ADVERTISEMENT

ಜಲಮಂಡಳಿ ‘ನೀಲಿ ಪಡೆ’ ಅಕ್ಟೋಬರ್‌ನಲ್ಲಿ ಶುರು

ಅಕ್ರಮ ಸಂಪರ್ಕಕ್ಕೆ ಬಿಎಂಟಿಎಫ್‌ನಲ್ಲಿ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 15:50 IST
Last Updated 9 ಅಕ್ಟೋಬರ್ 2025, 15:50 IST
ಜಲಮಂಡಳಿ
ಜಲಮಂಡಳಿ   

ಬೆಂಗಳೂರು: ನೀರು ಹಾಗೂ ಒಳಚರಂಡಿ ಅಕ್ರಮ ಸಂಪರ್ಕ ಹೊಂದಿರುವವರ ಮೇಲೆ ನಿಗಾ ಇಡಲು ಬೆಂಗಳೂರು ಜಲಮಂಡಳಿ ಆರು ತಿಂಗಳ ಹಿಂದೆ ಘೋಷಣೆ ಮಾಡಿದ್ದ ನೀಲಿ ಕಾರ್ಯಪಡೆ (ಬ್ಲೂ ಫೋರ್ಸ್‌ ಟೀಂ) ಅಕ್ಟೋಬರ್‌ನಲ್ಲಿ ಕಾರ್ಯೋನ್ಮುಖವಾಗಲಿದೆ.

ಈ ಕಾರ್ಯಪಡೆ ಅಕ್ರಮ ಸಂಪರ್ಕ ಇರುವ ಕಟ್ಟಡಗಳ ಮೇಲೆ ದಾಳಿ ಮಾಡಿ ದಂಡ ವಸೂಲಿ ಮಾಡಲಿದೆ. ಅಷ್ಟೇ ಅಲ್ಲ, ಬೆಂಗಳೂರು ಮಹಾನಗರ ಕಾರ್ಯಪಡೆಯಲ್ಲಿ (ಬಿಎಂಟಿಎಫ್‌) ಪ್ರಕರಣ ದಾಖಲಿಸಲಿದೆ.

ನಗರದಲ್ಲಿ ಹಲವು ವರ್ಷಗಳಿಂದ ಅನಧಿಕೃತವಾಗಿ ನೀರು ಹಾಗೂ ಒಳಚರಂಡಿ ಸಂಪರ್ಕ ಹೊಂದಿರುವವರ ಪತ್ತೆಗೆ ಜಲಮಂಡಳಿ ಬಿಗಿ ಕ್ರಮಗಳನ್ನು ಆರಂಭಿಸಿದೆ. ಇದರ ಭಾಗವಾಗಿ ಜೂನ್‌ನಲ್ಲಿ ಮೊದಲ ಹಂತದ ಸಮೀಕ್ಷೆ ನಡೆಸಿತ್ತು. ಸೆಪ್ಟೆಂಬರ್ ಮೊದಲ ವಾರದಿಂದ ಸಮೀಕ್ಷೆಯನ್ನು ಪುನರ್‌ ಆರಂಭಿಸಿ ₹100 ಕೋಟಿ ದಂಡವನ್ನೂ ವಸೂಲಿ ಮಾಡಿದೆ.

ADVERTISEMENT

ಜಲಮಂಡಳಿಯ ಅಧಿಕಾರಿಗಳು, ಸಿಬ್ಬಂದಿಯೇ ಅಕ್ರಮ ಪತ್ತೆ, ದಂಡ ವಸೂಲಿ ಹಾಗೂ ವಿಚಕ್ಷಣೆ ಕಾರ್ಯಭಾರವನ್ನೂ ಹೊಂದಿದ್ದಾರೆ. ಇನ್ನು ಮುಂದೆ ಆಯಾ ವಿಭಾಗದ ಎಂಜಿನಿಯರ್‌ಗಳ ಸುಪರ್ದಿಯಲ್ಲಿಯೇ ನೀಲಿ ಕಾರ್ಯಪಡೆ ಕಾರ್ಯನಿರ್ವಹಿಸಲಿದೆ.

ಜಲಮಂಡಳಿ ಬ್ರಾಂಡ್‌ನಂತೆಯೇ ನೀಲಿ ಬಣ್ಣದ 16 ವಾಹನಗಳನ್ನು ಇದಕ್ಕಾಗಿ ಸಿದ್ದಪಡಿಸಲಾಗುತ್ತಿದೆ. ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಆಯಾ ವಿಭಾಗಗಳಲ್ಲಿ ವಾಹನಗಳು ಗಸ್ತು ತಿರುಗಲಿವೆ. ವಾಹನದ ಮೇಲೆ ಮಂಡಳಿ ಸಂಪರ್ಕ ಸಂಖ್ಯೆಗಳ ವಿವರವನ್ನೂ ಪ್ರದರ್ಶಿಸಲಾಗುತ್ತದೆ.

