ADVERTISEMENT

ಬೆಂಗಳೂರಿನ ಮತ್ತೊಬ್ಬ ಎಎಸ್‌ಐಗೂ ಕೊರೊನಾ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 19:31 IST
Last Updated 16 ಜೂನ್ 2020, 19:31 IST
   

ಬೆಂಗಳೂರು: ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಸೋಮವಾರ ಮೃತಪಟ್ಟ ವಿ.ವಿ.ಪುರ ಸಂಚಾರ ಠಾಣೆಯ 59 ವರ್ಷದ ಸಹಾಯಕ ಸಬ್ ಇನ್‌ಸ್ಪೆಕ್ಟರೊಬ್ಬರಿಗೆ (ಎಎಸ್‌ಐ) ಕೊರೊನಾ ಸೋಂಕು ತಗುಲಿದ್ದು ಮಂಗಳವಾರ ದೃಢಪಟ್ಟಿದೆ. ಅದರ ಬೆನ್ನಲ್ಲೇ, ಅದೇ ಠಾಣೆಯ 57 ವರ್ಷದ ಮತ್ತೊಬ್ಬ ಎಎಸ್‌ಐಗೂ ಕೊರೊನಾ ಸೋಂಕು ಇರುವುದು ಪರೀಕ್ಷೆಯಿಂದ ಗೊತ್ತಾಗಿದೆ.

ರಜೆ ಮೇಲಿದ್ದರು: ಥಣಿಸಂದ್ರ ನಿವಾಸಿಯಾಗಿದ್ದ ಎಎಸ್‌ಐ, ತಮ್ಮ ನಿವಾಸದಲ್ಲಿ ಸೋಮವಾರ ದಿಢೀರ್ ಕುಸಿದು ಬಿದ್ದಿದ್ದರು. ಹೃದಯಾಘಾತ ಆಗಿರಬಹುದೆಂದು ತಿಳಿದ ಕುಟುಂಬಸ್ಥರು ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು.

ಮಾರ್ಗ ಮಧ್ಯೆಯೇ ಅವರು ಅಸುನೀಗಿದ್ದರು. ಅವರ ಗಂಟಲಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿ ಪಾಸಿಟಿವ್ ಬಂದಿದೆ.ಎಎಸ್‌ಐ ಅವರು ಸೇವೆಯಿಂದ ನಿವೃತ್ತಿಯಾಗಲು 15 ದಿನವಷ್ಟೇ ಬಾಕಿ ಇತ್ತು. ಜೂನ್ 1ರಿಂದ ಅವರು ರಜೆ ಮೇಲಿದ್ದರು. ಅವರಿಗೆ ಸೋಂಕು ತಗುಲಿದ್ದು ಹೇಗೆ ಎಂಬುದು ಗೊತ್ತಾಗಿಲ್ಲ.

ADVERTISEMENT

ಕರ್ತವ್ಯದಲ್ಲಿದ್ದ ಎಎಸ್‌ಐ: ವಿ.ವಿ.ಪುರ ಸಂಚಾರ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ 57 ವರ್ಷದ ಎಎಸ್‌ಐಗೂ ಸೋಂಕು ಇರುವುದು ದೃಢಪಟ್ಟಿದ್ದರಿಂದ, ಅವರ ಸಂಪರ್ಕದಲ್ಲಿದ್ದ ಇನ್‌ಸ್ಪೆಕ್ಟರ್ ಸೇರಿ 50 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ಈ ಎಎಸ್‌ಐಗೆ 2 ದಿನದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ, ಅವರು ಆಸ್ಪತ್ರೆಯೊಂದಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಗಂಟಲಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗಾಗಿ
ಕಳುಹಿಸಲಾಗಿತ್ತು. ಈಗಾಗಲೇ ಎಎಸ್‌ಐ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ಮಂಗಳವಾರದಿಂದಲೇ ತಾತ್ಕಾಲಿಕವಾಗಿ ಸೀಲ್‌ಡೌನ್‌ ಮಾಡಲಾಗಿದೆ.

ಪೊಲೀಸರಿಗೆ ಹೆಚ್ಚು ಸೋಂಕು ಸಾಧ್ಯತೆ: ನಿಯಂತ್ರಿತ ಪ್ರದೇಶ (ಕಂಟೈನ್‌ಮೆಂಟ್), ಸೀಲ್‌ಡೌನ್‌ ಪ್ರದೇಶ... ಹೀಗೆ ಸೋಂಕು ವ್ಯಾಪಿಸಿರುವ ಪ್ರದೇಶಗಳಲ್ಲಿ ಪೊಲೀಸರು ಹಗಲು ರಾತ್ರಿ ಭದ್ರತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುವುದಾಗಿ ಐಸಿಎಂಆರ್ ಇತ್ತೀಚೆಗಷ್ಟೇ
ಹೇಳಿದೆ.

‘ಬೆಂಗಳೂರಿನಲ್ಲಿ ಠಾಣೆ ಕರ್ತವ್ಯ, ಭದ್ರತೆ ಹಾಗೂ ಗಸ್ತು ಕರ್ತವ್ಯದಲ್ಲಿದ್ದ ಕೆಲಪೊಲೀಸರಿಗೆ ಸೋಂಕು ತಗುಲಿದೆ. ಅವರೆಲ್ಲರೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ರೋಗ ಲಕ್ಷಣವೇ ಇಲ್ಲದೇ ಎಎಸ್‌ಐ ಮೃತಪಟ್ಟಿರುವುದು ನಮಗೂ ಆಶ್ಚರ್ಯವನ್ನುಂಟು ಮಾಡಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

13 ಪೊಲೀಸರಿಗೆ ಸೋಂಕು, 420 ಮಂದಿಗೆ ಕ್ವಾರಂಟೈನ್

ನಗರದ 13 ಪೊಲೀಸರಿಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಅವರ ಜೊತೆ ಸಂಪರ್ಕದಲ್ಲಿದ್ದ 420ಕ್ಕೂ ಹೆಚ್ಚು ಸಿಬ್ಬಂದಿ ಕ್ವಾರಂಟೈನ್‌ನಲ್ಲಿ ಇದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

‘ಎರಡೂವರೆ ತಿಂಗಳು ಯಾವುದೇ ಸೋಂಕು ನಮ್ಮಲ್ಲಿ ಇರಲಿಲ್ಲ. ಲಾಕ್‌ಡೌನ್‌ ಸಡಿಲಿಕೆ ಬಳಿಕ ಜನ ದಟ್ಟಣೆ ಜಾಸ್ತಿಯಾಗಿದೆ. ಜನರ ಓಡಾಟವೂ ಹೆಚ್ಚಾಗಿದೆ. ಅಂತರ ರಾಜ್ಯ ನಡುವಿನ ಸಂಚಾರವೂ ಹೆಚ್ಚಾಗಿದೆ’ ಎಂದರು.

'ಲಾಕ್‌ಡೌನ್ ಸಡಿಲಿಕೆ ಬಳಿಕ ಆರೋಪಿಗಳ ಬಂಧನ, ನಿಯಂತ್ರಿತ ಪ್ರದೇಶದಲ್ಲಿ (ಕಂಟೈನ್‌ಮೆಂಟ್) ಭದ್ರತೆ ಕೆಲಸ ಮಾಡುವಾಗ, ಗಸ್ತು ತಿರುಗುವಾಗ ಪೊಲೀಸರಿಗೆ ಸೋಂಕು ತಗಲುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.