ADVERTISEMENT

ವಸ್ತುಗಳ ಪುನರ್‌ಬಳಕೆಗೆ ಕಾಯ್ದೆ ತರುತ್ತೇವೆ: ಈಶ್ವರ ಖಂಡ್ರೆ

‘ಪರಿಸರ ಸುಸ್ಥಿರತೆ ದಕ್ಷಿಣ ಭಾರತ ಸಮಾವೇಶದಲ್ಲಿ ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 20:25 IST
Last Updated 7 ಜನವರಿ 2026, 20:25 IST
<div class="paragraphs"><p>ನಗರದಲ್ಲಿ ಆಯೋಜಿಸಿರುವ ‘ಪರಿಸರ ಸುಸ್ಥಿರತೆ’ ಕುರಿತ ಎರಡು ದಿನಗಳ ಸಮಾವೇಶ</p></div>

ನಗರದಲ್ಲಿ ಆಯೋಜಿಸಿರುವ ‘ಪರಿಸರ ಸುಸ್ಥಿರತೆ’ ಕುರಿತ ಎರಡು ದಿನಗಳ ಸಮಾವೇಶ

   

ಬೆಂಗಳೂರು: ‘ಪರಿಸರದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳನ್ನು ತಡೆಯುವ ನಿಟ್ಟಿನಲ್ಲಿ ವಸ್ತುಗಳ ಪುನರ್‌ಬಳಕೆಗೆ ಹೆಚ್ಚು ಒತ್ತು ನೀಡಲು ಕಠಿಣ ಕಾಯ್ದೆ ರೂಪಿಸಲಾಗುವುದು’ ಎಂದು ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವ  ಈಶ್ವರ ಬಿ. ಖಂಡ್ರೆ ಹೇಳಿದರು.

ಪರಿಸರ ಸಂರಕ್ಷಣೆ ವಲಯದಲ್ಲಿ ಕೆಲಸ ಮಾಡುತ್ತಿರುವ ಫೆವಾರ್ಡ್‌, ವಿಶ್ವ ಯುವಕ ಕೇಂದ್ರ, ಡಿಜಿಪ್ಲಿಕ್ ಸಂಸ್ಥೆಗಳು ನಗರದಲ್ಲಿ ಆಯೋಜಿಸಿರುವ ‘ಪರಿಸರ ಸುಸ್ಥಿರತೆ’ ಕುರಿತ ಎರಡು ದಿನಗಳ ದಕ್ಷಿಣ ಭಾರತ ಪ್ರತಿನಿಧಿಗಳ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ADVERTISEMENT

‘ಮನುಷ್ಯನ ಜೀವನ ಶೈಲಿ ಬದಲಾದ ನಂತರವೂ ಎಲ್ಲವೂ ದುರ್ಬಳಕೆ ಹಂತಕ್ಕೆ ಬಂದಿದೆ. ನಮ್ಮ ಕ್ಷಣಿಕ ಬದುಕಿಗೆ ಏನೆಲ್ಲ ವಸ್ತುಗಳನ್ನು ಬಳಸಿ ತ್ಯಾಜ್ಯ ಸೃಷ್ಟಿಸುತ್ತಿದ್ದೇವೆ ಎಂದು ಗಮನಿಸಿದರೆ ಅದರ ಅರಿವು ಆಗಬಹುದು. ನಾವು ಬಳಸುವ ವಸ್ತುಗಳನ್ನು ಮರು ಬಳಕೆ ಮಾಡುವ ಮನೋಭಾವ ಬೆಳೆಸಲೇಬೇಕು. ಕಾಯ್ದೆ ಮೂಲಕವೂ ಇದನ್ನು ಅನುಷ್ಠಾನಗೊಳಿಸಬೇಕಿದೆ. ಐರೋಪ್ಯ ದೇಶಗಳಲ್ಲಿ ಮರುಬಳಕೆ ವಲಯ ವೃತ್ತಾಕಾರದ ಆರ್ಥಿಕ ಮಾದರಿಯಾಗಿ ಬೆಳೆದಿದೆ. ಇದನ್ನು ನಮ್ಮಲ್ಲೂ ಅಳವಡಿಸಿಕೊಂಡರೆ ಪರಿಸರದ ಹೊರೆ ಕಡಿಮೆ ಮಾಡಬಹುದು’ ಎಂದು ಸಲಹೆ ನೀಡಿದರು.

