ADVERTISEMENT

ಅಬ್ಬರದ ಮಳೆ: ಹಲವೆಡೆ ಗೋಡೆ ಕುಸಿತ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 20:33 IST
Last Updated 11 ಅಕ್ಟೋಬರ್ 2021, 20:33 IST
ಮೆಜೆಸ್ಟಿಕ್‌ನಲ್ಲಿ ರಸ್ತೆಗೆ ಕುಸಿದು ಬಿದ್ದಿರುವ ತಡೆಗೋಡೆ –ಪ್ರಜಾವಾಣಿ ಚಿತ್ರ
ಮೆಜೆಸ್ಟಿಕ್‌ನಲ್ಲಿ ರಸ್ತೆಗೆ ಕುಸಿದು ಬಿದ್ದಿರುವ ತಡೆಗೋಡೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಸೋಮವಾರವೂ ಧಾರಾಕಾರವಾಗಿ ಮಳೆ ಸುರಿದಿದ್ದು, ಮೂರು ಕಡೆ ಗೋಡೆ ಕುಸಿದು ಆತಂಕ ಸೃಷ್ಟಿಯಾಗಿದೆ.

ಇಂದಿರಾನಗರದಲ್ಲಿ ಸೋಮವಾರ ಮಿಲಿಟರಿ ಕಾಂಪೌಂಡ್ ಕುಸಿದು 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಬೆಳಗಿನ ಜಾವ ಗೋಡೆ ಕುಸಿದಿರುವುದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಳೆದ ವರ್ಷವೂ ಇದೇ ಜಾಗದಲ್ಲಿ ಮಹಿಳೆ ಮೇಲೆ ಗೋಡೆ ಕುಸಿದು ಬಿದ್ದಿತ್ತು. ಆಗಾಗ ಈ ರೀತಿಯ ತೊಂದರೆ ಆಗುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಶೇಷಾದ್ರಿಪುರದಿಂದ ಮೆಜೆಸ್ಟಿಕ್‌ಗೆ ತೆರಳುವ ಮುಖ್ಯ ರಸ್ತೆಯ ಪಕ್ಕದಲ್ಲಿ ದೊಡ್ಡ ಗೋಡೆಯೊಂದು ಕುಸಿದು ಆತಂಕ ಹೆಚ್ಚಿಸಿದೆ. ಪಕ್ಕದಲ್ಲೇ ರೈಲ್ವೆ ಮೇಲ್ಸೇತುವೆ ಹಾದು ಹೋಗಿದ್ದು, ಗೋಡೆಗೆ ಹೊಂದಿಕೊಂಡೇ ಇರುವ ಮನೆ ಕುಸಿಯುವ ಭಯದಲ್ಲಿ ನಿವಾಸಿಗಳಿದ್ದಾರೆ.

ADVERTISEMENT

‘ಈ ಹಿಂದೆಯೂ ಮನೆಯ ಒಂದು ಮೂಲೆ ಕುಸಿದಿತ್ತು. ಈಗ ಮತ್ತೊಮ್ಮೆ ಗೋಡೆ ಕುಸಿದಿದೆ. ಸದ್ಯ ಮನೆಯಿಂದ ಖಾಲಿ ಮಾಡಿಸಿ‌ ಅಧಿಕಾರಿಗಳು ತೆರಳಿದ್ದಾರೆ. ಮನೆ‌ ಒಳಗೆ ಹೋಗದೆ‌ ಹೊರಗೆ ನಿಂತಿದ್ದೇವೆ. ಎಲ್ಲಿಗೆ ಹೋಗಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಮನೆಯ ಮಾಲೀಕರಾದ ವಿಜಯಮ್ಮ ಕಣ್ಣೀರಿಟ್ಟರು.

‘ಗೋಡೆ ಬಿದ್ದ ಸಂದರ್ಭದಲ್ಲಿ ಕೆಳಗಿನ ರಸ್ತೆಯಲ್ಲಿ ಯಾವುದೇ ವಾಹನ ಇರಲಿಲ್ಲ. ಹೀಗಾಗಿ, ಯಾವುದೇ ಹಾನಿಯಾಗಿಲ್ಲ. ಮೇಲ್ಭಾಗದಲ್ಲಿನ ನಾಲ್ಕು ಮನೆಗಳಲ್ಲಿನ ಜನರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

‘50 ವರ್ಷಗಳಷ್ಟು ಹಳೆಯದಾದ ಕಲ್ಲಿನ ಗೋಡೆ ಆಕಸ್ಮಿಕವಾಗಿ ಕುಸಿದಿದೆ. ರೈಲ್ವೆ ಮಾರ್ಗದ ಬಳಿ ಗಟ್ಟಿಯಾಗಿದ್ದು, ಯಾವುದೇ ತೊಂದರೆ ಇಲ್ಲ. ಬಿದ್ದಿರುವ ಗೋಡೆಯನ್ನು ತಾತ್ಕಾಲಿಕವಾಗಿ ಮರಳು ಮೂಟೆಗಳಿಂದ ಭದ್ರಪಡಿಸಲಾಗುತ್ತಿದೆ’ ಎಂದು ಪಶ್ಚಿಮ ವಲಯದ ಕಾರ್ಯಪಾಲಕ ಎಂಜಿನಿಯರ್ ಮಾರ್ಕಂಡೇಯ ಹೇಳಿದರು.

