‘ಬೆಂಗಳೂರು ನಡಿಗೆ’ ಅಭಿಯಾನದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ‘ಮುಂದಿನ ದಿನಗಳಲ್ಲಿ ಐಟಿ- ಬಿಟಿ ಕಂಪನಿಗಳ ಜೊತೆ ನಾನು ಹಾಗೂ ಐಟಿ, ಕೈಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರು ಪ್ರತ್ಯೇಕವಾಗಿ ಸಭೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಕೆ.ಆರ್. ಪುರದ ಟಿ.ಸಿ. ಪಾಳ್ಯ ವೆಂಗಯ್ಯ ಪಾರ್ಕ್‌ನಲ್ಲಿ ‘ಬೆಂಗಳೂರು ನಡಿಗೆ’ ಅಭಿಯಾನದ ಅಂಗವಾಗಿ ಶನಿವಾರ ‘ನಾಗರಿಕರೊಂದಿಗೆ ಸಂವಾದ’ ನಡೆಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
‘ಟೀಕೆ ಟಿಪ್ಪಣಿ ಮಾಡುವವರಿಗೆ ನಮ್ಮ ಕೆಲಸವೇ ಉತ್ತರ ನೀಡುತ್ತದೆ. ನಾವು ನಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗುತ್ತೇವೆ. ನಾವು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಭಗವಂತ ಹಾಗೂ ಜನರು ನಮಗೆ ಆಶೀರ್ವಾದ ಮಾಡಿದ್ದು, ನಾವು ಅವರ ಸೇವೆ ಮಾಡುತ್ತೇವೆ’ ಎಂದರು.
‘ನೂತನ ಐದು ಪಾಲಿಕೆಗಳು ಬೆಂಗಳೂರಿನ ಅಭಿವೃದ್ಧಿಯಲ್ಲಿ ಇತಿಹಾಸ ಸೃಷ್ಟಿಸಲಿವೆ. ಬೆಂಗಳೂರು ನಗರದಿಂದ ₹ 6 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಇದರಲ್ಲಿ ಬೆಂಗಳೂರು ನಗರ ಪೂರ್ವ ಪಾಲಿಕೆ 1600 ಕೋಟಿ ರೂಪಾಯಿ ಪಾಲು ಹೊಂದಿದೆ. ಈ ಮೊದಲು ಎಲ್ಲಾ ಭಾಗಗಳ ತೆರಿಗೆ ಹಂಚಿಕೆಯಾಗುತ್ತಾ ಇತ್ತು. ಈಗ ಆಯಾ ಪ್ರದೇಶಗಳ ತೆರಿಗೆ ಅಲ್ಲಿಯೇ ವಿನಿಯೋಗವಾಗಲಿದೆ’ ಎಂದು ತಿಳಿಸಿದರು.
‘ಕೆ.ಆರ್.ಪುರ ಹಾಗೂ ಮಹದೇವಪುರ ಒಳಗೊಂಡಿರುವ ಬೆಂಗಳೂರು ಪೂರ್ವ ಪಾಲಿಕೆ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಶ್ರೀಮಂತ ಪಾಲಿಕೆ. ಈ ಭಾಗದಲ್ಲಿ ಅನೇಕ ಐಟಿ ಬಿಟಿ ಕಂಪನಿಗಳಿದ್ದು, ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ 74ನೇ ತಿದ್ದುಪಡಿ ಅಡಿಯಲ್ಲಿ ಪಾಲಿಕೆ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಅಪಾರ ಹಣ ವಿನಿಯೋಗ ಮಾಡಬಹುದು. ಈ ಹಿಂದೆ ಒಂದೇ ಪಾಲಿಕೆ ಇದ್ದಾಗ ಈ ಭಾಗದಿಂದ ಬರುವ ತೆರಿಗೆ ಆದಾಯವನ್ನು ಬೆಂಗಳೂರಿನ ಇತರೆ ಭಾಗಗಳ ಅಭಿವೃದ್ಧಿಗೆ ಬಳಕೆಯಾಗುತ್ತಿತ್ತು. ಈಗ ಹೊಸ ಕಾಯ್ದೆ ಮೂಲಕ ಈ ಭಾಗದಲ್ಲಿ ಕ್ರೂಢೀಕರಣವಾಗುವ ಅಷ್ಟೂ ಸಂಪನ್ಮೂಲವನ್ನು ಈ ಪಾಲಿಕೆಯ 50 ವಾರ್ಡ್ ಗಳ ಅಭಿವೃದ್ಧಿಗೆ ನೀಡಲಾಗುವುದು. ಇದರಿಂದ ಈ ಭಾಗದ ಐಟಿ ವಲಯ ಹಾಗೂ ನಾಗರೀಕರಿಗೆ ಉತ್ತಮ ಸೌಲಭ್ಯ ಕಲ್ಪಿಸಬಹುದಾಗಿದೆ‘ ಎಂದು ವಿವರ ನೀಡಿದರು.
