ADVERTISEMENT

ಮಾರ್ಚ್‌ ಮೊದಲ ಶನಿವಾರ ಕೆಲವೇ ಕಡೆ ವಾರ್ಡ್‌ ಸಭೆ

ಕುಡಿಯುವ ನೀರು, ಉದ್ಯಾನ ಸುರಕ್ಷತೆ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:21 IST
Last Updated 5 ಮಾರ್ಚ್ 2019, 19:21 IST
ಶಾಂತಿನಗರ ವಾರ್ಡ್‌ ಸಮಿತಿ ಸಭೆಯು ಪಾಲಿಕೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಸೌಮ್ಯಾ ನೇತೃತ್ವದಲ್ಲಿ ನಡೆಯಿತು.
ಶಾಂತಿನಗರ ವಾರ್ಡ್‌ ಸಮಿತಿ ಸಭೆಯು ಪಾಲಿಕೆಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಪಿ.ಸೌಮ್ಯಾ ನೇತೃತ್ವದಲ್ಲಿ ನಡೆಯಿತು.   

ಬೆಂಗಳೂರು: ತಿಂಗಳ ಮೊದಲ ಶನಿವಾರ ವಾರ್ಡ್‌ ಸಮಿತಿ ಸಭೆಗಳನ್ನು ತಪ್ಪದೇ ನಡೆಸಬೇಕು ಎಂಬ ಬಿಬಿಎಂಪಿ ನಿರ್ಣಯಕ್ಕೆ ಪಾಲಿಕೆ ಸದಸ್ಯರೇ ಬೆಲೆ ನೀಡುತ್ತಿಲ್ಲ. ಮಾರ್ಚ್‌ ತಿಂಗಳ ಮೊದಲ ಶನಿವಾರವೂ ಬಹುತೇಕ ವಾರ್ಡ್‌ಗಳಲ್ಲಿ ವಾರ್ಡ್‌ ಸಮಿತಿ ಸಭೆ ನಡೆದಿಲ್ಲ.

ಸಭೆ ನಡೆಸದೆ ಇರುವ ಬಗ್ಗೆ ಸಮಿತಿಯ ಅಧ್ಯಕ್ಷರಾಗಿರುವ ಪಾಲಿಕೆ ಸದಸ್ಯರು, ಅಧಿಕಾರಿಗಳು ಲಭ್ಯ ಇರಲಿಲ್ಲ, ಕಳೆ ತಿಂಗಳ ಸಭೆ ವಿಳಂಬವಾಗಿದ್ದರಿಂದ ಈ ಬಾರಿಯೂ ಸ್ವಲ್ಪ ತಡವಾಗಿ ಸಭೆಯನ್ನು ಆಯೋಜಿಸುತ್ತಿದ್ದೇವೆ... ಮುಂತಾದ ಸಬೂಬುಗಳನ್ನು ಹೇಳಿದ್ದಾರೆ.

ಕೆಲವೇ ವಾರ್ಡ್‌ ಸಮಿತಿಗಳು ಮಾತ್ರ ನಿಗದಿತ ವೇಳಾಪಟ್ಟಿಯಂತೆ ಸಭೆ ನಡೆಸಿವೆ. ಬೇಸಿಗೆ ಸಮೀಪಿಸುತ್ತಿರುವಂತೆಯೇ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಈ ಸಭೆಗಳಲ್ಲಿ ಚರ್ಚೆ ನಡೆದಿದೆ.

ADVERTISEMENT

ಇತ್ತೀಚೆಗೆ ಬಾಣಸವಾಡಿ ವಾರ್ಡ್‌ನ ರಾಜ್‌ಕುಮಾರ್‌ ಪಾರ್ಕ್‌ನಲ್ಲಿ ವಿದ್ಯುತ್‌ ಸ್ಪರ್ಶದಿಂದ ಬಾಲಕ ಉದಯ್‌ ಕುಮಾರ್‌ ಮೃತಪಟ್ಟ ಘಟನೆ ಬಗ್ಗೆಯೂ ಕೆಲವು ಸಭೆಗಳಲ್ಲಿ ಪ್ರಸ್ತಾಪವಾಗಿದೆ. ‘ಬೇಸಿಗೆ ರಜೆ ಸಮೀಪಿಸುತ್ತಿದೆ. ರಜೆ ವೇಳೆ ಉದ್ಯಾನಗಳಲ್ಲಿ ಮಕ್ಕಳು ಆಡುತ್ತಾರೆ. ಹಾಗಾಗಿ ತಮ್ಮ ವಾರ್ಡ್‌ ವ್ಯಾಪ್ತಿಯ ಉದ್ಯಾನಗಳ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬೇಕು’ ಎಂದು ಅನೇಕ ಸದಸ್ಯರು ಸಲಹೆ ನೀಡಿದ್ದಾರೆ.

