ADVERTISEMENT

‘ನಡೆದಾಡಲು ಯೋಗ್ಯ ಬೆಂಗಳೂರು ಅಭಿಯಾನ’: ಜನ ಅರ್ಬನ್‌ ಸ್ಪೇಸ್‌ ಫೌಂಡೇಷನ್‌

ಗುಂಡಿ ಮುಚ್ಚಲು ಸೀಮಿತವಾಗದೆ, ಉತ್ತಮ ರಸ್ತೆ ನಿರ್ಮಿಸಲು ಗಮನಹರಿಸಬೇಕು: ಮನವಿ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 16:08 IST
Last Updated 9 ಸೆಪ್ಟೆಂಬರ್ 2025, 16:08 IST
Tender Sure Road
Tender Sure Road   

ಬೆಂಗಳೂರು: ‘ನಗರದ ಬಹುತೇಕ ರಸ್ತೆಗಳು ಅಸುರಕ್ಷಿತವಾಗಿದ್ದು ವಿನ್ಯಾಸ ಸರಿ ಇಲ್ಲ. ಪಾದಚಾರಿ ಮಾರ್ಗಗಳು ಹದಗೆಟ್ಟಿವೆ. ಗುಂಡಿ ಮುಚ್ಚಲು ಸೀಮಿತವಾಗದೆ, ಉತ್ತಮ ರಸ್ತೆ ನಿರ್ಮಿಸಲು ಗಮನಹರಿಸಬೇಕು’ ಎಂದು ಜನ ಅರ್ಬನ್‌ ಸ್ಪೇಸ್‌ ಫೌಂಡೇಷನ್‌ ಹೇಳಿದೆ.

ನಗರದಲ್ಲಿ ಟೆಂಡರ್‌ ಶ್ಯೂರ್‌ ರಸ್ತೆಗಳ ಬಗ್ಗೆ ಜನ ಅರ್ಬನ್‌ ಸ್ಪೇಸ್‌ ಫೌಂಡೇಷನ್‌ ನಡೆಸಿರುವ ಅಧ್ಯಯನದ ಪ್ರಕಾರ, ಪಾದಚಾರಿಗಳ ಓಡಾಟ, ಸುರಕ್ಷತೆ, ಮಹಿಳೆಯರ ಸಂಚಾರ ಮತ್ತು ನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಜನಾಗ್ರಹದ ಸಿಇಒ ಆಗಿರುವ ಫೌಂಡೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀಕಾಂತ್‌ ವಿಶ್ವನಾಥ್‌ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

‘ಸರ್ಕಾರವು ನಗರದ ರಸ್ತೆಗಳನ್ನು ರೂಪಾಂತರಿಸಲು ‘ನಡೆದಾಡಲು ಯೋಗ್ಯವಾದ ಬೆಂಗಳೂರು ಅಭಿಯಾನ’ವನ್ನು ನಡೆಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿಯವರಿಗೆ ಪತ್ರ ಬರೆಯಲಾಗಿದೆ. ನಗರದ ಅನೇಕ ಕಡೆ ಮೂಲಸೌಕರ್ಯ ಕಾಮಗಾರಿಗಳಲ್ಲಿ ಸಮನ್ವಯದ ಕೊರತೆ, ಎಲ್ಲೆಂದರಲ್ಲಿ, ಪ್ರವಾಹದ ಸ್ಥಿತಿ ಉಂಟಾಗಿದ್ದು, ಮಹಿಳೆಯರು, ಮಕ್ಕಳು, ವೃದ್ಧರು ಸುರಕ್ಷಿತವಾಗಿ ಓಡಾಡಲು ಸಾಧ್ಯವಿಲ್ಲದಂತಾಗಿದೆ ಎಂಬುದನ್ನು ಅವರಿಗೆ ವಿವರಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ನಗರದಲ್ಲಿ ಒಟ್ಟು 13 ಸಾವಿರ ಕಿ.ಮೀ ಉದ್ದದ  ರಸ್ತೆಗಳಲ್ಲಿ 150 ಕಿ.ಮೀ.ನಷ್ಟಿರುವ ಟೆಂಡರ್‌ ಶ್ಯೂರ್ ರಸ್ತೆಗಳು ಉತ್ತಮ ಸೌಲಭ್ಯಗಳನ್ನು ಹೊಂದಿವೆ. ಈ ರಸ್ತೆಗಳಲ್ಲಿ ಸಮಸ್ಯೆಗಳು ಕಡಿಮೆ. ಹೀಗಾಗಿ, ನಾಗರಿಕರಿಗೆ ಯೋಗ್ಯವಾದ ರಸ್ತೆಗಳನ್ನು ರೂಪಿಸಲು ಯುದ್ಧೋಪಾದಿಯಲ್ಲಿ ಕಾಮಗಾರಿ ನಡೆಸಬೇಕು. ಪ್ರತಿವರ್ಷ 1,500 ಕಿ.ಮೀ ಉದ್ದದ ರಸ್ತೆಯನ್ನು ಟೆಂಡರ್ ಶ್ಯೂರ್ ರಸ್ತೆಗಳನ್ನಾಗಿ ಅಭಿವೃದ್ಧಿಪಡಿಸಬೇಕು. ಹೀಗಾದರೆ, ಮುಂದಿನ ಹತ್ತು ವರ್ಷದಲ್ಲಿ ನಗರ ಶೇ 100ರಷ್ಟು ಯೋಗ್ಯ ರಸ್ತೆಗಳನ್ನು ಹೊಂದುತ್ತದೆ’ ಎಂದು ಜನ ಅರ್ಬನ್‌ ಸ್ಪೇಸ್‌ ಫೌಂಡೇಷನ್‌ನ ಯೋಜನಾ ನಿರ್ದೇಶಕಿ ನಿತ್ಯಾ ರಮೇಶ್‌ ಹೇಳಿದರು.