‘ಪರಿಸರ ಸುಸ್ಥಿರತೆಗೆ ವಿಶ್ವಸಂಸ್ಥೆ ನಾಲ್ಕು ದಶಕಗಳ ಹಿಂದೆ ಘೋಷಣೆ ಮಾಡಿ ನೀತಿಗಳನ್ನು ಜಾರಿಗೊಳಿಸಿದೆ. ಈ ನಿಟ್ಟಿನಲ್ಲಿ ಭಾರತದಲ್ಲೂ ಚಟುವಟಿಕೆಗಳು ನಡೆಯುತ್ತಿವೆ. ಹವಾಮಾನ ವೈಪರಿತ್ಯದ ಅನಾಹುತಗಳನ್ನು ತಗ್ಗಿಸುವ ಪ್ರಯತ್ನವೂ ಹೆಚ್ಚಿಸಬೇಕಿದೆ. ತ್ಯಾಜ್ಯಗಳು ನದಿ ಸೇರುವುದನ್ನು ತಪ್ಪಿಸಬೇಕು. ಸಂಯೋಜಿತ ಸಂಶೋಧನಾ ಚಟುವಟಿಕೆ, ಪರಿಸರ ಸ್ನೇಹಿ ಯೋಜನೆಗಳ ಜೊತೆಗೆ ಬೇರೆ ಕಡೆಯ ಮಾದರಿ ಅಭ್ಯಾಸಗಳನ್ನು ಎಲ್ಲೆಡೆ ಬಳಸಿಕೊಳ್ಳಬೇಕು’ ಎಂದು ಹೇಳಿದರು.

‘ಹವಾಮಾನ ಬದಲಾವಣೆಯಿಂದ ದುಷ್ಪರಿಣಾಮ ಉಂಟಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಯಾಗಿದೆ. ಸುನಾಮಿ, ಮೇಘಸ್ಪೋಟಗಳೂ ಹೆಚ್ಚಿವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಮಳೆ ಮಿತಿ ಮೀರಿ ಸುರಿದಿದ್ದರಿಂದ ಸುಮಾರು ₹20 ಸಾವಿರ ಕೋಟಿ ಮೌಲ್ಯದ ಬೆಳೆ ಹಾನಿಯಾಯಿತು. ಸರ್ಕಾರ ₹2 ಸಾವಿರ ಕೋಟಿ ಪರಿಹಾರ ನೀಡಿದರೂ ನಷ್ಟದ ಪ್ರಮಾಣದಿಂದ ರೈತರು ತೊಂದರೆ ಅನುಭವಿಸಿದರು’ ಎಂದು ತಿಳಿಸಿದರು.

ವಿಶ್ವಯುವಕ ಕೇಂದ್ರದ ಉದಯಶಂಕರ್ ಸಿಂಗ್‌, ಪಶುಸಂಗೋಪನೆ ಶ್ರೇಷ್ಠತೆಯ ಕೇಂದ್ರದ ನಿರ್ದೇಶಕ ಡಾ.ಪಿ.ಎಸ್‌. ಮಹೇಶ್‌, ಎಂಎಸ್‌ಎಂಇ ಹಾಗೂ ನವೋದ್ಯಮಗಳ ಸಂಘದ ರಾಜ್ಯಾಧ್ಯಕ್ಷೆ ಛಾಯಾಗಾಂಧಿ, ಡಿಜಿಫ್ಲಿಕ್‌ನ ಪಿ.ಸುಬ್ರಮಣಿ, ಫೆವಾರ್ಡ್‌ ಸಂಸ್ಥೆಯ ಮಹೇಶ್‌ಚಂದ್ರ ಗುರು, ಅನಿಲ್ ಕುಮಾರ್ ಬೆಲ್ದಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.