ADVERTISEMENT

ಕನ್ನಹಳ್ಳಿ, ಸೀಗೇಹಳ್ಳಿಯಲ್ಲಿ ಕಸದಿಂದ ವಿದ್ಯುತ್‌

ಘಟಕ ಸ್ಥಾಪನೆಗೆ ಸತಾರಾಂ ಕಂಪನಿ ಒಲವು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 18:49 IST
Last Updated 13 ನವೆಂಬರ್ 2018, 18:49 IST

ಬೆಂಗಳೂರು: ಕನ್ನಹಳ್ಳಿ ಹಾಗೂ ಸೀಗೇಹಳ್ಳಿಯ ಕಸ ವಿಲೇವಾರಿ ಘಟಕಗಳಲ್ಲಿ ಪ್ರಾಯೋಗಿಕವಾಗಿ ಕಸದಿಂದ ವಿದ್ಯುತ್‌ ತಯಾರಿಸುವ ಘಟಕ ಸ್ಥಾಪಿಸಲು ಸತಾರೆಂ ಕಂಪನಿಗೆ ಅನುಮತಿ ನೀಡಲು ಸರ್ಕಾರ ಮುಂದಾಗಿದೆ.

ಬೆಂಗಳೂರು ಅಭಿವೃದ್ಧಿ ಸಚಿವ ಜಿ. ಪರಮೇಶ್ವರ ಅವರು ಈ ಕುರಿತು ಕಂಪನಿಯ ಪ್ರಮುಖರ ಜೊತೆ ಮಂಗಳವಾರ ಸಮಾಲೋಚನೆ ನಡೆಸಿದರು.

ಯುರೋಪ್, ಬ್ರೆಜಿಲ್‌ನ ನಗರಗಳೂ ಸೇರಿದಂತೆ ಒಟ್ಟು 14 ಕಡೆ ಕಸದಿಂದ ವಿದ್ಯುತ್‌ ಉತ್ಪಾದಿಸುವ ಘಟಕಗಳನ್ನು ಸತಾರೆಂ ಕಂಪನಿ ಹೊಂದಿದೆ. ಚೆನ್ನೈನಲ್ಲೂ ಕಂಪನಿಯ ಘಟಕವೊಂದು ಕಾರ್ಯಾಚರಿಸುತ್ತಿದೆ. ಇದೇ ಮಾದರಿಯಲ್ಲಿನೆಲಮಂಗಲದಲ್ಲಿ ಘಟಕವನ್ನು ಆರಂಭಿಸುವ ಕುರಿತು ಕಂಪನಿ ಪ್ರತಿನಿಧಿಗಳು ಪ್ರಾತ್ಯಕ್ಷಿಕೆ ನೀಡಿದರು. ಇದನ್ನು ವೀಕ್ಷಿಸಿದಪರಮೇಶ್ವರ, ಈ ಘಟಕ ಸ್ಥಾಪನೆಯಿಂದಾಗುವ ಪ್ರಯೋಜನಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ADVERTISEMENT

ಹೊಸ ಘಟಕ ಸ್ಥಾಪನೆಗೆ ಹೆಚ್ಚು‌ ಸಮಯ ತಗಲುತ್ತದೆ. ಇದರ ನಿರ್ವಹಣೆಯ ಗುಣಮಟ್ಟದ ಬಗ್ಗೆ ತಿಳಿಯುವುದಕ್ಕೂ ಸಮಯ ಬೇಕಾಗುತ್ತದೆ. ಹಾಗಾಗಿ ಸೀಗೇಹಳ್ಳಿ ಹಾಗೂ ಕನ್ನಹಳ್ಳಿಗಳಲ್ಲಿರುವ ಕಸ ವಿಲೇವಾರಿ ಘಟಕಗಳ ಬಳಿಯೇ ಪ್ರಾಯೋಗಿಕವಾಗಿ ಘಟಕಗಳನ್ನು ಸ್ಥಾಪಿಸುವುದು ಸೂಕ್ತ ಎಂದು ಸಲಹೆ ನೀಡಿದರು.

ಈ ಘಟಕಗಳ ಸ್ಥಾಪನೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕಿದೆ. ಈ ಸಲುವಾಗಿ ಪ್ರಸ್ತಾವ ಸಿದ್ಧಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ಆಯುಕ್ತ ಮೋಹನ್ ರಾಜ್ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಆಯುಕ್ತ ರಾಕೇಶ್‌ ಸಿಂಗ್‌ ಸಭೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.