ವಿ.ವಿ. ಪುರ ತಿಂಡಿ ಬೀದಿಯಲ್ಲಿರುವ ಮಳಿಗೆಯೊಂದರಲ್ಲಿ ಗ್ರಾಹಕರು ತಿಂಡಿ ಖರೀದಿಸಿದರು
ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ‘ಸಿಲಿಕಾನ್ ಸಿಟಿ’ಯ ತಿಂಡಿಯ ಪ್ರಿಯರ ಅಚ್ಚುಮೆಚ್ಚಿನ ಪ್ರದೇಶಗಳಲ್ಲಿ ಒಂದಾಗಿರುವ ವಿಶ್ವೇಶ್ವರಪುರ ತಿಂಡಿ ಬೀದಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ. ದಶಕಗಳ ಇತಿಹಾಸವಿರುವ ಈ ಆಹಾರ ತಾಣದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರ ಅನುಕೂಲಕ್ಕೆ ಬೇಕಾದ ಹಲವು ಮೂಲಸೌಕರ್ಯಗಳ ಅಭಿವೃದ್ಧಿ ಭರದಿಂದ ಸಾಗಿದೆ. ಎಲ್ಲ ಕೆಲಸಗಳೂ ಪೂರ್ಣಗೊಂಡರೆ ತಿಂಡಿ ಬೀದಿ ನವ ಸ್ವರೂಪದೊಂದಿಗೆ ಕಂಗೊಳಿಸಲಿದೆ.
ಇಲ್ಲಿ ಪ್ರತಿನಿತ್ಯ ಜಾತ್ರೆಯ ವಾತಾವರಣ ನಿರ್ಮಾಣವಾಗುತ್ತದೆ. ಇದು ಹತ್ತಾರು ಬಗೆಯ ದೋಸೆಗಳು, ಚೈನೀಸ್ ಕುರುಕಲು ತಿನಿಸುಗಳು, ಬಗೆ ಬಗೆಯ ಪಾನಿಪೂರಿ, ಮಂಚೂರಿಯನ್ ರೋಲ್, ಪಾವ್ ಬಾಜಿ, ಮಿರ್ಚಿ ಬಜ್ಜಿ ಹೀಗೆ ನೂರಾರು ಬಗೆಯ ತಿಂಡಿಗಳು ಒಂದೇ ಸೂರಿನಡಿಯಲ್ಲಿ ಸಿಗುವ ತಾಣ.
ವಿ.ವಿ.ಪುರದ ಸಜ್ಜನ್ ರಾವ್ ವೃತ್ತದಿಂದ ಮಿನರ್ವ ವೃತ್ತದ ಮಾರ್ಗದಲ್ಲಿ ಎಲ್ಲಿ ನೋಡಿದರೂ ತಿಂಡಿ–ತಿನಿಸುಗಳು ರಾರಾಜಿಸುತ್ತವೆ. ಇಲ್ಲಿನ ಬಹುತೇಕ ಅಂಗಡಿ, ಬೇಕರಿಗಳು ನೂರಾರು ವರ್ಷಗಳ ಇತಿಹಾಸ ಹೊಂದಿದ್ದು, ಶುಚಿ–ರುಚಿಯಾದ ತಿಂಡಿಗೆ ಹೆಸರುವಾಸಿಯಾಗಿವೆ. ದೇಶ–ವಿದೇಶಗಳಿಂದ ಜನ ಇಲ್ಲಿನ ತಿಂಡಿ ಸವಿಯಲು ಬರುತ್ತಾರೆ.
ಸಜ್ಜನ್ ರಾವ್ ವೃತ್ತದ ಬಳಿ ಇರುವ 120 ಮೀಟರ್ ಉದ್ದದ ವಿ.ವಿ. ಪುರ ತಿಂಡಿ ಬೀದಿಗೆ ನೂರಾರು ವರ್ಷಗಳ ಇತಿಹಾಸವಿದೆ. ಪ್ರತಿನಿತ್ಯ ಸಾವಿರಾರು ಮಂದಿ ತಿಂಡಿಪೋತರು ಭೇಟಿ ನೀಡುವ ಈ ಬೀದಿಗೆ ಬಿಬಿಎಂಪಿ ಮೂಲಸೌಕರ್ಯದ ಜೊತೆಗೆ ಆಧುನಿಕ ಸ್ಪರ್ಶ ನೀಡಲು ಯೋಜನೆ ರೂಪಿಸಿದೆ. ಸಾರ್ವಜನಿಕರು ಓಡಾಡಲು ಅನುಕೂಲವಾಗುವ ಉದ್ದೇಶದಿಂದ 7 ಮೀಟರ್ ಇದ್ದ ರಸ್ತೆಯ ಅಗಲವನ್ನು 5 ಮೀಟರ್‌ಗೆ ಕಿರಿದಾಗಿಸಿದೆ. ಇದರಿಂದ 3.5 ಮೀಟರ್ ಅಗಲದ ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ತಿಂಡಿ, ತಿನಿಸು ಸವಿಯಲು ಬರುವ ಸಾರ್ವಜನಿಕರು ನಿರಾತಂಕವಾಗಿ ಓಡಾಡಲು ಅನುಕೂಲವಾಗಿದೆ.
