ADVERTISEMENT

ಕಸ ವಿಂಗಡಿಸದಿದ್ದರೆ ಮನೆಯಿಂದ ತ್ಯಾಜ್ಯ ಸಂಗ್ರಹವಿಲ್ಲ

ಮಿಶ್ರ ಕಸ ತೆಗೆದುಕೊಂಡರೆ ಗುತ್ತಿಗೆದಾರರಿಗೂ ದಂಡ; ಖಾಲಿ ನಿವೇಶನದ ಸ್ವಚ್ಛತೆ ಜವಾಬ್ದಾರಿ

ಆರ್. ಮಂಜುನಾಥ್
Published 2 ಜನವರಿ 2026, 0:53 IST
Last Updated 2 ಜನವರಿ 2026, 0:53 IST
<div class="paragraphs"><p>ಕಸದ&nbsp; ಲಾರಿ</p></div>

ಕಸದ  ಲಾರಿ

   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿರುವ ಮನೆಗಳಿಂದ ವಿಂಗಡಿಸಿರುವ ತ್ಯಾಜ್ಯವನ್ನು ಮಾತ್ರ ಸಂಗ್ರಹಿಸಬೇಕು ಎಂಬ ಷರತ್ತು ವಿಧಿಸಿದ್ದು, ಮಿಶ್ರ ಕಸ ಪಡೆದುಕೊಂಡರೆ ಗುತ್ತಿಗೆದಾರರಿಗೆ ದಂಡ ವಿಧಿಸುವ ಜೊತೆಗೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ.

ಜಿಬಿಎ ವ್ಯಾಪ್ತಿಯಲ್ಲಿರುವ 28 ವಿಧಾನಸಭೆ ಕ್ಷೇತ್ರಗಳಲ್ಲಿ, ಪ್ರಾಥಮಿಕ ತ್ಯಾಜ್ಯ ಸಂಗ್ರಹ, ಎರಡನೇ ಹಂತದ ತ್ಯಾಜ್ಯ ವರ್ಗಾವಣೆ, ರಸ್ತೆ ಗುಡಿಸಿದ ಕಸ ಸಂಗ್ರಹಿಸಲು, ₹544.91 ಕೋಟಿ ವೆಚ್ಚದಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದಿಂದ (ಬಿಎಸ್‌ಡಬ್ಲ್ಯುಎಂಎಲ್‌) 33 ಪ್ಯಾಕೇಜ್‌ಗಳಲ್ಲಿ ಟೆಂಡರ್‌ ಕರೆಯಲಾಗಿದ್ದು, ಅದರ ಅಂತಿಮ ಪ್ರಕ್ರಿಯೆ ನಡೆಯುತ್ತಿದೆ. ಈ ಪದ್ಧತಿಯಲ್ಲಿ ಗುತ್ತಿಗೆ ನೀಡಿದರೆ, ಸೇವಾದಾರರಿಗೆ (ಗುತ್ತಿಗೆದಾರರು) ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ.

ADVERTISEMENT

ಗುತ್ತಿಗೆದಾರರು ಮನೆಗಳ ಬಾಗಿಲಿನಿಂದ ತ್ಯಾಜ್ಯ ಸಂಗ್ರಹವನ್ನು ಬೆಳಿಗ್ಗೆ 6.30ರೊಳಗೆ ಆರಂಭಿಸಬೇಕು. ಒಣ, ಹಸಿ ತ್ಯಾಜ್ಯವನ್ನು ಪ್ರತ್ಯೇಕವಾಗಿಯೇ ಮನೆಗಳಿಂದ ಪಡೆಯಬೇಕು. ಮಿಶ್ರವಾಗಿ ನೀಡುವ ಮನೆಯಿಂದ ಕಸ ತೆಗೆದುಕೊಳ್ಳದೆ, ಡಿಜಿಟಲ್‌ ರೂಪದಲ್ಲಿ ಚಿತ್ರ ಹಾಗೂ ವಿಡಿಯೊ ದಾಖಲೆಯೊಂದಿಗೆ ಅವರ ಬಗ್ಗೆ ಬಿಎಸ್‌ಡಬ್ಲ್ಯುಎಂಎಲ್‌ನ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಿಶ್ರ ತ್ಯಾಜ್ಯವನ್ನು ಪಡೆದುಕೊಂಡಿದ್ದೇ ಆದಲ್ಲಿ ಗುತ್ತಿಗೆದಾರರ ಮೇಲೆ ಕ್ರಿಮಿನಲ್‌ ಪ್ರಕರಣವನ್ನೂ ದಾಖಲಿಸಲಾಗುತ್ತದೆ.

