ADVERTISEMENT

ಬೆಂಗಳೂರು | ಬತ್ತಿದ ಕೊಳವೆ ಬಾವಿಗಳು: ಹೋಟೆಲ್‌ ಉದ್ಯಮಕ್ಕೂ ‘ಜಲಕ್ಷಾಮ’

* ದುಪ್ಪಟ್ಟಾದ ಟ್ಯಾಂಕರ್‌ ನೀರಿನ ದರ ಅದರ ಮೇಲೆಯ ಅವಲಂಬನೆ

ಖಲೀಲಅಹ್ಮದ ಶೇಖ
Published 11 ಮಾರ್ಚ್ 2024, 0:08 IST
Last Updated 11 ಮಾರ್ಚ್ 2024, 0:08 IST
ಹೋಟೆಲ್ ಒಂದರಲ್ಲಿ ಗ್ರಾಹಕರು ಊಟ ಮಾಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಹೋಟೆಲ್ ಒಂದರಲ್ಲಿ ಗ್ರಾಹಕರು ಊಟ ಮಾಡುತ್ತಿರುವ ದೃಶ್ಯ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌   

ಬೆಂಗಳೂರು: ‘ಹೋಟೆಲ್‌ನಲ್ಲಿದ್ದ ಕೊಳವೆ ಬಾವಿ ಬತ್ತಿ ಹೋಗಿದೆ. ಇದರಿಂದ ನೀರಿನ ಅಭಾವ ಹೆಚ್ಚಾಗಿದೆ. ಪ್ರತಿದಿನ 6 ಸಾವಿರ ಲೀಟರ್‌ ನೀರಿಗೆ ₹1500 ನೀಡಿ ನೀರು ತರಿಸಿಕೊಂಡು ಉದ್ಯಮ ನಡೆಸುವ ಪರಿಸ್ಥಿತಿ ಎದುರಾಗಿದೆ’...

ಬನ್ನೇರುಘಟ್ಟ ರಸ್ತೆಯಲ್ಲಿರುವ ಐಸಿರಿ ಕೆಫೆಯ ವ್ಯವಸ್ಥಾಪಕ ಉದಯ್ ಅಡಿಗ ಅವರ ಬೇಸರದ ನುಡಿಗಳಿವು. ‘ನಾವು ಗಳಿಸುವ ಬಹುತೇಕ ಲಾಭವನ್ನು ನೀರಿನ ಪೂರೈಕೆಗೆ ವೆಚ್ಚ ಮಾಡಬೇಕಾಗಿದೆ’ ಎಂದರು.

ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್‌ ಮೊದಲ ವಾರದಲ್ಲಿಯೇ ಕುಡಿಯುವ ನೀರಿನ ಅಭಾವ ಎದುರಾಗಿದ್ದು, ಹೋಟೆಲ್‌ ಉದ್ಯಮಕ್ಕೂ ಇದರ ಬಿಸಿ ತಟ್ಟಿದೆ. ನಿಗದಿತ ಸಮಯಕ್ಕೆ ನೀರು ಸಿಗದೇ ಇರುವುದರಿಂದ ಗ್ರಾಹಕರಿಗೆ ಬಗೆ–ಬಗೆಯ ತಿನಿಸು ನೀಡುವುದು ಹೋಟೆಲ್‌ ಮಾಲೀಕರಿಗೆ ಸವಾಲಾಗಿದೆ. 