ವಿ.ವಿ. ಪುರ ತಿಂಡಿಯಲ್ಲಿ ವಿದೇಶಿ ಪ್ರವಾಸಿಗರು ಪಾನಿಪೂರಿ ಸವಿದರು
ತಿಂಡಿ ಬೀದಿ ಮಾರ್ಗದಲ್ಲಿ ಒಟ್ಟು 40 ಮಳಿಗೆಗಳಿದ್ದು, ಪಾದಚಾರಿ ಮಾರ್ಗದಲ್ಲೂ ಪಾನಿಪೂರಿ ಸೇರಿದಂತೆ ವಿವಿಧ ಸಣ್ಣ ಪುಟ್ಟ ಗೂಡಂಗಡಿಗಳು ಇವೆ. ತಿಂಡಿ ಬೀದಿಗೆ ಮೂಲಸೌಕರ್ಯ ಕಲ್ಪಿಸಲು 2022ರಲ್ಲಿ ₹ 6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ಬಹುತೇಕ ಕಾಮಗಾರಿಗಳು ಕೊನೆಯ ಹಂತ ತಲುಪಿವೆ. ಈಗಾಗಲೇ ರಸ್ತೆ ಮತ್ತು ಪಾದಚಾರಿ ಮಾರ್ಗ ನಿರ್ಮಿಸಲಾಗಿದ್ದು, ಅಲ್ಲಲ್ಲಿ ಆಸನಗಳ ವ್ಯವಸ್ಥೆ, ಕಲ್ಲಿನ ಬೆಂಚ್‌ಗಳನ್ನು ನಿರ್ಮಿಸಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ಆರ್.ಸಿ.ಸಿ ಕಾಲುವೆ, ಎರಡೂ ಕಡೆ ಒಳಚರಂಡಿ ಪೈಪ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಆಲಂಕಾರಿಕ ಸಸಿಗಳನ್ನು ನೆಡಲಾಗಿದೆ.
ಉಳಿದಿರುವ ಕಾಮಗಾರಿಗಳು: ಹಸಿ ಕಸ/ಒಣ ಕಸವನ್ನು ಪ್ರತ್ಯೇಕವಾಗಿ ಹಾಕಲು ಕಸದ ಬುಟ್ಟಿಗಳನ್ನು ಅಳವಡಿಸಬೇಕಿದೆ. ಎಲ್ಲ ತಿಂಡಿ ಮಳಿಗೆಗಳಿಗೆ ಏಕರೂಪದ ನೆರಳಿನ ವ್ಯವಸ್ಥೆ ಕಲ್ಪಿಸುವ ಕೆಲಸವೂ ಬಾಕಿ ಉಳಿದಿದೆ.
