ADVERTISEMENT

‘ವಾರ್ಡ್ ಮರುವಿಂಗಡಣೆ: ಚುನಾವಣೆ ವರ್ಷಗಟ್ಟಲೆ ವಿಳಂಬ ಸಾಧ್ಯತೆ’

ಹೈಕೋರ್ಟ್‌ಗೆ ರಾಜ್ಯ ಚುನಾವಣಾ ಆಯೋಗ ಅಭಿಪ್ರಾಯ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 21:03 IST
Last Updated 12 ಅಕ್ಟೋಬರ್ 2020, 21:03 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ ಹೆಚ್ಚಳ ಮತ್ತು ಮರುವಿಂಗಡಣೆ ಪ್ರಕ್ರಿಯೆ ಆರಂಭಿಸಿದರೆ ಚುನಾವಣೆ ನಡೆಸುವುದು ಒಂದು ವರ್ಷ ವಿಳಂಬವಾಗುವ ಸಾಧ್ಯತೆ ಇದೆ ಎಂದು ರಾಜ್ಯ ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ.

‘ಕಾಯ್ದೆಯ ತಿದ್ದುಪಡಿಗಿಂತಲೂ ಸಕಾಲಕ್ಕೆ ಚುನಾವಣೆ ನಡೆಸಬೇಕು ಎಂಬ ಸಾಂವಿಧಾನಿಕ ಆಶಯ ಉಳಿಸುವುದು ಮುಖ್ಯವಾಗುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯ ತಿದ್ದುಪಡಿ ಸುಗ್ರೀವಾಜ್ಞೆಯನ್ನು ಬದಿಗಿಟ್ಟು ಚುನಾವಣೆ ನಡೆಸಬೇಕು ಎಂದು 1999ರಲ್ಲಿ ಹೈಕೋರ್ಟ್‌ ಆದೇಶ ನೀಡಿತ್ತು’ ಎಂದು ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ಉಲ್ಲೇಖಿಸಿದರು.

‘ವಿಧಾನಸಭಾ ವ್ಯಾಪ್ತಿಯೊಳಗೆ ವಾರ್ಡ್‌ಗಳು ಬರುವಂತೆ ನೋಡಿಕೊಂಡು ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವ ಸಂಬಂಧ ಪ್ರಮುಖ ಬದಲಾವಣೆಯನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಈ ವಿಷಯವನ್ನು ಪರಿಹರಿಸಲು ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಮುಂದುವರಿಯುವಂತೆ ಆಯೋಗಕ್ಕೂ ಮನವಿ ಮಾಡಲಾಗಿದೆ’ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವಡಗಿ ಅವರು ಈ ಹಿಂದಿನ ವಿಚಾರಣೆ ವೇಳೆ ವಿವರಣೆ ಸಲ್ಲಿಸಿದ್ದರು.

ADVERTISEMENT

‘ಬಿಬಿಎಂಪಿಯಲ್ಲಿ ಈಗಾಗಲೇ ಚುನಾಯಿತ ಪ್ರತಿನಿಧಿಗಳಿಲ್ಲ. 2021ನೇ ವರ್ಷದಲ್ಲಿ ಜನಗಣತಿ ನಡೆಯಲಿದೆ. ಇದರ ನಡುವೆ ಮರುವಿಂಗಡಣೆ ಪ್ರಕ್ರಿಯೆ ಆರಂಭವಾದರೆ ಇನ್ನೂ ಎರಡು ವರ್ಷ ಚುನಾವಣೆ ನಡೆಯುವುದು ಅನುಮಾನ’ ಎಂದು ಇತರೆ ಅರ್ಜಿದಾರರ ಪರ ವಕೀಲ ರವಿವರ್ಮಕುಮಾರ್ ಹೇಳಿದರು.

ಈ ಸಂಬಂಧ ಮಾರ್ಪಡಿಸಿದ ಅರ್ಜಿ ಸಲ್ಲಿಕೆಗೆ ಕೇಳಿದ ಅನುಮತಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೀಡಿದರು. ವಿಚಾರಣೆಯನ್ನು ಅ.20ಕ್ಕೆ ಮುಂದೂಡಿದರು.

ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ವಿಷಯದಲ್ಲಿ ಕೋವಿಡ್ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಆತಂಕ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಪೀಠ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.