ADVERTISEMENT

ಹೋಟೆಲ್‌ಗಳಲ್ಲಿ ನೀರಿನ ಬಳಕೆ ಹೆಚ್ಚು. ಆದರೆ, ನಗರದಲ್ಲಿರುವ ಬಹುತೇಕ ಹೋಟೆಲ್‌ಗಳಲ್ಲಿದ್ದ ಕೊಳವೆ ಬಾವಿಗಳಲ್ಲಿ ನೀರು ಬರುತ್ತಿಲ್ಲ. ಕಾವೇರಿ ನೀರು ಸಹ ಐದಾರೂ ದಿನಗಳವರೆಗೆ ಪೂರೈಕೆ ಆಗುತ್ತಿಲ್ಲ. ಇದರಿಂದ ಹೋಟೆಲ್‌ನ ಮಾಲೀಕರು ಅನಿವಾರ್ಯವಾಗಿ ಟ್ಯಾಂಕರ್‌ ನೀರನ್ನು ಅವಲಂಬಿಸುತ್ತಿದ್ದಾರೆ. ಟ್ಯಾಂಕರ್‌ ನೀರನ ದರ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಬನ್ನೇರುಘಟ್ಟ ರಸ್ತೆಯ ಅರಕೆರೆ, ಶಾಂತಿನಿಕೇತನ್‌ ಲೇಔಟ್‌, ಬಿಟಿಎಸ್‌ ಬಡಾವಣೆಯ ಮುಖ್ಯರಸ್ತೆ, ಕನಕಪುರ ರಸ್ತೆ, ಗಾಂಧಿನಗರ, ಜಯನಗರ ಹಾಗೂ ಬಿಟಿಎಂ ಲೇಔಟ್‌, ಮಹದೇವಪುರ, ಕೆ.ಆರ್. ಪುರ ಸೇರಿದಂತೆ ನಗರದ ಹೊರವಲಯದಲ್ಲಿರುವ ಹೋಟೆಲ್‌ಗಳು ನೀರಿನ ಕೊರತೆ ಎದುರಿಸುತ್ತಿವೆ. ಹೋಟೆಲ್‌ ಉದ್ಯಮ ನಡೆಸುವುದು ಕಷ್ಟವಾಗಿದೆ. ನೀರಿನ ಬವಣೆಯನ್ನು ನೀಗಿಸಲು ಕೆಲ ದೊಡ್ಡ ಹೋಟೆಲ್‌ಗಳು ಬಳಸಿ ಬೀಸಾಡುವ (ಯೂಸ್‌ ಆ್ಯಂಡ್‌ ಥ್ರೋ) ತಟ್ಟೆ ಮತ್ತು ಲೋಟಗಳನ್ನು ಬಳಕೆ ಮಾಡುತ್ತಿವೆ.

ಅಂತರ್ಜಲಮಟ್ಟ ಕುಸಿದಿದ್ದು ಹೋಟೆಲ್‌ಗಳಲ್ಲಿದ್ದ ಕೊಳವೆಬಾವಿಗಳು ಬತ್ತಿವೆ. ಅನಿವಾರ್ಯವಾಗಿ ಹೋಟೆಲ್ ಮಾಲೀಕರು, ಟ್ಯಾಂಕರ್‌ನಲ್ಲಿ ನೀರು ತರಿಸಿಕೊಳ್ಳುತ್ತಿದ್ದಾರೆ. ಒಂದು ಹೋಟೆಲ್‌ ಅಥವಾ ರೆಸ್ಟೋರೆಂಟ್‌ಗೆ ಪ್ರತಿದಿನ 10 ರಿಂದ 12 ಸಾವಿರ ಲೀಟರ್‌ ನೀರು ಬೇಕಾಗುತ್ತದೆ. ಮಾರ್ಚ್‌ನಲ್ಲಿಯೇ ಜಲಕ್ಷಾಮ ಉಂಟಾಗಿದೆ. ಮುಂದಿನ ಮೂರು ತಿಂಗಳು ಉದ್ಯಮ ನಡೆಸುವುದೇ ದೊಡ್ಡ ಸವಾಲಾಗಿದೆ’ ಎಂದು ಹೋಟೆಲ್‌ ಉದ್ಯಮಿಗಳು ಹೇಳಿದರು.

‘ಅಡುಗೆ ಸಿದ್ಧಪಡಿಸಲು, ಪಾತ್ರೆ ತೊಳೆಯಲು, ಗ್ರಾಹಕರಿಗೆ ಕುಡಿಯಲು ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ನೀರು ಬೇಕು. ನಗರದಲ್ಲಿ ನೀರಿನ ಕೊರತೆ ಹೆಚ್ಚಾಗಿದ್ದು, ಹೋಟೆಲ್‌ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಇದರಿಂದ, ತಿಂಡಿ–ತಿನಿಸುಗಳನ್ನು ಸಿದ್ಧಪಡಿಸಲು ತಡವಾಗುತ್ತಿದೆ. ಹೋಟೆಲ್‌ಗಳ ತಿಂಡಿ–ತಿನಿಸುಗಳನ್ನು ನೆಚ್ಚಿಕೊಂಡಿರುವ ನಗರದ ಸಾವಿರಾರು ಮಂದಿಗೂ ಇದರ ಬಿಸಿ ತಟ್ಟಿದೆ’ ಎಂದು ತಿಳಿಸಿದರು.