‘ಇಲ್ಲಿ ಉತ್ತರ ಕರ್ನಾಟಕ ರೊಟ್ಟಿ ಊಟ ಚೈನೀಸ್ ಫಾಸ್ಟ್‌ಫುಡ್ ರಾಜಸ್ಥಾನಿ ಪರೋಟ ಬಗೆ ಬಗೆಯ ಪಾನಿಪೂರಿ 100ಕ್ಕೂ ಹೆಚ್ಚು ಬಗೆಯ ದೋಸೆಗಳು ಇಡ್ಲಿ ವಡಾ ಬೋಂಡಾ–ಬಜ್ಜಿ ಪನ್ನೀರಿನ ಖಾದ್ಯಗಳು ಗೋಬಿ ಮಂಚೂರಿ ಪಲಾವ್ ಉಪ್ಪಿಟ್ಟು ಬಿಸಿಬೇಳೆ ಬಾತ್ ಸೇರಿದಂತೆ ಹಲವಾರು ಖಾದ್ಯಗಳ ಮೇಳ ಪ್ರತಿದಿನ ನಡೆಯುತ್ತದೆ. ಇಲ್ಲಿನ ತಿಂಡಿಗಳಿಗೆ ಮನಸೋಲದವರೇ ಇಲ್ಲ. ಈ ವೈವಿಧ್ಯಮಯ ತಿಂಡಿಗಳನ್ನು ಸವಿಯಲು ನಿತ್ಯವೂ ಸಾವಿರಾರು ಮಂದಿ ಸಂಜೆ 4 ಗಂಟೆಯ ನಂತರ ಬರುತ್ತಾರೆ. ಇದು ಬೆಂಗಳೂರಿನ ಐತಿಹಾಸಿಕ ತಿಂಡಿ ಬೀದಿಯಾಗಿ ಪ್ರಸಿದ್ಧಿ ಪಡೆದುಕೊಂಡಿದೆ’ ಎಂದು ವ್ಯಾಪಾರಿ ಸುಹಾಸ್ ಮಾಹಿತಿ ನೀಡಿದರು. ‘ಬಿಬಿಎಂಪಿ ಈ ಭಾಗದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಿದರೆ ನಮ್ಮಂತಹ ವ್ಯಾಪಾರಿಗಳಿಗೆ ಹಾಗೂ ಇಲ್ಲಿಗೆ ಬರುವ ತಿಂಡಿ ಪ್ರಿಯರಿಗೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ತಿಂಡಿ ಬೀದಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ವಾಹನ ನಿಲುಗಡೆ ಮಾಡಲು ಅವಕಾಶ ಕಲ್ಪಿಸಬೇಕು.ನಾಗರಾಜ್ ಅಂಗಡಿ ಮಾಲೀಕ
ನಾನು ತಿಂಡಿ ಬೀದಿಗೆ ಹಲವಾರು ಬಾರಿ ಭೇಟಿ ನೀಡಿದ್ದೇನೆ. ಈಗ ಈ ಬೀದಿಯ ಸ್ವರೂಪ ಬದಲಾಗಿದೆ. ಕಡಿಲೆಕಾಯಿ ಪರಿಷೆ ಹಾಗೂ ಅವರೇಕಾಯಿ ಮೇಳದ ಸಂದರ್ಭದಲ್ಲಿ ಇಲ್ಲಿಗೆ ಸಾವಿರಾರು ಜನ ಭೇಟಿ ನೀಡುತ್ತಾರೆ. ಇಲ್ಲಿ ತಿಂಡಿಗಳು ಗುಣಮಟ್ಟದಿಂದ ಕೂಡಿದ್ದು ಕಡಿಮೆ ಬೆಲೆಗೆ ಸಿಗುತ್ತವೆ.ಸತ್ಯಾ ಗ್ರಾಹಕಿ
ನಾವು ಕಲಬುರಗಿಯವರು. ವಿ.ವಿ. ಪುರ ತಿಂಡಿ ಬೀದಿಯಲ್ಲಿ ಉತ್ತರ ಕರ್ನಾಟಕ ಸೇರಿದಂತೆ ನಾಡಿನ ಎಲ್ಲ ಭಾಗದಲ್ಲಿ ದೊರೆಯುವ ತಿಂಡಿಗಳು ಸಿಗುತ್ತವೆ. ಇಲ್ಲಿನ ತಿಂಡಿಯ ಗುಣಮಟ್ಟ ಹಾಗೂ ಬೆಲೆಯೂ ಕಡಿಮೆ ಇದೆ. ಇಲ್ಲಿನ ತಿಂಡಿ ಮಳಿಗೆಗಳು ರುಚಿ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುತ್ತವೆ.ಶೈಲಜಾ ಶ್ರೀರಾಂಪುರ
ತಿಂಡಿ ಸವಿಯುವುದಕ್ಕೆ ನಾವು ವಿ.ವಿ. ಪುರ ತಿಂಡಿ ಬೀದಿಗೆ ಬರುತ್ತಿದ್ದೇವೆ. ಈ ಹಿಂದೆ ಇಲ್ಲಿನ ಪಾದಚಾರಿ ಮಾರ್ಗ ಚಿಕ್ಕದಾಗಿತ್ತು. ಈಗ ವಿಸ್ತಾರ ಮಾಡಿರುವುದರಿಂದ ಕಲ್ಲಿನ ಬೆಂಚ್‌ಗಳನ್ನು ನಿರ್ಮಿಸಿರುವುದರಿಂದ ಇಲ್ಲಿಗೆ ಬರುವ ಸಾರ್ವಜನಿಕರು ಆರಾಮದಿಂದ ತಿಂಡಿ ಸವಿಯಲು ಅನುಕೂಲವಾಗಿದೆ.ಭಾವನಾ ಗ್ರಾಹಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.