ಬೊಮ್ಮನಹಳ್ಳಿಯ ಕೋಡಿಚಿಕ್ಕನಹಳ್ಳಿ ಬಳಿ ಅಪಾರ್ಟ್‌ಮೆಂಟ್ ಪಕ್ಕದ ತಡೆಗೋಡೆ ಭಾನುವಾರ ರಾತ್ರಿ ಕುಸಿದಿದೆ. ಕಟ್ಟಡದ ಪಿಲ್ಲರ್ ಮೇಲೆಯೇ ಗೋಡೆ ಬಿದ್ದಿದ್ದು, ಸ್ಥಳಕ್ಕೆ ಬಿಬಿಎಂಪಿ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಡಬಿಡದೆ ಸುರಿದ ಮಳೆ

ನಗರದೆಲ್ಲೆಡೆ ಬೆಳಿಗ್ಗೆಯಿಂದ ತುಂತುರು ಮಳೆ ಸುರಿಯುತ್ತಿತ್ತು. ಸಂಜೆ 6ರ ವೇಳೆಗೆ ಗುಡುಗು ಸಹಿತ ಜೋರಾದ ಮಳೆ ಸತತ ಸುರಿಯಿತು.

ಶಿವಾಜಿನಗರ, ಇಂದಿರಾನಗರ,ಬಸವೇಶ್ವರನಗರ, ರಾಜಾಜಿನಗರದ, ಹಲಸೂರು, ಮಲ್ಲೇಶ್ವರ, ವಿಜಯನಗರ, ಯಶವಂತಪುರ, ಪೀಣ್ಯ, ಮಹಾಲಕ್ಷ್ಮಿ ಲೇಔಟ್, ಸಂಪಂಗಿರಾಮನಗರ, ನಾಗರಬಾವಿ, ಕೆಂಗೇರಿ, ರಾಜರಾಜೇಶ್ವರಿನಗರ, ಅನ್ನಪೂರ್ಣೇಶ್ವರಿನಗರ, ಬನಶಂಕರಿ, ಆರ್‌.ಟಿ.ನಗರ, ಹೆಬ್ಬಾಳ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾರಿ ಮಳೆ ಸುರಿಯಿತು.

ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಭಾರಿ ಮಳೆಯಿಂದ ರಸ್ತೆಯಲ್ಲಿ ಹೊಳೆಯಂತೆ ನೀರು ಹರಿಯಿತು. ಮುಂದಕ್ಕೆ ಹೋಗಲು ಸಾಧ್ಯವಾಗದೆ ಕಾರುಗಳು ಸಾಲುಗಟ್ಟಿ ನಿಂತಿದ್ದವು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಭಾರಿ ಮಳೆ

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತಲು ಒಂದು ಗಂಟೆ ಕಾಲ ಸುರಿದ ಭಾರಿ ಮಳೆಯಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು. ವಿಮಾನ ನಿಲ್ದಾಣದ ಟರ್ಮಿನಲ್‌ಗಳಿಗೆ ನೀರು ನುಗ್ಗಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.

ಟರ್ಮಿನಲ್ ಮುಂಭಾಗದಲ್ಲಿ ಸುಮಾರು ಎರಡು ಅಡಿಗೂ ಅಧಿಕ ನೀರು ನಿಂತಿದ್ದರಿಂದ ವಿವಿಧ ಕಡೆಗಳಿಂದ ಬರುವ ಪ್ರಯಾಣಿಕರು ಪರದಾಡುವ ಸ್ಥಿತಿ ಇತ್ತು. ಟರ್ಮಿನಲ್ ಮುಂಭಾಗದ ರಸ್ತೆಗಳು ಅಕ್ಷರಶಃ ಕೆರೆಯಂತಾಗಿತ್ತು.

ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿ ದಸರಾ ಅಂಗವಾಗಿ ಮಾರಾಟ ಮಾಡಲು ತಂದಿದ್ದ ಬೂದುಕುಂಬಳಕಾಯಿ ಸೇರಿದಂತೆ ತರಕಾರಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.