ಸೇನೆಯಿಂದ ನಿವೃತ್ತರಾದವರೊಂದಿಗೆ ಮಂಡಳಿಯ ಅಧಿಕಾರಿ ಹಾಗೂ ಮೂವರು ಸಿಬ್ಬಂದಿಯೂ ತಂಡದಲ್ಲಿ ಇರಲಿದ್ದಾರೆ. ಅಕ್ರಮ ಸಂಪರ್ಕ ಮಾಹಿತಿ ಆಧರಿಸಿ ದಾಳಿ ನಡೆಸಿ ದಂಡ ವಸೂಲಿ ಮಾಡಿ ಮೊಕದ್ದಮೆ ದಾಖಲಿಸಲಿದ್ದಾರೆ.

‘ಹಿಂದೆ ಮೊಕದ್ದಮೆ ದಾಖಲಿಸುವ ಪ್ರಮಾಣ ಕಡಿಮೆ ಇತ್ತು. ಇನ್ನು ಮುಂದೆ ಅಕ್ರಮ ಸಂಪರ್ಕಗಳನ್ನು ನಿಯಂತ್ರಿಸಲು ನೀಲಿ ಕಾರ್ಯಪಡೆ ತಪಾಸಣೆ ನಡೆಸಿ, ಬಿಎಂಟಿಎಫ್‌ನಲ್ಲಿ ದೂರು ದಾಖಲಿಸಲಿದೆ. ಬಿಎಂಟಿಎಫ್‌ ತನಿಖೆ ಕೈಗೊಂಡು ಅಕ್ರಮ ಸಾಬೀತಾದರೆ ಒಂದರಿಂದ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ  ́ಎಂದು ಜಲಮಂಡಳಿ ಮುಖ್ಯ ಎಂಜಿನಿಯರ್‌ ಎಸ್‌.ವಿ.ವೆಂಕಟೇಶ್‌ ತಿಳಿಸಿದರು.

ಟೆಂಡರ್‌ ಪ್ರಕ್ರಿಯೆಗಳು ಮುಗಿದಿದ್ದು  ಮಂಡಳಿಯ ವಿಚಕ್ಷಣೆ ವಾಹನಗಳಾದ ನೀಲಿ ಬಲ ಪಡೆಗೆ ಚಾಲನೆ ನೀಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಎಸ್.ವಿ.ವೆಂಕಟೇಶ್‌ ಮುಖ್ಯ ಎಂಜಿನಿಯರ್‌ ಜಲಮಂಡಳಿ

ಸಮೀಕ್ಷೆ ಹೇಗೆ?

ಜಲಮಂಡಳಿ ಸಮೀಕ್ಷೆಯಲ್ಲಿ ಕಟ್ಟಡದ ವಿದ್ಯುತ್‌ ಬಿಲ್‌ ಐಡಿ ಸಂಖ್ಯೆ ಅಪಾರ್ಟ್‌ಮೆಂಟ್‌ಗಳಾಗಿದ್ದರೆ ಅಲ್ಲಿನ ಮನೆಗಳ ಸಂಖ್ಯೆ ಬಳಸುತ್ತಿರುವ ನೀರಿನ ಪ್ರಮಾಣ ಬೋರ್‌ವೆಲ್‌ ಇಲ್ಲವೇ ಟ್ಯಾಂಕರ್‌ ನೀರು ಬಳಸುತ್ತಿದ್ದರೆ ಅದರ ವಿವರ ಒಳಚರಂಡಿ ಸಂಪರ್ಕದ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಇದರೊಟ್ಟಿಗೆ ಮಳೆ ನೀರನ್ನೂ ಒಳಚರಂಡಿ ಮಾರ್ಗಕ್ಕೆ ಸೇರಿಸಲಾಗಿದೆಯೇ ಎನ್ನುವ ತಪಾಸಣೆಯನ್ನೂ ಮಾಡಲಾಗುತ್ತಿದೆ. ಮಾಹಿತಿ ಸಂಗ್ರಹಕ್ಕೆ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಸಹಾಯವನ್ನು ಪಡೆಯಲಾಗುತ್ತಿದೆ. ಆ್ಯಪ್ ಬಳಸಿಯೂ ಪ್ರತಿ ಬಳಕೆದಾರರ ನಿಖರ ಡೇಟಾವನ್ನು ಸಂಗ್ರಹಿಸಲಾಗುತ್ತಿದೆ. ಒಂದು ಕಡೆ ಅಕ್ರಮ ತಡೆಗಟ್ಟುವುದು ಇನ್ನೊಂದೆಡೆ ಅಂತರ್ಜಲ ಬಳಕೆ ತಗ್ಗಿಸಿ ಕಾವೇರಿ ನೀರು ಬಳಕೆ ಉತ್ತೇಜಿಸಲು ಸಮೀಕ್ಷೆ ಸಹಕಾರಿಯಾಗಲಿದೆ ಎಂದು ಜಲಮಂಡಳಿ ಹಿರಿಯ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.