ಶುದ್ಧ ನೀರಿನ ಘಟಕಗಳಲ್ಲಿ ಹೆಚ್ಚಿದ ದರ: ಕುಡಿಯುವ ನೀರಿನ ಅಭಾವ ಹೆಚ್ಚಾದಂತೆ, ನಗರದ ಹಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ನೀರಿನ ದರ ಹೆಚ್ಚಿಸಿವೆ. ಇದರಿಂದ ಬೀದಿ ಬದಿ ಹೋಟೆಲ್‌ ನಡೆಸುವವರ ಖರ್ಚಿನಲ್ಲಿ ಏರಿಕೆಯಾಗಿದೆ. ‘ಗಾಂಧಿನಗರ, ಮೆಜೆಸ್ಟಿಕ್‌, ರಾಜಾಜಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಹಲವು ಘಟಕಗಳಲ್ಲಿ 20 ಲೀಟರ್‌ ನೀರಿಗೆ ₹5 ಇದ್ದ ಬೆಲೆ, ಇದೀಗ ₹ 10ಕ್ಕೆ ಏರಿಸಲಾಗಿದೆ’ ಎಂದು ಹೋಟೆಲ್‌ವೊಂದರ ಮಾಲೀಕರು ತಿಳಿಸಿದರು. 

‘ಹೋಟೆಲ್‌ಗಳಲ್ಲಿ ಅಡುಗೆ ಮಾಡುವುದಕ್ಕೆ, ಪಾತ್ರೆ ತೊಳೆಯುವುದಕ್ಕೆ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ನೀರು ಬೇಕು. ಹತ್ತು ನಿಮಿಷ ನೀರು ಬರದಿದ್ದರೆ, ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಹೋಟೆಲ್‌ನಲ್ಲಿ ನೀರಿಲ್ಲದಿದ್ದರೆ ಲಕ್ಷ್ಮಿಯೇ ಇಲ್ಲದಂತೆ ಲೆಕ್ಕ’ ಎಂದು ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ನ ಮಾಲೀಕ ಕೃಷ್ಣರಾಜು ಹೇಳಿದರು.