ಸಣ್ಣ ಪ್ರಮಾಣದ ವಾಣಿಜ್ಯ ಸಂಕೀರ್ಣಗಳಿಂದ ಬೆಳಿಗ್ಗೆ 10ರಿಂದ 1 ಗಂಟೆಯೊಳಗೆ ತ್ಯಾಜ್ಯ ಸಂಗ್ರಹವನ್ನು ಆರಂಭಿಸಬೇಕು. ಒಣ ಹಾಗೂ ಹಸಿ ಕಸವನ್ನು ಪ್ರತ್ಯೇಕವಾಗಿಯೇ ಸಂಗ್ರಹಿಸಿ, ಅದನ್ನು ಎರಡನೇ ಹಂತದ ತ್ಯಾಜ್ಯ ವರ್ಗಾವಣೆ ಘಟಕಗಳಿಗೆ ತಲುಪಿಸಬೇಕು. ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಪ್ಲಾಸ್ಟಿಕ್‌ ಅಥವಾ ಕಾಗದದ ಕವರ್‌ಗಳಲ್ಲಿ ಚಿಹ್ನೆಯೊಂದಿಗೆ ಸಂಗ್ರಹಿಸಿ ಸಾಗಣೆ ಮಾಡಬೇಕು ಎಂಬ ಷರತ್ತು ವಿಧಿಸಲಾಗಿದೆ.

ಡಿಫಾಲ್ಟ್‌: ಗುತ್ತಿಗೆ ಪಡೆಯುವ ಸಂದರ್ಭದಲ್ಲಿ ವಿಧಿಸಲಾಗಿರುವ ಷರತ್ತುಗಳನ್ನು ಗುತ್ತಿಗೆದಾರರು ಪಾಲಿಸದಿದ್ದರೆ, ಅವರಿಗೆ ಹೆಚ್ಚಿನ ದಂಡ ವಿಧಿಸುವ ಷರತ್ತು ವಿಧಿಸಲಾಗಿದೆ. 90 ದಿನದ ನಂತರವೂ ಅವರು ಷರತ್ತುಗಳನ್ನು ಪೂರೈಸದಿದ್ದರೆ ಅವರನ್ನು ‘ಡಿಫಾಲ್ಟ್‌’ ಮಾಡಿ ಗುತ್ತಿಗೆ ರದ್ದುಪಡಿಸುವ ಅಧಿಕಾರವನ್ನು ಬಿಎಸ್‌ಡಬ್ಲ್ಯುಎಂಎಲ್‌ ಹೊಂದಿರುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮನೆಗಳಿಂದ ತ್ಯಾಜ್ಯ ಸಂಗ್ರಹಿಸುತ್ತಿಲ್ಲ ಎಂದು ಪ್ರತಿ ದಿನ 10ಕ್ಕಿಂತ ಕಡಿಮೆ ದೂರು ಬಂದರೆ ದಂಡ ಇರುವುದಿಲ್ಲ. ದಿನಕ್ಕೆ 10ರಿಂದ 500 ದೂರುಗಳು ಬಂದರೆ ಪ್ರತಿ ದೂರಿಗೆ ₹100ರಂತೆ ಗುತ್ತಿಗೆದಾರರಿಗೆ ದಂಡ. ದಿನಕ್ಕೆ 500ಕ್ಕೂ ಹೆಚ್ಚು ದೂರುಗಳು ಮೂರು ತಿಂಗಳು ಸತತವಾಗಿ ಬಂದರೆ, ಪ್ರತಿ ದೂರಿಗೆ ₹100 ದಂಡ ಹಾಗೂ ಗುತ್ತಿಗೆದಾರರನ್ನು ಡಿಫಾಲ್ಟ್‌ ಮಾಡಲಾಗುತ್ತದೆ ಎಂದರು.

