ADVERTISEMENT

ಹಸಿ ಕಸ ವಿಲೇ ಟೆಂಡರ್‌ ಜಾರಿ ಇಲ್ಲ ಏಕೆ?

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 10:17 IST
Last Updated 1 ನವೆಂಬರ್ 2019, 10:17 IST
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆಸಲಾಗಿದೆ, ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಪಾಲಿಕೆಯ ವಿರೋಧ ಪಕ್ಷ ಕಾಂಗ್ರೆಸ್‌ ಸದಸ್ಯರು ಪಾಲಿಕೆ ಕೇಂದ್ರ ಕಚೇರಿ ಬಳಿ ಗುರುವಾರ ಶಾಸಕ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ 
ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ನಡೆಸಲಾಗಿದೆ, ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ, ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಪಾಲಿಕೆಯ ವಿರೋಧ ಪಕ್ಷ ಕಾಂಗ್ರೆಸ್‌ ಸದಸ್ಯರು ಪಾಲಿಕೆ ಕೇಂದ್ರ ಕಚೇರಿ ಬಳಿ ಗುರುವಾರ ಶಾಸಕ ರಾಮಲಿಂಗಾ ರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು– ಪ್ರಜಾವಾಣಿ ಚಿತ್ರ    

ಬೆಂಗಳೂರು: ಪಾಲಿಕೆಯ ವಾರ್ಡ್‌ಗಳಲ್ಲಿ ಹಸಿ ಕಸವನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡುವ ಟೆಂಡರ್‌ ಪ್ರಕ್ರಿಯೆ ಇನ್ನೂ ಜಾರಿಯಾಗಿಲ್ಲ ಏಕೆ ಎಂದು ಪಾಲಿಕೆಯ ವಿರೋಧ ಪಕ್ಷವಾದ ಕಾಂಗ್ರೆಸ್‌ ಪ್ರಶ್ನಿಸಿದೆ.

ಕೌನ್ಸಿಲ್ ಸಭೆಯಲ್ಲಿ ಈ ಕುರಿತು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ‘ಮೈತ್ರಿಕೂಟದ ಆಡಳಿತದ ವೇಳೆಯೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿತ್ತು, ಈಗ ಮತ್ತೆ ಸ್ಥಾಯಿ ಸಮಿತಿ ಮುಂದೆ ತರುವ ಅಗತ್ಯವೇನಿದೆ. ಇನ್ನು ಒಣ ಕಸ ವಿಲೇವಾರಿ, ಮಾಂಸದ ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಕರೆಯುವುದು ಯಾವಾಗ’ ಎಂದು ಪ್ರಶ್ನಿಸಿದರು.

‘ಈ ವಿಳಂಬ ಧೋರಣೆಯಿಂದಾಗಿ ಕಸ ರಾಶಿ ಬೀಳುತ್ತಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಹೈಕೋರ್ಟ್‌ ಪಾಲಿಕೆಯನ್ನೇ ವಿಸರ್ಜಿಸುವ ಮಾತನ್ನು ಹೇಳಿದೆ. ನಿಮಗೆ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ಪಾಲಿಕೆ ವಿಸರ್ಜಿಸಿ. ನಾವೂ ರಾಜಿನಾಮೆ ನೀಡುತ್ತೇವೆ. ಚುನಾವಣೆ ಎದುರಿಸೋಣ’ ಎಂದು ಸವಾಲು ಹಾಕಿದರು.

ADVERTISEMENT

ಇದಕ್ಕೆ ದನಿ ಗೂಡಿಸಿದ ಬಿಜೆಪಿಯ ಬಿ.ಎಸ್‌.ಸತ್ಯನಾರಾಯಣ, ‘ನಮ್ಮ ವಾರ್ಡ್‌ನಲ್ಲಿ ಎಂಪ್ಯಾನೆಲ್‌ ಆಗದ ಗುತ್ತಿಗೆದಾರರಿಂದಾಗಿ ಸಮಸ್ಯೆ ಆಗಿದೆ. ಕಸ ಅಲ್ಲಲ್ಲಿ ರಾಶಿ ಬೀಳುತ್ತಿದೆ. ಇನ್ನೊಂದೆಡೆ ಮಾರ್ಷಲ್‌ಗಳು ದಂಡ ಹಾಕುತ್ತಿರುವುದರಿಂದ ಜನ ಭಯ ಬಿದ್ದಿದ್ದಾರೆ. ಮಾರ್ಷಲ್‌ಗಳ ಅಧಿಕಾರ ವ್ಯಾಪ್ತಿ ಬಗ್ಗೆ ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.

