ಘನತ್ಯಾಜ್ಯ ನಿರ್ವಹಣಾ ರಾಯಭಾರಿಗಳನ್ನು ಕರೀಗೌಡ ಸನ್ಮಾನಿಸಿದರು
ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಅನುಪಯುಕ್ತ ಗೃಹೋಪಯೋಗಿ ಸಾಮಗ್ರಿಗಳ ವಿಲೇವಾರಿಗಾಗಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಅ.20ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಸಿಇಒ ಕರೀಗೌಡ ತಿಳಿಸಿದರು.
ನಗರದಲ್ಲಿ ವಿವಿಧ ಬಗೆಯ ಘನತ್ಯಾಜ್ಯ ಮರುಬಳಕೆದಾರರ ಜೊತೆ ಸಭೆ ನಡೆಸಿದ ನಂತರ ಅವರು ಮಾತನಾಡಿದರು.
ನಗರದಲ್ಲಿ ತ್ಯಾಜ್ಯ ವಿಲೇವಾರಿಯಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗುತ್ತಿದೆ. ನಾಗರಿಕರ ಬೇಡಿಕೆಯ ಆಧಾರದ ಮೇಲೆ, ಅನುಪಯುಕ್ತ, ಗೃಹೋಪಯೋಗಿ ಸಾಮಗ್ರಿಗಳ ಸೂಕ್ತ ವಿಲೇವಾರಿಗಾಗಿ ತಂತ್ರಾಂಶವನ್ನು ಬಿಡುಗಡೆ ಮಾಡುತ್ತಿರುವುದಾಗಿ ತಿಳಿಸಿದರು.
ಸಂಗ್ರಹಿಸಲಾದ ಸೋಫಾ, ಹಾಸಿಗೆ, ಕಮೋಡ್ ಮುಂತಾದ ವಸ್ತುಗಳನ್ನು ಕೇಂದ್ರಿತವಾಗಿ ಶೇಖರಿಸಿ, ನಂತರ ಮರುಬಳಕೆದಾರರಿಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಬೇಕು. ಸಣ್ಣ ಪ್ರಮಾಣದ ತ್ಯಾಜ್ಯವನ್ನು ಸಾಗಣೆ ಮಾಡುವುದು ಕಷ್ಟ. ಸಾಗಣೆ ವೆಚ್ಚ ಅಧಿಕವಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸಲಹೆಗಳು ಬಂದವು. ಅವುಗಳನ್ನು ಪರಿಗಣಿಸಿ ತಂತ್ರಾಂಶ ರೂಪಿಸಲಾಗುತ್ತಿದೆ ಎಂದರು.
ಘನತ್ಯಾಜ್ಯ ನಿರ್ವಹಣಾ ರಾಯಭಾರಿಗಳಾಗಿ ಆಯ್ಕೆಯಾದ ಶೋಭಾ ಭಟ್– ಆರ್.ಆರ್. ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ಡಾ. ಶಾಂತಿ ತುಮ್ಮಲ– ಎಚ್.ಎಸ್.ಆರ್. ಸಿಟಿಜನ್ಸ್ ಫೋರಂ, ಅನಿರುದ್ಧ ದತ್ತ– ಲೆಟ್ಸ್ ಬಿ ದ ಚೇಂಜ್, ನಳಿನಿ ಶೇಖರ್– ಹಸಿರು ದಳ, ಅಮಿತ್ ಅಮರನಾಥ– ಯುವ ಫಾರ್ ಪರಿವರ್ತನ, ಸುನಿತ್– ಸಾಹಸ್, ಪದ್ಮಶ್ರೀ ಬಾಲರಾಮ್– ಕೋರಮಂಗಲ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಉಪಸ್ಥಿತರಿದ್ದರು.
ರಸ್ತೆ ಗುಂಡಿ: ಅಧಿಕಾರಿಗಳಿಗೆ ತರಾಟೆ
ಕೇಂದ್ರ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಚೋಳನ್ ದ್ವಿಚಕ್ರದಲ್ಲಿ ಸಂಚರಿಸಿ ರಸ್ತೆಗಳಲ್ಲಿ ಗುಂಡಿ ಗಮನಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಸಂಬಂಧಿಸಿದ ಗುತ್ತಿಗೆದಾರರಿಂದಲೇ ತುರ್ತಾಗಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲು ಸೂಚಿಸಿದರು.
ರೇಸ್ ಕೋರ್ಸ್ ರಸ್ತೆ ಚಾಲುಕ್ಯ ವೃತ್ತ ವಸಂತ ನಗರ ಸುತ್ತಮುತ್ತಲಿನ ರಸ್ತೆ ಅರಮನೆ ರಸ್ತೆ ಕಬ್ಬನ್ ರಸ್ತೆ ವಿಧಾನಸೌಧ ರಸ್ತೆ ರಾಜಭವನ ರಸ್ತೆ ಕ್ವೀನ್ಸ್ ರಸ್ತೆ ಅಲಿ ಆಸ್ಕರ್ ರಸ್ತೆ ಶಿವಾಜಿನಗರದ ವಿವಿಧ ರಸ್ತೆಗಳಲ್ಲಿ ಆಯುಕ್ತರು ಸಂಚರಿಸಿದರು.
ಸಚಿವರಾದ ದಿನೇಶ್ ಗುಂಡೂರಾವ್ ಜಮೀರ್ ಅಹಮದ್ ಖಾನ್ ಶಾಸಕರಾದ ಎನ್.ಎ. ಹ್ಯಾರಿಸ್ ರಿಜ್ವಾನ್ ಅರ್ಷದ್ ಅವರ ಕೇಂದ್ರ ನಗರ ಪಾಲಿಕೆ ಆಯುಕ್ತ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ರಸ್ತೆ ಅಭಿವೃದ್ಧಿ ಬ್ಲ್ಯಾಕ್ ಸ್ಪಾಟ್ ಮುಕ್ತ ರಸ್ತೆ ಅಗೆತ ಸೇರಿದಂತೆ ಹಲವು ಕಾಮಗಾರಿಗಳ ಬಗ್ಗೆ ಶೀಘ್ರ ಕ್ರಮಕೈಗೊಳ್ಳಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.