ADVERTISEMENT

ಬೆಂಗಳೂರು: ಕೈಗಾರಿಕೆಗಳಿಗೆ ಪ್ರತ್ಯೇಕ ಕೊಳವೆಯಲ್ಲಿ ‘ಸಂಸ್ಕರಿಸಿದ ನೀರು ಪೂರೈಕೆ’

‘ಸುಸ್ಥಿರ ನೀರು ನಿರ್ವಹಣೆ’ಗಾಗಿ ಜಲಮಂಡಳಿಯ ಹೊಸ ಹೆಜ್ಜೆ

ಗಾಣಧಾಳು ಶ್ರೀಕಂಠ
Published 11 ಮಾರ್ಚ್ 2025, 0:30 IST
Last Updated 11 ಮಾರ್ಚ್ 2025, 0:30 IST
<div class="paragraphs"><p>ನಾಗಸಂದ್ರ ಎಸ್‌ಟಿಪಿ ಒಳಾಂಗಣ ಚಿತ್ರ: ಬೆಂಗಳೂರು ಜಲಮಂಡಳಿ</p></div>

ನಾಗಸಂದ್ರ ಎಸ್‌ಟಿಪಿ ಒಳಾಂಗಣ ಚಿತ್ರ: ಬೆಂಗಳೂರು ಜಲಮಂಡಳಿ

   

ಬೆಂಗಳೂರು: ನಗರದಲ್ಲಿ ನೀರಿನ ಕೊರತೆ ಹೆಚ್ಚಾದಾಗಲೆಲ್ಲ ಕೈಗಾರಿಕೆಗಳಿಗೆ ಪೂರೈಸುವ ನೀರಿನ ಪ್ರಮಾಣವನ್ನು ಕಡಿತಗೊಳಿಸಲಾಗುತ್ತದೆ. ಇದರಿಂದ ಉದ್ದಿಮೆಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದಕ್ಕಾಗಿ ಬೆಂಗಳೂರು ಜಲಮಂಡಳಿ ಕೈಗಾರಿಕಾ ಪ್ರದೇಶಗಳಿಗೆ ಸಂಸ್ಕರಿತ ನೀರು ಪೂರೈಸುವಂತಹ ಹೊಸ ಯೋಜನೆಯೊಂದನ್ನು ಸಿದ್ಧಪಡಿಸಿದೆ.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುತ್ತಿದೆ. ನೀರಿನ ಬೇಡಿಕೆಯನ್ನು ತಗ್ಗಿಸುವುದು ಮತ್ತು ಈ ಮೂಲಕ ಸುಸ್ಥಿರ ನೀರು ನಿರ್ವಹಣೆಗೆ ಆದ್ಯತೆ ನೀಡುವುದು ಯೋಜನೆಯ ಉದ್ದೇಶವಾಗಿದೆ.

ADVERTISEMENT

ಯೋಜನೆ ಅನುಷ್ಠಾನ ಹೇಗೆ?: ಬಿಬಿಎಂಪಿ ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿರುವ ಜಲಮಂಡಳಿಯ ನಾಗಸಂದ್ರ ತ್ಯಾಜ್ಯ ನೀರು ಸಂಸ್ಕರಣಾ ಘಟಕದಿಂದ(ಎಸ್‌ಟಿಪಿ) ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ಎಚ್‌ಡಿಪಿ ಕೊಳವೆಗಳನ್ನು ಜೋಡಿಸಲಾಗುತ್ತದೆ. ಅದರ ಮೂಲಕ ಪ್ರತಿದಿನ ಸಂಸ್ಕರಿತ ನೀರನ್ನು ಕಾರ್ಖಾನೆಗಳ ಬಾಗಿಲಿಗೆ ಪೂರೈಸಲು ಯೋಜನೆ ಸಿದ್ಧವಾಗಿದೆ.

ಜಲಮಂಡಳಿ ಈ ಯೋಜನೆಗಾಗಿ ₹27 ಕೋಟಿ ವೆಚ್ಚ ಮಾಡುತ್ತಿದ್ದು, ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಶೀಘ್ರದಲ್ಲೇ ಅನುಮೋದನೆಯಾಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದೆ.