‘ಇತರೆ ರಸ್ತೆಗಳಿಗಿಂತ ಶೇ 228ರಷ್ಟು ಹೆಚ್ಚು ಪ್ರಮಾಣದಲ್ಲಿ ಟೆಂಡರ್‌ ಶ್ಯೂರ್ ರಸ್ತೆಗಳನ್ನು ಪಾದಚಾರಿಗಳು ಬಳಸುತ್ತಾರೆ. ಇದರಲ್ಲಿ ಶೇ 117ರಷ್ಟು ಮಹಿಳೆಯರಿದ್ದಾರೆ. ಟೆಂಡರ್ ಶ್ಯೂರ್ ರಸ್ತೆಗಳಲ್ಲಿ ನಡಿಗೆಗೆ ಉತ್ತಮ ವ್ಯವಸ್ಥೆ ಇದೆ ಎಂದು ಶೇ 90ರಷ್ಟು ನಾಗರಿಕರು ಹೇಳಿದ್ದಾರೆ.  ಶೇ 74ರಷ್ಟು ಮಂದಿ ಟೆಂಡರ್ ಶ್ಯೂರ್ ರಸ್ತೆಗಳು ವಾಹನ ಸಂಚಾರಕ್ಕೆ ಉತ್ತಮವಾಗಿವೆ ಎಂದು ಹೇಳಿದ್ದು, ಶೇ 20ರಷ್ಟು ಮಂದಿ ಮಾತ್ರ ಇತರೆ ರಸ್ತೆಗಳು ಚೆನ್ನಾಗಿವೆ ಎಂದಿದ್ದಾರೆ’ ಎಂದು ವರದಿಯ ಮಾಹಿತಿಯನ್ನು ನೀಡಿದರು.

ಅಭಿಯಾನಕ್ಕೆ ಜನ ಅರ್ಬನ್‌ ಸ್ಪೇಸ್‌ ಸಲಹೆಗಳು:

* ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಕೇಂದ್ರಿತ ಕ್ರಿಯಾಯೋಜನೆ ಜೊತೆಗೆ ಸಂಪರ್ಕ ರಸ್ತೆಗಳಿಗೂ ಯೋಜನೆ ರೂಪಿಸಬೇಕು

* 60 ಕಿ.ಮೀ ಉದ್ದದ ಹೊರ ವರ್ತುಲ ರಸ್ತೆಯನ್ನು ಟೆಂಡರ್‌ ಶ್ಯೂರ್‌ ರಸ್ತೆಯ ವಿನ್ಯಾಸದಂತೆ ಪಾದಚಾರಿ ಮಾರ್ಗ ವಾಹನ ಸಂಚಾರ ಸುರಕ್ಷಿತ–ಪರಿಣಾಮಕಾರಿಯಾದ ಮಳೆ ನೀರು ಹರಿಸುವಿಕೆ ವ್ಯವಸ್ಥೆಯ ಜನಸ್ನೇಹಿ ಕಾರಿಡಾರ್ ಆಗಿ ಪರಿವರ್ತಿಸಬೇಕು

* ನಗರದ ಎಲ್ಲ ರಸ್ತೆಗಳ ಅಭಿವೃದ್ಧಿಯಲ್ಲಿ ಟೆಂಡರ್‌ ಶ್ಯೂರ್‌ ಮಾರ್ಗಸೂಚಿಗಳನ್ನೇ ಅಳವಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಬೇಕು

* ರಸ್ತೆಗಳ ಕಾರ್ಯಾಚರಣೆ ನಿರ್ವಹಣೆಯಲ್ಲಿ ಎಂಜಿನಿಯರ್‌ಗಳ ಜೊತೆಗೆ ನಗರ ವಿನ್ಯಾಸಕರು ಯೋಜಕರು ವಲಯ ತಜ್ಞರನ್ನು ನೇಮಿಸಬೇಕು

* ರಸ್ತೆ ಕಾಮಗಾರಿಯ ಅನುಷ್ಠಾನವನ್ನು ಸಂಘಟಿಸಲು ಬಿ–ಸ್ಮೈಲ್‌ನಲ್ಲಿ ಪ್ರತ್ಯೇಕ ತಾಂತ್ರಿಕ ತಂಡ ಸ್ಥಾಪಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.