಯತ್ನಿಸುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ಸ್ಥಳಕ್ಕೆ ಹೋಗಿ ಅವರಿಬ್ಬರನ್ನು ಹಿಡಿದುಕೊಂಡು ಪರಿಶೀಲಿಸಲಾಯಿತು. ಅವರ ಬಳಿ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ, ಸಂಸದ ಡಿ.ಕೆ. ಸುರೇಶ್ ಹಾಗೂ ಎಸ್. ಕುಸುಮಾ ಅವರ ಫೋಟೊಗಳಿದ್ದವು. ಅಕ್ರಮ ಸಮೀಕ್ಷೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಬೇಕು’ ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದರು.

ಹೆಸರು ಅಳಿಸಿದ್ದಕ್ಕೆ ಪರಿಶೀಲನೆ: ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ‘ಬಿಜೆಪಿಯವರೇ ಅಕ್ರಮವಾಗಿ ಸಮೀಕ್ಷೆ ನಡೆಸಿ, ಕಾಂಗ್ರೆಸ್‌ನ 40 ಸಾವಿರ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿ ಹಾಕಿದ್ದಾರೆ. ಅಂಥ ಮತದಾರರಿಂದ ಮಾಹಿತಿ ಪಡೆದು ಚುನಾವಣೆ ಆಯೋಗಕ್ಕೆ ದೂರು ಕೊಡಿಸಲು ಹೋಗಿದ್ದ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ’ ಎಂದು ಆರೋಪಿಸಿದರು.

‘ಮತದಾರರ ಪಟ್ಟಿ ಸಂಬಂಧ ತಕರಾರು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಹೀಗಾಗಿ, ಪೊಲೀಸರಿಗೆ ಮಾಹಿತಿ ನೀಡಿಯೇ ಪರಿಶೀಲನೆ ಪ್ರಕ್ರಿಯೆ ಆರಂಭಿಸಲಾಗಿದೆ. ಪರಿಶೀಲನೆಗೆ ಅಡ್ಡಿಪಡಿಸಿ ಹಲ್ಲೆ ಮಾಡಿರುವ ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದರು.

ಎರಡೂ ಪಕ್ಷದವರಿಂದಲೂ ಮನವಿ ಸ್ವೀಕರಿಸಿದ ಪೊಲೀಸರು, ಪ್ರತಿಭಟನಕಾರರನ್ನು ಸ್ಥಳದಿಂದ ಕಳುಹಿಸಿದರು. ಬಳಿಕವೇ ಪರಿಸ್ಥಿತಿ ತಿಳಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.