ಯೋಜನೆಯ ಉದ್ದೇಶ : ನೂರು ಕಿ.ಮೀಗೂ ಹೆಚ್ಚು ದೂರದಿಂದ ತರುವ ಕಾವೇರಿ ನೀರಿನ ಮೇಲಿನ ಅವಲಂಬನೆ ಕಡಿಮೆ ಮಾಡುವುದು, ಕಾರ್ಖಾನೆಗಳಿಗೆ ಆಗುತ್ತಿರುವ ನೀರಿನ ವೆಚ್ಚ ತಗ್ಗಿಸುವುದು, ಶ್ರಮ–ಸಮಯ ಉಳಿತಾಯ, ಉದ್ಯಮಗಳಿಗೆ ಬೇಕಾದ ಸಮಯದಲ್ಲಿ ನೀರು ಪೂರೈಸುವುದು ಸೇರಿದಂತೆ ಹಲವು ಉದ್ದೇಶಗಳಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಲಮಂಡಳಿ ತಿಳಿಸಿದೆ.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪ್ರತಿನಿತ್ಯ 2.5 ದಶಲಕ್ಷ ಲೀಟರ್‌ (ಎಂಎಲ್‌ಡಿ) ಕಾವೇರಿ ನೀರನ್ನು ಪೂರೈಸಲಾಗುತ್ತಿದೆ. (ತಿಂಗಳಿಗೆ 70 ಎಂಎಲ್‌ಡಿ) ಜಲಮಂಡಳಿ ಪ್ರಕಾರ, ಒಂದು ವಾರ್ಡ್‌ಗೆ ಕುಡಿಯಲು ಪೂರೈಸಲು ಇಷ್ಟು ಪ್ರಮಾಣದ ನೀರು ಸಾಕಾಗುತ್ತದೆ. ಇದೇ ಈ ನೀರನ್ನು ಯಂತ್ರಗಳ ಕೂಲಿಂಗ್, ಕಾರ್ಖಾನೆ ಸ್ವಚ್ಛತೆ, ಕೈ ತೊಳೆಯುವುದು, ಶೌಚಾಲಯ, ತೋಟ ನಿರ್ವಹಣೆ ಸೇರಿದಂತೆ ಅನ್ಯ ಉದ್ದೇಶಗಳಿಗೆ ಹೆಚ್ಚಾಗಿ ಬಳಸಲಾಗುತ್ತಿದೆ.

ಪ್ರಸ್ತುತ ವಾಣಿಜ್ಯ ಉದ್ದೇಶಕ್ಕೆ ಬಳಸುವ ಪ್ರತಿ ಸಾವಿರ ಲೀಟರ್ ಕಾವೇರಿ ನೀರಿಗೆ ₹90 ದರ ನಿಗದಿಪಡಿಸಲಾಗಿದೆ. ಟ್ಯಾಂಕರ್‌ ಮೂಲಕ ಸಂಸ್ಕರಿತ ನೀರು ಪೂರೈಕೆ ಮಾಡುತ್ತಿದ್ದರೂ, ಸಾರಿಗೆ ವೆಚ್ಚವೂ ಸೇರುತ್ತದೆ. ಜೊತೆಗೆ ಸಂಚಾರ ದಟ್ಟಣೆಯ ಕಾರಣ ಸಮಯಕ್ಕೆ ಸರಿಯಾಗಿ ಲಭ್ಯವಾಗುವುದಿಲ್ಲ. ಹೀಗಾಗಿ ಸಂಸ್ಕರಿತ ನೀರಿನ ಬಳಕೆ ಪ್ರಮಾಣ ಕಡಿಮೆ ಇದೆ.

ಈ ಯೋಜನೆ ಅನುಷ್ಠಾನವಾದರೆ, ನಾಲ್ಕೈದು ಕಿ.ಮೀ. ವ್ಯಾಪ್ತಿಯೊಳಗೆ ಕೈಗಾರಿಕಾ ಪ್ರದೇಶಗಳಿಗೆ ನೀರು ಲಭ್ಯವಾಗುತ್ತದೆ. ಸಾವಿರ ಲೀಟರ್ ಸಂಸ್ಕರಿತ ನೀರಿಗೆ ₹25 ದರ ನಿಗದಿಪಡಿಸಿದ್ದು, ಇದರಿಂದ ಕಾರ್ಖಾನೆಗಳಿಗೆ ನೀರಿನ ವೆಚ್ಚದಲ್ಲಿ ಶೇ 75ರಷ್ಟು ಉಳಿತಾಯ ಆಗುತ್ತದೆ. ಬೇಕಾದ ಸಮಯದಲ್ಲಿ ನೀರು ಕೂಡ ಲಭ್ಯವಾಗುತ್ತದೆ.