ಬನ್ನೇರುಘಟ್ಟ ರಸ್ತೆಯ ಐಸಿರಿ ಕೆಫೆಯಲ್ಲಿ ಅಡಿಕೆ ತಟ್ಟೆ ಮತ್ತು ಬಾಳೆ ಎಲೆ ಬಳಕೆ ಮಾಡುತ್ತಿರುವುದು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಗಾಂಧಿನಗರದಲ್ಲಿ ರಸ್ತೆ ಬದಿಯಲ್ಲಿ ಹೋಟೆಲ್ ಮಾಲೀಕ ಶ್ರೀನಿವಾಸ್ –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
ಒಂದು ಹೋಟೆಲ್‌/ರೆಸ್ಟೋರೆಂಟ್‌ ನಡೆಯಬೇಕಾದರೆ ಪ್ರತಿದಿನ 7 ರಿಂದ 8 ಟ್ಯಾಂಕರ್‌ ನೀರು ಬೇಕಾಗುತ್ತದೆ. ಹಿಂದೆ ಒಂದು ಟ್ಯಾಂಕರ್‌ ನೀರಿಗೆ ₹800 ನೀಡಲಾಗುತ್ತಿತ್ತು. ಈಗ ಒಂದು ಟ್ಯಾಂಕರ್‌ಗೆ ₹1500 ನೀಡಬೇಕಾಗಿದೆ. ನಮಗೆ ತಕ್ಷಣಕ್ಕೆ ನೀರು ಬೇಕೆಂದರೆ ದುಪ್ಪಟ್ಟು ಹಣ ನೀಡಲೇಬೇಕು.
ಕೃಷ್ಣರಾಜು ನಿಸರ್ಗ ಗ್ರ್ಯಾಂಡ್‌ ಹೋಟೆಲ್‌ನ ಮಾಲೀಕ
ನೀರಿನ ಅಭಾವ ನೀಗಿಸಲು ಹೋಟೆಲ್‌ನಲ್ಲಿ ಅಡಿಕೆ ತಟ್ಟೆ ಪ್ಲಾಸ್ಟಿಕ್‌ ಲೋಟಗಳನ್ನು ಬಳಸುತ್ತಿದ್ದೇವೆ. ಹಿಂದೆ 12 ಸಾವಿರ ಲೀಟರ್‌ ನೀರು ಬೇಕಾಗುತ್ತಿತ್ತು. ಈಗ 6 ಸಾವಿರ ಲೀಟರ್‌ ನೀರಿನಲ್ಲಿ ಉದ್ಯಮ ನಡೆಸುತ್ತಿದ್ದೇವೆ.
ಉದಯ್‌ ಅಡಿಗ ಬನ್ನೇರುಘಟ್ಟ ರಸ್ತೆಯ ಐಸಿರಿ ಕೆಫೆ ವ್ಯವಸ್ಥಾಪ‍ಕ
ಏಪ್ರಿಲ್‌ ಮೇನಲ್ಲಿ ಪ್ರಾರಂಭವಾಗುತ್ತಿದ್ದ ನೀರಿನ ಸಮಸ್ಯೆ ಮಾರ್ಚ್‌ನಲ್ಲೇ ಶುರುವಾಗಿದೆ. ಕಾವೇರಿ ನೀರು ಸರಿಯಾದ ಸಮಯಕ್ಕೆ ಪೂರೈಕೆಯಾಗುತ್ತಿಲ್ಲ. ಇದರಿಂದ ನಮ್ಮಂತಹ ಚಿಕ್ಕ ಹೋಟೆಲ್‌ನವರಿಗೆ ಹೆಚ್ಚು ಸಮಸ್ಯೆ ಆಗಿದೆ.
ಶ್ರೀನಿವಾಸ್‌  ಬೀದಿಬದಿ ಹೋಟೆಲ್‌ ಮಾಲೀಕ ಗಾಂಧಿನಗರ
ಪ್ರತಿನಿತ್ಯ ಟ್ಯಾಂಕರ್‌ ಮೂಲಕ ಡ್ರಮ್‌ಗಳಲ್ಲಿ ನೀರು ತುಂಬಿಕೊಂಡು ಹೋಟೆಲ್‌ ನಡೆಸುತ್ತಿದ್ದೇವೆ. ನಮ್ಮ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಿದ್ದು ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ.
ರಾಜು ಬೀದಿಬದಿ ಹೋಟೆಲ್‌ ಮಾಲೀಕ ಬಿಟಿಎಸ್‌ ಬಡಾವಣೆ
ನೀರಿನ ಮಿತ ಬಳಕೆಗೆ ಸೂಚನೆ
ನಗರದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿದ್ದು ನೀರನ್ನು ಮಿತವಾಗಿ ಬಳಸುವ ಕುರಿತು ಗುರುವಾರ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ಹೇಳಿದರು.  ಹೋಟೆಲ್‌ಗಳಲ್ಲಿ ತಿಂಡಿ–ಕಾಫಿಗೆ ಬಳಸಿ ಬೀಸಾಡುವ ತಟ್ಟೆ ಮತ್ತು ಪಾತ್ರೆಗಳನ್ನು ಬಳಸಲಾಗುತ್ತಿದೆ. ಹೋಟೆಲ್‌ನಲ್ಲಿ ಜಗ್‌ಗಳಲ್ಲಿ ನೀರು ತುಂಬಿಸಿ ಇಡಲಾಗುತ್ತಿದೆ. ಗ್ರಾಹಕರು ತಮಗೆ ಎಷ್ಟು ನೀರು ಬೇಕು ಅಷ್ಟು ಮಾತ್ರ ಲೋಟದಲ್ಲಿ ಹಾಕಿಕೊಂಡು ಕುಡಿಯಬೇಕು ಎಂಬ ಜಾಗೃತಿ ಫಲಕಗಳನ್ನು ಹಾಕುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.