ಬೆಂಗಳೂರು: ನಗರದಲ್ಲಿ ಮಳೆ ಬಂದಾಗ ಜಲಾವೃತವಾಗುವ ರಸ್ತೆಗಳು, ವಾಹನ ಸವಾರರ ಪ್ರಾಣಕ್ಕೇ ಸಂಚಕಾರ ತಂದೊಡ್ಡುತ್ತಿವೆ. ನೀರಿನಿಂದ ತುಂಬಿದ ಗುಂಡಿಗಳು ಕಾಣದೆ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೊಳಗಾಗುತ್ತಿದ್ದಾರೆ.
ರಸ್ತೆಯಲ್ಲಿ ಮಳೆನೀರು ನಿಂತಾಗ ಗುಂಡಿ ಇರುವ ಬಗ್ಗೆ ಅಥವಾ ಅಲ್ಲಿರುವ ಗುಂಡಿಯ ಆಳದ ಅಂದಾಜು ವಾಹನ ಸವಾರರಿಗೆ ಇರುವುದಿಲ್ಲ. ಮಳೆಯಲ್ಲಿ ನೆಂದು ಸಾಗುವ ಜೊತೆಗೆ, ರಸ್ತೆಯಲ್ಲಿನ ನೀರು ತಮ್ಮ ಮೇಲೆ ಎರಚದಂತೆ ಸವಾರಿ ಮಾಡುವ ಸಂದರ್ಭದಲ್ಲಿ, ಗುಂಡಿಗೆ ವಾಹನ ಇಳಿದರೆ ನಿಯಂತ್ರಣ ತಪ್ಪುತ್ತದೆ. ಮಳೆ ಬಂದ ಸಂದರ್ಭದಲ್ಲಿ ಹೀಗೆ ನಿಯಂತ್ರಣ ತಪ್ಪಿ, ನೂರಾರು ದ್ವಿಚಕ್ರ ವಾಹನಗಳ ಸವಾರರು ಸಂಕಷ್ಟಕ್ಕೀಡಾಗುತ್ತಿದ್ದಾರೆ.
ಮಳೆ ಇಲ್ಲದ ಸಂದರ್ಭದಲ್ಲೂ ಗುಂಡಿಗಳಿಂದಾಗಿ ಹಲವು ರಸ್ತೆಗಳಲ್ಲಿ ಅವಘಡಗಳು ಸಂಭವಿಸುತ್ತಲೇ ಇವೆ. ಎಲ್ಲ ಪ್ರಕರಣಗಳೂ ಪೊಲೀಸ್ ಠಾಣೆ ಮೆಟ್ಟಿಲೇರುವುದಿಲ್ಲ. ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಥವಾ ಗುಂಡಿಯಿಂದಾಗುವ ಅಪಘಾತ ಎಂದು ನಮೂದಾಗುವುದು ವಿರಳ. ರಸ್ತೆ ಗುಂಡಿಯಿಂದ ಆಗುವ ನೂರಾರು ಅಪಘಾತ ಪ್ರಕರಣಗಳು ಜಗಳಗಳಲ್ಲೇ ಮುಕ್ತಾಯವಾಗುತ್ತವೆ.
‘ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲಾಗುತ್ತಿದೆ, ನಿತ್ಯವೂ ಕೆಲಸ ಮಾಡುತ್ತಿದ್ದೇವೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ಹೇಳುತ್ತಿದ್ದರೂ, ಗುಂಡಿ ಇಲ್ಲದ ರಸ್ತೆಯನ್ನು ಕಾಣದ ಸ್ಥಿತಿ ನಗರದಲ್ಲಿದೆ. ಗುಂಡಿಗಳಿಂದ ದ್ವಿಚಕ್ರ ವಾಹನಗಳು ಅತಿಹೆಚ್ಚು ಅಪಘಾತಕ್ಕೆ ಒಳಗಾಗುತ್ತಿವೆ. ಗುಂಡಿ ತಪ್ಪಿಸುವ ಅಥವಾ ಅನಿವಾರ್ಯವಾಗಿ ಅದರೊಳಗೆ ಇಳಿದ ದ್ವಿಚಕ್ರ ವಾಹನದ ಚಾಲಕ ನಿಯಂತ್ರಣ ಕಳೆದುಕೊಂಡು ಬೀಳುವ ಪ್ರಕರಣಗಳು ಹೆಚ್ಚಿವೆ. ಒಬ್ಬ ವಾಹನ ಸವಾರ ಬೀಳುವುದರಿಂದ ಹಲವು ಸಂದರ್ಭದಲ್ಲಿ ಇನ್ನೊಂದು ಅಥವಾ ಇನ್ನಷ್ಟು ವಾಹನಗಳ ಸವಾರರು ಬೀಳುತ್ತಾರೆ. ಸರಣಿ ಅಪಘಾತಗಳೂ ಸಂಭವಿಸುತ್ತಿವೆ.