ಸುಮಾರು 13 ಸಾವಿರ ಸೂಕ್ಷ್ಮ, ಸಣ್ಣ ಕೈಗಾರಿಕೆಗಳಿರುವ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪೂರೈಸುತ್ತಿರುವ ಕಾವೇರಿ ನೀರಿನ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಬೇಡಿಕೆ ಇದೆ. ಇದಕ್ಕಾಗಿ ಹೆಚ್ಚುವರಿ ಹಣ ನೀಡುವುದಾಗಿಯೂ ಕೈಗಾರಿಕಾ ಸಂಘದವರು ಹೇಳುತ್ತಾರೆ. ಆದರೆ, ನೀರು ಪೂರೈಕೆ ಆರಂಭದಲ್ಲೇ ರೂಪಿಸಿರುವ ನಿಯಮದ ಪ್ರಕಾರ, ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ 70 ಎಂಎಲ್‌ಡಿ ನೀರನ್ನು ಮಾತ್ರ ಪೂರೈಸಲು ಸಾಧ್ಯ. ಈ ಮಿತಿಯನ್ನು ಹೆಚ್ಚಿಸಲು ಅವಕಾಶವಿಲ್ಲ. ಅದಕ್ಕಾಗಿಯೇ ಹೊಸ ಯೋಜನೆ ರೂಪಿಸಲಾಗಿದೆ ಎಂದು ಜಲಮಂಡಳಿ ತಿಳಿಸಿದೆ.

ಪ್ರಸ್ತುತ ನಾಗಸಂದ್ರದಲ್ಲಿ 40 ದಶಲಕ್ಷ ಲೀಟರ್ ನೀರು ಸಂಸ್ಕರಿಸುವ ಸಾಮರ್ಥ್ಯದ ಎಸ್‌ಟಿಪಿ ಘಟಕವಿದೆ. ಇದರಿಂದ ನಿತ್ಯ 4 ದಶಲಕ್ಷ ನೀರನ್ನು ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಪೂರೈಸಬಹುದಾಗಿದೆ. ಹೀಗಾಗಿ, ಕಾರ್ಖಾನೆಗಳು ಎಷ್ಟು ಸಂಸ್ಕರಿತ ನೀರನ್ನು ಕೇಳಿದರೂ ಪೂರೈಸಲು ಜಲಮಂಡಳಿ ಸಿದ್ಧವಿದೆ ಎಂದು ಸಂಸ್ಕರಿತ ನೀರಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುಣಮಟ್ಟದ ನೀರು : ಅನೇಕರಿಗೆ ಸಂಸ್ಕರಿತ ನೀರಿನ ಬಗ್ಗೆ ಅನುಮಾನಗಳಿರುತ್ತವೆ. ಆದರೆ, ಅಂಥ ಶಂಕೆ ಇಟ್ಟುಕೊಳ್ಳಲೇಬೇಡಿ ಎಂದು ಜಲಮಂಡಳಿಯ ಎಂಜಿನಿಯರ್‌ಗಳು ಭರವಸೆ ನೀಡಿದ್ದಾರೆ. ಹಲವು ಹಂತಗಳ ಪರೀಕ್ಷೆ ನಡೆಸಿದ ನಂತರವೇ ಪೂರೈಕೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮೂರು ಹಂತಗಳಲ್ಲಿ ನೀರು ಸಂಸ್ಕರಣೆಯಾಗುತ್ತದೆ. ನಂತರ ‘ಆರ್‌ಒ’ ಘಟಕದಲ್ಲಿ ಶುದ್ಧೀಕರಣಗೊಳ್ಳುತ್ತದೆ. ಆಮೇಲೆ ಗ್ರಾಹಕರಿಗೆ ತಲುಪಿಸಲಾಗುತ್ತದೆ. ನೀರಿನ ಗುಣಮಟ್ಟವನ್ನು ಖಾತರಿಪಡಿಸುವ ಪ್ರಮಾಣಪತ್ರವನ್ನೂ ನೀಡಲಾಗುತ್ತದೆ. ಮಾತ್ರವಲ್ಲ, ಪೂರೈಸುವ ಸಂಸ್ಕರಿತ ನೀರಿನ ಬಗ್ಗೆ ನಿಗಾ ಇಡಲಾಗುತ್ತದೆ. ನೀರಿನ ಬಗ್ಗೆ ಅನುಮಾನ ಬಂದರೆ, ಗ್ರಾಹಕರು ಸಮೀಪದಲ್ಲೇ ಇರುವ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಖಚಿತಪಡಿಸಿಕೊಳ್ಳಬಹುದು ಎಂದು ಎಂಜಿನಿಯರ್‌ಗಳು ತಿಳಿಸಿದ್ದಾರೆ.ದಾಸರಹಳ್ಳಿ ವ್ಯಾಪ್ತಿಯ ನಾಗಸಂದ್ರದಲ್ಲಿರುವ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ

ದಾಸರಹಳ್ಳಿ ವ್ಯಾಪ್ತಿಯ ನಾಗಸಂದ್ರದಲ್ಲಿರುವ ಜಲಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ

ಇನ್ನು ಮುಂದೆ ಸಂಸ್ಕರಿತ ನೀರು ಬಳಸುವುದು ಅನಿವಾರ್ಯ ಹಾಗೂ ಅಗತ್ಯ. ಕೈಗಾರಿಕೆಗಳಿಗೆ ಸಂಸ್ಕರಿತ ನೀರು ಪೂರೈಸಲು ರೂಪಿಸಿರುವ ಈ ಯೋಜನೆ ಉತ್ತಮವಾಗಿದೆ. ಇದು ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕು ಯೋಜನೆ ಯಶಸ್ವಿಯಾಗಬೇಕು
-ಎಸ್. ವಿಶ್ವನಾಥ್, ಜಲತಜ್ಞ
ಪ್ರತ್ಯೇಕ ಕೊಳವೆಗಳಲ್ಲಿ ಸಂಸ್ಕರಿತ ನೀರು ಪೂರೈಕೆ ಕುರಿತು ಕೈಗಾರಿಕಾ ಪ್ರದೇಶಗಳ ಉದ್ಯಮಿಗಳೊಂದಿಗೆ ಸಭೆ ನಡೆಸಿದ ನಂತರ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆಯ ನಿರೀಕ್ಷೆಯಲ್ಲಿದ್ದೇವೆ
-ರಾಮ್‌ಪ್ರಸಾತ್ ಮನಹೋರ್, ಅಧ್ಯಕ್ಷ ಬೆಂಗಳೂರು ಜಲಮಂಡಳಿ
ಕುಡಿಯುವುದಕ್ಕಲ್ಲದೆ ಬೇರೆ ಕೆಲಸಗಳಿಗೆ ಸಂಸ್ಕರಿಸಿದ ನೀರು ಪೂರೈಸಲು ಜಲಮಂಡಳಿ ಪ್ರತ್ಯೇಕ ಕೊಳವೆಮಾರ್ಗ ಅಳವಡಿಸುತ್ತಿರುವುದು ಒಳ್ಳೆಯದು. ಆದರೆ ಯಾವ ಗುಣಮಟ್ಟದಲ್ಲಿ ನೀರು ಸಂಸ್ಕರಣೆಯಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಇದರಿಂದ ಏನೂ ತೊಂದರೆಯಾಗುವುದಿಲ್ಲ ಎಂಬುದನ್ನು ಪ್ರಮಾಣೀಕೃತ ಸಂಸ್ಥೆಗಳಿಂದ ದೃಢಪಡಿಸಿಕೊಂಡು ಉದ್ಯಮದಾರರೊಂದಿಗೆ ಚರ್ಚಿಸಿ ನಂತರ ಮುಂದುವರಿಯಬೇಕು. ಕೊಳವೆ ಹಾಕಲು ರಸ್ತೆ ಅಗೆದರೆ ಅದನ್ನು ಜಲಮಂಡಳಿಯೇ ಸರಿಪಡಿಸಬೇಕು.
-ಶಿವಕುಮಾರ್, ಅಧ್ಯಕ್ಷ ಪೀಣ್ಯ ಕೈಗಾರಿಕಾ ಸಂಘ

ಯೋಜನೆ ಮುಖ್ಯಾಂಶಗಳು ₹ 27 ಕೋಟಿ  ಯೋಜನಾ ವೆಚ್ಚ

40 ಎಂಎಲ್‌ಡಿ  ಎಸ್‌ಟಿಪಿ ಕೇಂದ್ರದ ಸಾಮರ್ಥ್ಯ 4 ಎಂಎಲ್‌ಡಿ ನಿತ್ಯ ಪೂರೈಸುವ ಸಂಸ್ಕರಿತ ನೀರು

1440 ಎಂಎಲ್‌ಡಿ ನಗರದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರು

1212 ಎಂಎಲ್‌ಡಿ ಸಂಸ್ಕರಣೆಯಾಗುತ್ತಿರುವ ನೀರು  

775 ಎಂಎಲ್‌ಡಿ ಮರುಬಳಕೆಯಾಗುತ್ತಿರುವ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.