ADVERTISEMENT

ಬಿಎಸ್‌ಡಬ್ಲ್ಯುಎಂಎಲ್‌ನಿಂದ ಜೂನ್‌ 1ರಿಂದ ತ್ಯಾಜ್ಯ ನಿರ್ವಹಣೆ

​ಪ್ರಜಾವಾಣಿ ವಾರ್ತೆ
Published 24 ಮೇ 2024, 15:51 IST
Last Updated 24 ಮೇ 2024, 15:51 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನಗರದಲ್ಲಿ ಘನತ್ಯಾಜ್ಯ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣೆಯ ಜವಾಬ್ದಾರಿಯನ್ನು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ಜೂನ್‌ 1ರಿಂದ ನಿರ್ವಹಿಸಲಿದೆ.

ಬಿಬಿಎಂಪಿ ಮುಖ್ಯ ಆಯುಕ್ತ ಈ ಬಗ್ಗೆ ಕಚೇರಿ ಆದೇಶ ಹೊರಡಿಸಿದ್ದಾರೆ. ಘನತ್ಯಾಜ್ಯ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣೆ ಕಾರ್ಯವನ್ನು ಬಿಎಸ್‌ಡಬ್ಲ್ಯುಎಂಎಲ್‌ ನಿರ್ವಹಿಸಬೇಕು ಎಂದು 2022ರಲ್ಲಿ ನಿರ್ಣಯಿಸಲಾಗಿತ್ತು. ಇದೀಗ ಆ ನಿರ್ಣಯವನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ADVERTISEMENT

2021ರಲ್ಲಿ ಬಿಎಸ್‌ಡಬ್ಲ್ಯುಎಂಎಲ್‌ ಸ್ಥಾಪಿಸಲಾಗಿದ್ದು, ಯಾವುದೇ ರೀತಿಯ ಜವಾಬ್ದಾರಿಯನ್ನು ನೀಡಿರಲಿಲ್ಲ. ಜೂನ್‌ 1ರಿಂದ ತ್ಯಾಜ್ಯ ಸಂಗ್ರಹ, ಸಾಗಣೆ, ಸಂಸ್ಕರಣೆ ಸೇರಿದಂತೆ ಕಟ್ಟಡ ತ್ಯಾಜ್ಯ (ಸಿಆ್ಯಂಡ್‌ಡಿ), ತ್ಯಾಜ್ಯ ಸಂಸ್ಕರಣೆ ಘಟಕಗಳ ನಿರ್ವಹಣೆ, ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿ ಕಾರ್ಯವನ್ನೂ ಬಿಎಸ್‌ಡಬ್ಲ್ಯುಎಂಎಲ್‌ ನಿರ್ವಹಿಸಲಿದೆ.

ಪಾಲಿಕೆಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರೇ ಬಿಎಸ್‌ಡಬ್ಲ್ಯುಎಂಎಲ್‌ನಡಿ ಕಾರ್ಯನಿರ್ವಹಿಸಲಿದ್ದಾರೆ. ಅವರಿಗೆ ಬಿಲ್ ಪಾವತಿ ಈ ಕಂಪನಿಯಿಂದಲೇ ಆಗಲಿದೆ.

ಬಿಎಸ್‌ಡಬ್ಲ್ಯುಎಂಎಲ್‌ನಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದೀಗ ಪೂರ್ಣ ಪ್ರಮಾಣದ ತ್ಯಾಜ್ಯ ನಿರ್ವಹಣೆ ಕಾರ್ಯದ ಜವಾಬ್ದಾರಿ ನೀಡಲಿದೆ. ಇದೀಗ ಹೊಸ ಸಿಬ್ಬಂದಿ ನೇಮಕ ಅಥವಾ ವರ್ಗಾವಣೆ ಮೂಲಕ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಬೇಕಿದೆ ಎಂದು ಅಧಿಕಾರಿಗಳು ತಿಳಿಸಿದರು.

ಆರೋಗ್ಯ ಮತ್ತು ನೈರ್ಮಲ್ಯ ಶಾಖೆ

ಸಾರ್ವಜನಿಕ ಸ್ಥಳಗಳ ಸ್ವಚ್ಛತೆ, ಪೌರಕಾರ್ಮಿಕರಿಗೆ ಸೌಲಭ್ಯಗಳು, ಶೌಚಾಲಯಗಳ ನಿರ್ವಹಣೆ, ಸ್ವಚ್ಛ ಸರ್ವೇಕ್ಷಣ ಕಾರ್ಯಗಳು ಬಿಬಿಎಂಪಿಯಲ್ಲಿಯೇ ಉಳಿದುಕೊಳ್ಳಲಿವೆ. ಈ ಕಾರ್ಯಗಳನ್ನು ಆರೋಗ್ಯ ವಿಭಾಗವೇ ನಿರ್ವಹಿಸಲಿದೆ.

ಬಿಬಿಎಂಪಿಯ ಆರೋಗ್ಯ ಶಾಖೆಯನ್ನು ಆರೋಗ್ಯ ಮತ್ತು ನೈರ್ಮಲ್ಯ ಶಾಖೆ ಎಂದು ಮಾರ್ಪಡಿಸಲಾಗಿದೆ. ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತರು ಮತ್ತು ಜಂಟಿ ಆಯುಕ್ತರ ಕಾರ್ಯಾಭಾರವನ್ನು ಆರೋಗ್ಯ ಮತ್ತು ನೈರ್ಮಲ್ಯ ಶಾಖೆಯಲ್ಲಿ ವಿಲೀನಗೊಳಿಸಲಾಗಿದೆ. ಆರೋಗ್ಯ ಮತ್ತು ನೈರ್ಮಲ್ಯ ಶಾಖೆಯ ವಿಶೇಷ ಆಯುಕ್ತರು ಪದನಿಮಿತ್ತ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದಲ್ಲಿ ನಿರ್ದೇಶಕರಾಗಿರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.