40 ಅಡಿ ರಸ್ತೆಗಳಿಲ್ಲದ ಕಡೆ ಹೊಸ ಅಂಗಡಿ ಮಳಿಗೆಗಲಿಗೆ ಪರವಾನಗಿ ನೀಡುತ್ತಿಲ್ಲ. ಮಾಲೀಕರು ಮಳಿಗೆಗಳನ್ನು ಪರವಾನಗಿ ನವೀಕರಿಸದೆಯೇ ನಡೆಸುತ್ತಿದ್ದಾರೆ. ಇದರಿಂದ ಪಾಲಿಕೆ ಆದಾಯ ನಷ್ಟವಾಗುತ್ತಿದೆ ಎಂದು ಕೆಲವು ಸದಸ್ಯರು ದೂರಿದರು.

ವೈದ್ಯಕೀಯ ಚಿಕಿತ್ಸೆ ವೆಚ್ಚ ಮರುಪಾವತಿ ಮಾಡಲು ಮೇಯರ್‌ ನಿಧಿಯಲ್ಲಿ ಹಣವಿಲ್ಲ. 1400ಕ್ಕೂ ಅಧಿಕ ಕಡತಗಳು ಬಾಕಿ ಇವೆ. ಇದಕ್ಕೆ ₹ 16.57 ಕೋಟಿ ಅನುದಾನ ಬೇಕು. ಕನಿಷ್ಠ ₹ 10 ಕೋಟಿ ಅನುದಾನವನ್ನಾದರೂ ಬಿಡುಗಡೆ ಮಾಡಬೇಕು ಎಂದು ಸದಸ್ಯರೊಬ್ಬರು ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಮೇಯರ್‌ ಎಂ.ಗೌತಮ್‌ ಕುಮಾರ್‌, ’ದೆಹಲಿ ಮಾದರಿಯಲ್ಲಿ ಕಸದಿಂದ ವಿದ್ಯುತ್ ತಯಾರಿಸಲು ಸಿದ್ಧತೆ ನಡೆದಿದೆ. ಕೆಪಿಸಿಎಲ್‌ ಕಂಪನಿಯೇ ಸದ್ಯಕ್ಕೆ ಕಸದಿಂದ ವಿದ್ಯುತ್‌ ಘಟಕ ಸ್ಥಾಪಿಸಲಿದೆ. ಅಲ್ಲಿಯವರೆಗೆ ಮಿಟಗಾನಹಳ್ಳಿ ಕ್ವಾರಿಯ ಭೂಭರ್ತಿ ಕೇಂದ್ರದಲ್ಲೇ ವೈಜ್ಞಾನಿಕ ರೀತಿ ಕಸ ವಿಲೇ ಮಾಡಬೇಕಾಗುತ್ತದೆ’ ಎಂದರು.

‘ಭೂಭರ್ತಿ ಕೇಂದ್ರದಲ್ಲಿ ಕಸ ವಿಲೇ ಮಾಡದಂತೆ ಹಸಿರುನ್ಯಾಯಮಂಡಳಿ ಸೂಚಿಸಿರುವುದು ನಿಜ. ಆದರೆ, ನಾವು ಪ್ರಾಯೊಗಿಕವಾಗಿಯೂ ಆಲೋಚನೆ ಮಾಡಬೇಕಾಗುತ್ತದೆ’ ಎಂದರು.

‘ನಾಮಫಲಕದಲ್ಲಿ ಶೇ 60ರಷ್ಟು ಕನ್ನಡ ಕಡ್ಡಾಯ ನಿಯಮ ಜಾರಿಗೆ ನ.30ರವರೆಗೆ ಕಾಲಾವಕಾಶ ನೀಡುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.