‘ತಿಂಗಳ ಮೊದಲ ಶನಿವಾರ ವಾರ್ಡ್‌ ಸಮಿತಿ ಸಭೆ ನಡೆಸುವ ಬಗ್ಗೆ ಪಾಲಿಕೆ ಕೌನ್ಸಿಲ್‌ ನಿರ್ಣಯ ಕೈಗೊಂಡ ಬಳಿಕ ಕೆಲವು ವಾರ್ಡ್‌ಗಳು ಅದೇ ದಿನ ತಪ್ಪದೇ ಸಭೆ ನಡೆಸುತ್ತಿವೆ. ಮಾರ್ಚ್‌ ತಿಂಗಳಲ್ಲಿ ಇದುವರೆಗೆ ಸುಮಾರು 50 ವಾರ್ಡ್‌ಗಳಲ್ಲಿ ಸಭೆ ನಡೆದಿದೆ. ಈ ವರ್ಷದ ಜನವರಿ ಹಾಗೂ ಫೆಬ್ರುವರಿಯಲ್ಲಿ 80ಕ್ಕೂ ಅಧಿಕ ವಾರ್ಡ್‌ಗಳಲ್ಲಿ ಸಭೆ ನಡೆದಿದ್ದವು. ಈ ತಿಂಗಳ ಅಂತ್ಯದೊಳಗೆ ಇದಕ್ಕಿಂತಲೂ ಹೆಚ್ಚು ವಾರ್ಡ್‌ಗಳಲ್ಲಿ ಸಭೆ ನಡೆಯಬಹುದು ಎಂಬ ವಿಶ್ವಾಸ ಇದೆ’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಶ್ರೀನಿವಾಸ ಅಲವಿಲ್ಲಿತಿಳಿಸಿದರು.

‘ಅನೇಕ ಸಮಕಾಲೀನ ಸಮಸ್ಯೆಗಳ ಬಗ್ಗೆ ಸಭೆಗಳಲ್ಲಿ ಉತ್ತಮ ಚರ್ಚೆಗಳಾಗಿವೆ. ಅನೇಕ ಕಡೆ ಸ್ಥಳೀಯರು ಉತ್ಸಾಹದಿಂದ ಸಭೆಯಲ್ಲಿ ಭಾಗವಹಿಸಿದ್ದಾರೆ’ ಎಂದರು.

‘ನಮ್ಮ ವಾರ್ಡ್‌ನಲ್ಲಿ ಕಸ ಸಾಗಿಸುವ ಕಾಂಪ್ಯಾಕ್ಟರ್‌ ಪದೇ ಪದೇ ಕೆಟ್ಟು ಹೋಗುತ್ತಿದೆ. ಇದರಿಂದ ಕಸ ವಿಲೇವಾರಿಗೆ ಸಮಸ್ಯೆ ಆಗುತ್ತಿದೆ. ಹೊಸ ಕಾಂಪ್ಯಾಕ್ಟರ್‌ ಒದಗಿಸುವಂತೆ ನಿರ್ಣಯ ಕೈಗೊಂಡಿದ್ದೇವೆ’ ಎಂದು ಗಾಯತ್ರಿನಗರ ವಾರ್ಡ್‌ನ ಚಂದ್ರಕಲಾ ಗಿರೀಶ್‌ ಲಕ್ಕಣ್ಣ ತಿಳಿಸಿದರು.

‘ನಮ್ಮಲ್ಲಿ ನೀರಿನ ಸಮಸ್ಯೆ ಇದೆ. ಈ ಬಗ್ಗೆ ಚರ್ಚೆಯಾಯಿತು’ ಎಂದು ಕೋನೇನ ಅಗ್ರಹಾರ ವಾರ್ಡ್‌ನ ಎಂ.ಚಂದ್ರಪ್ಪ ರೆಡ್ಡಿ ತಿಳಿಸಿದರು.

ನಿರ್ಣಯ ಮಾಹಿತಿ ಪ್ರಕಟಿಸಲು ಮೀನಮೇಷ’

‘ವಾರ್ಡ್‌ ಸಮಿತಿ ಸಭೆ ನಡೆದ ಏಳು ದಿನಗಳ ಒಳಗೆ ಅದರ ನಿರ್ಣಯಗಳನ್ನು ಪಾಲಿಕೆ ವೆಬ್‌ಸೈಟ್‌ನಲ್ಲಿ (http://bbmp.gov.in) ಅಪ್‌ಲೋಡ್‌ ಮಾಡುತ್ತೇವೆ’ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರು ಭರವಸೆ ನೀಡಿದ್ದರು. ವಾರ್ಡ್‌ ಸಮಿತಿಗಳನ್ನು ಬಲಪಡಿಸುವ ಕುರಿತು ‘ಪ್ರಜಾವಾಣಿ’ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಸಂವಾದದಲ್ಲೂ ಇದೇ ಮತನ್ನು ಪುನರುಚ್ಚರಿಸಿದ್ದರು.

ಆದರೆ, ವಾರ್ಡ್‌ ಸಮಿತಿ ಸಭೆಗಳ ನಿರ್ಣಯಗಳು ಸರಿಯಾಗಿ ಪಾಲಿಕೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಆಗುತ್ತಿಲ್ಲ. ಕೆಲವೇ ಕೆಲವು ವಾರ್ಡ್‌ಗಳ ಮಾಹಿತಿ ಮಾತ್ರ ವೆಬ್‌ಸೈಟ್‌ನಲ್ಲಿ ಲಭ್ಯ.

‘ನಾನು ಈಗಾಗಲೇ ವಾರ್ಡ್‌ ಸಮಿತಿ ಸಭೆಯ ನಡಾವಳಿಯನ್ನು ಕಳುಹಿಸಿಕೊಡುವಂತೆ ವಾರ್ಡ್‌ ಸಮಿತಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದೇನೆ. ಅವರಿಂದ ಮಾಹಿತಿ ತರಿಸಿಕೊಂಡು ಪಾಲಿಕೆ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡುವಂತೆ ಸೂಚನೆ ನೀಡಿದ್ದೇನೆ. ಆದರೂ ಕೆಲವರು ಇದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಕಾರಣ ಕೇಳಿ ನೋಟಿಸ್‌ ನೀಡುತ್ತೇನೆ’ ಎಂದು ಆಯುಕ್ತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.