ಪುರಭವನದ ಬಳಿ ರಸ್ತೆಯಲ್ಲಿನ ಗುಂಡಿಯಿಂದಾಗಿ ಪ್ರಯಾಸಪಡುವ ವಾಹನ ಸವಾರರು
ಆಟೊ ಚಾಲಕರಿಗೂ ರಸ್ತೆ ಗುಂಡಿಗಳು ಸಿಂಹಸ್ವಪ್ನವಾಗಿವೆ. ಮುಂದಿನ ಚಕ್ರ ಅಥವಾ ಹಿಂದಿನ ಒಂದು ಚಕ್ರ ಗುಂಡಿಯಲ್ಲಿ ಇಳಿದರೆ, ನಿಯಂತ್ರಣ ಕಷ್ಟಸಾಧ್ಯ. ಅದರಿಂದ ಆಟೊ ಪಲ್ಟಿಯಾಗುವ ಅಥವಾ ಪಕ್ಕದ ವಾಹನದ ಮೇಲೆ ಬೀಳುವ ಪ್ರಕರಣಗಳೂ ನಿತ್ಯ ನಗರದ ಹಲವು ಪ್ರದೇಶಗಳಲ್ಲಿ ಆಗುತ್ತಿವೆ.
‘ಎಸ್‌ಜೆಪಿ ಪಾರ್ಕ್ ರಸ್ತೆ, ಕೆ.ಆರ್. ಮಾರ್ಕೆಟ್‌ನಲ್ಲಿ ಸಣ್ಣದೊಂದು ಮಳೆಯಾದರೂ ರಸ್ತೆಯಲ್ಲೇ ನೀರಿರುತ್ತದೆ. ಈ ರಸ್ತೆಗಳಲ್ಲಿ ಗುಂಡಿಗಳು ಎಲ್ಲಿವೆ, ಎಲ್ಲಿಲ್ಲ ಎಂದು ಹೇಳಲು ಅಸಾಧ್ಯ. ಪ್ರತಿ ಬಾರಿ ಮಳೆ ಬಂದಾಗಲೂ ಮಳೆನೀರು ತುಂಬಿದ ರಸ್ತೆ–ಗುಂಡಿಗೆ ವ್ಯತ್ಯಾಸವೇ ಇರುವುದಿಲ್ಲ. ಪ್ರತಿ ಬಾರಿ ಮಳೆ ಬಂದಾಗಲೂ ಆಟೊ, ದ್ವಿಚಕ್ರ ವಾಹನಗಳ ಸವಾರರು ಗುಂಡಿ ಕಾಣದೆ ಬೀಳುತ್ತಲೇ ಇರುತ್ತಾರೆ’ ಎಂದು ವ್ಯಾಪಾರಿ ಮೊಹಮದ್ ಶೇಖ್ ಹೇಳಿದರು.
‘ಹಳೇ ಮದ್ರಾಸ್ ರಸ್ತೆಯಲ್ಲಿ ನಿತ್ಯ ಎಲ್ಲ ಸಮಯದಲ್ಲೂ ವಾಹನ ದಟ್ಟಣೆ ಇದ್ದೇ ಇರುತ್ತದೆ. ಬಸ್, ಲಾರಿಗಳ ಮಧ್ಯೆ ದ್ವಿಚಕ್ರ ವಾಹನಗಳು ಸಂಚರಿಸುವುದು ಕಷ್ಟಕರ. ಮಳೆ ಬಂದಾಗ ನೀರು ತುಂಬಿದ ಗುಂಡಿಗಳಿಂದ ಹಲವು ಬಾರಿ ಬಿದ್ದಿದ್ದಿದೆ. ನನ್ನ ಸ್ನೇಹಿತರೂ ಇಂತಹ ಅಪಘಾತಗಳಿಗೆ ಒಳಗಾಗಿದ್ದಾರೆ’ ಎಂದು ಇಂದಿರಾನಗರದ ನಿವಾಸಿ ರಘು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.