ಗುತ್ತಿಗೆದಾರರಿಗೆ ಷರತ್ತುಗಳು

l ರಸ್ತೆ, ಪಾದಚಾರಿ ಮಾರ್ಗ, ಮೇಲ್ಸೇತುವೆ ಹಾಗೂ ಕೆಳಸೇತುವೆಗಳಲ್ಲಿ ಸಂಗ್ರಹವಾದ ತ್ಯಾಜ್ಯದ ವಿಲೇವಾರಿ ಕಾರ್ಯವನ್ನು ಬೆಳಿಗ್ಗೆ 11 ಗಂಟೆಯಿಂದಲೇ ಗುತ್ತಿಗೆದಾರರು ಆರಂಭಿಸಿ, ಮಧ್ಯಾಹ್ನ 2ರ ವೇಳೆಗೆ ಮುಗಿಸಬೇಕು

l ಮಧ್ಯಾಹ್ನ 2.30ರಿಂದ ರಾತ್ರಿ 10 ಗಂಟೆಯವರೆಗೆ ಹಾಗೂ ಅಗತ್ಯವಿರುವ ಕಡೆ ಸಂಜೆ 6.30ರಿಂದ ಮಧ್ಯರಾತ್ರಿ 2.30ರವರೆಗೆ ರಸ್ತೆಗಳನ್ನು ಗುಡಿಸಬೇಕು

l ಆಟದ ಮೈದಾನ, ಸ್ಮಶಾನ, ಉದ್ಯಾನ, ಸಾರ್ವಜನಿಕ ಶೌಚಾಲಯಗಳಲ್ಲಿನ ಕಸ, ಸ್ಯಾನಿಟರಿ ತ್ಯಾಜ್ಯ, ಹಸಿರು ತ್ಯಾಜ್ಯ, ಮಿಶ್ರ ತ್ಯಾಜ್ಯವನ್ನು ಮಧ್ಯಾಹ್ನದೊಳಗೆ ವಿಲೇವಾರಿ ಮಾಡಬೇಕು

l ರಸ್ತೆಗಳಲ್ಲಿ ಇರಿಸಲಾಗಿರುವ ತ್ಯಾಜ್ಯದ ಬುಟ್ಟಿಗಳು ಹಾಗೂ ಹೊಸದಾಗಿ ಅಳವಡಿಸಲಾಗುವ ‘ಲಿಟರ್‌ ಬಿನ್‌’ಗಳಲ್ಲಿನ ಕಸ ಹೊರ ಬೀಳದಂತೆ ನಿರ್ವಹಣೆ ಮಾಡಬೇಕು

l ಸಾರ್ವಜನಿಕರಿಂದ ಬರುವ ದೂರುಗಳನ್ನು ಗುತ್ತಿಗೆದಾರರಿಗೆ ವರ್ಗಾಯಿಸಿದ ಮೇಲೆ, ಅದನ್ನು ಪರಿಹರಿಸಿದ ಬಗ್ಗೆ ಡಿಜಿಟಲ್‌ ದಾಖಲೆಗಳೊಂದಿಗೆ ಮಾಹಿತಿ ಒದಗಿಸಬೇಕು

l ಮನೆಯೊಂದರಿಂದ 300 ಕೆ.ಜಿಗಿಂತ ಕಡಿಮೆ ಇರುವ ಕಟ್ಟಡ ತ್ಯಾಜ್ಯವನ್ನು (ಸಿಆ್ಯಂಡ್‌ಡಿ) ಗುತ್ತಿಗೆದಾರರು ಸಂಗ್ರಹಿಸಿ, ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು

l ಉದ್ಯಮದಲ್ಲಿ ನಿಗದಿಯಾಗಿರುವ ಕನಿಷ್ಠ ವೇತನವನ್ನು ಸಿಬ್ಬಂದಿಯ ಬ್ಯಾಂಕ್‌ ಖಾತೆಗೆ ನೇರವಾಗಿ ಗುತ್ತಿಗೆದಾರರು ಪಾವತಿಸಬೇಕು. ಭವಿಷ್ಯ ನಿಧಿ (ಪಿಎಫ್‌) ಮತ್ತು ಇಎಸ್‌ಐ ಆಯಾ ತಿಂಗಳ 5ರೊಳಗೆ ಪಾವತಿಸಬೇಕು

l ಸಿಬ್ಬಂದಿಯ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಸೇರಿದಂತೆ ಅಗತ್ಯ ದಾಖಲೆಗಳನ್ನು ಗುತ್ತಿಗೆದಾರರು ಪಡೆದು, ಅವರಿಗೆ ಗುರುತಿನ ಚೀಟಿಯನ್ನು ನೀಡಬೇಕು. ಹಾಜರಾತಿಯನ್ನು ಬಯೊಮೆಟ್ರಿಕ್‌
ನಲ್ಲಿ ಹೊಂದಿರಬೇಕು. ಅವರಿಗೆ ಎಲ್ಲ ರೀತಿಯ ರಕ್ಷಣಾ ಕವಚ, ಸಮವಸ್ತ್ರಗಳನ್ನು ವಿಮೆಯೊಂದಿಗೆ ಒದಗಿಸಬೇಕು

ಶೇ 20ರಷ್ಟು ಕಡಿತ

ಇಎಸ್‌ಐ, ಪಿಎಫ್‌, ವೇತನ ಪಾವತಿಸಿದ ದಾಖಲೆಗಳನ್ನು ಒದಗಿಸಿದ ನಂತರವಷ್ಟೇ ಪ್ಯಾಕೇಜ್‌ ಪಡೆಯುವ ಗುತ್ತಿಗೆದಾರರ ಒಟ್ಟಾರೆ ಸೇವಾ ಶುಲ್ಕದಲ್ಲಿ ಶೇ 80ರಷ್ಟನ್ನು ಮಾತ್ರ ಗುತ್ತಿಗೆದಾರರಿಗೆ ಪ್ರತಿ ತಿಂಗಳು ಪಾವತಿ ಮಾಡಲಾಗುತ್ತದೆ. ಶೇ 20ರಷ್ಟು ಬಾಕಿ ಉಳಿಸಿಕೊಂಡು, ಅದನ್ನು ‘ಪೆನಾಲ್ಟಿ’ ಸಂದರ್ಭದಲ್ಲಿ ಕಡಿತ ಮಾಡಿಕೊಳ್ಳಲು ಬಿಎಸ್‌ಡಬ್ಲ್ಯುಎಂಎಲ್‌ ನಿರ್ಧರಿಸಿದೆ.

ಆರು ಸಾವಿರ ಪೌರ ಕಾರ್ಮಿಕರಿಗೆ ಭವಿಷ್ಯ ನಿಧಿ ಪಾವತಿಸದೆ ‘ಡಿಫಾಲ್ಟ್‌’ ಆಗಿರುವ ಗುತ್ತಿಗೆದಾರರು ಈ ಹೊಸ ಪ್ಯಾಕೇಜ್‌ನಲ್ಲಿ ಬಂದಿದ್ದರೆ, ಅವರಿಂದ ಬಾಕಿ ವಸೂಲಿ ಮಾಡಬೇಕೇ ಅಥವಾ ಹೊಸ ಗುತ್ತಿಗೆ ನೀಡುವುದೇ ಬೇಡವೇ ಎಂಬ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.