‘ಜನರ ಸಮಸ್ಯೆಗಳ ಶೀಘ್ರ ನಿವಾರಣೆಗೆ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಟೆಂಡರ್ ಇಲ್ಲದೇ ಪಾಲಿಕೆಯ ಕೌನ್ಸಿಲ್ ₹ 10 ಕೋಟಿ ಮೊತ್ತದ ಕಾಮಗಾರಿಗಳಿಗೆ ಹಾಗೂ ಪಾಲಿಕೆ ಆಯುಕ್ತರು ₹ 3 ಕೋಟಿ ಖರ್ಚು ಮಾಡಲು ಅವಕಾಶ ನೀಡಲಾಗಿದೆ. ಬಿಬಿಎಂಪಿ ಇದ್ದಾಗ ₹ 10 ಕೋಟಿ ಖರ್ಚು ಮಾಡಬಹುದಾಗಿತ್ತು. ಈಗ ₹ 50 ಕೋಟಿಗೆ ಏರಿಕೆಯಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ಐದು ಪಟ್ಟು ಹೆಚ್ಚು ಅವಕಾಶ ದೊರೆತಿದೆ’ ಎಂದು ವಿವರಿಸಿದರು.
‘ಬೆಂಗಳೂರಿನ ಜನತೆಗೆ ನಮ್ಮ ಸರ್ಕಾರ ದೀಪಾವಳಿ ಕೊಡುಗೆ ನೀಡಿದೆ. ಕಂದಾಯ ಭೂಮಿಯಲ್ಲಿ ಕಟ್ಟಿರುವ ಮನೆಗಳಿಗೆ 'ಬಿ' ಖಾತೆ ಹೊಂದಿರುವ ಹಾಗೂ ಹೊಂದಿರದವರು ₹ 500 ಶುಲ್ಕ ಹಾಗೂ ಆಸ್ತಿ ಮೌಲ್ಯದ ಶೇ 5 ರಷ್ಟು ಹಣ ಪಾವತಿ ಮಾಡಿದರೆ 'ಎ' ಖಾತೆ ನೀಡಲಾಗುವುದು’ ಎಂದರು.
‘ಕೆ.ಆರ್ ಪುರಂ ಭಾಗದಲ್ಲಿ ರಸ್ತೆ ಒತ್ತುವರಿ ಪ್ರಕರಣಗಳು ಹೆಚ್ಚಿವೆ. ಒಬ್ಬೊಬ್ಬರು ಐದಾರು ನಿವೇಶಗಳಲ್ಲಿ ಅಕ್ರಮ ನಿರ್ಮಾಣಗಳನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಕಟ್ಟುವ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ನೆಲಸಮ ಮಾಡಲಾಗುವುದು. 30×40 ಅಳತೆಯ ಕಟ್ಟಡಗಳಿಗೆ ಓಸಿ ಸಿಸಿ ವಿನಾಯಿತಿ ನೀಡಲಾಗಿದೆ. ಇದು ತಾತ್ಕಾಲಿಕ ವಿನಾಯಿತಿ. ಹೀಗಾಗಿ ಮುಂದೆ ಎಲ್ಲರೂ ಕಟ್ಟಡ ನಕ್ಷೆ ಅನುಮೋದನೆ ಪಡೆದುಕೊಳ್ಳಿ. ಕಡಿಮೆ ವಿಸ್ತೀರ್ಣದ ನಿವೇಶನದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಹಡಿಗಳನ್ನು ನಿರ್ಮಾಣ ಮಾಡುವುದು, ಸೆಟ್‌ಬ್ಯಾಕ್ ಬಿಡದೆ ಒತ್ತೊತ್ತಾಗಿ ಮನೆ ಕಟ್ಟುವುದಕ್ಕೆ ಅವಕಾಶ ನೀಡುವುದಿಲ್ಲ’ ಎಂದು ತಿಳಿಸಿದರು.
‘ಆಸ್ಪತ್ರೆ, ಅಕ್ರಮ ಭೂ ಒತ್ತುವರಿ, ಸಂತೆಯ ಸ್ಥಳಾಂತರ, ಸಂಚಾರ ದಟ್ಟಣೆ ನಿವಾರಣೆಗೆ ಮೇಲ್ಸೇತುವೆ, ಪಾದಚಾರಿ ಮೇಲ್ಸೇತುವೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ ವಿಚಾರವಾಗಿ ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಈ ಎಲ್ಲಾ ವಿಚಾರಗಳಿಗೂ ನಾವು ಶೀಘ್ರ ಸ್ಪಂದಿಸಲಿದ್ದೇವೆ. ಪಾದಚಾರಿ ಮಾರ್ಗ ಒತ್ತುವರಿ ತಪ್ಪಿಸಲು ರಸ್ತೆ ಬದಿ ವ್ಯಾಪಾರಿಗಳಿಗೆ ತಳ್ಳುವ ಗಾಡಿ ನೀಡಲಾಗಿದೆ. ಶೇ 10-30 ರಷ್ಟು ಹಣ ಪಾವತಿಸಿದರೆ ವಾಹನ ನೀಡುವ ವ್ಯವಸ್ಥೆ ಪಾಲಿಕೆಯಲ್ಲಿದೆ. ನಗರದಲ್ಲಿ ಸುಮಾರು 30 ಸಾವಿರ ರಸ್ತೆ ವ್ಯಾಪಾರಿಗಳಿದ್ದಾರೆ. ಎಲ್ಲೆಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದು ನಾಗರಿಕರೊಬ್ಬರು ಮನವಿ ನೀಡಿದ್ದಾರೆ. ಇವೆಲ್ಲದಕ್ಕೂ ಪ್ರಮುಖ ಆದ್ಯತೆ ನೀಡಿ ಆದಷ್ಟು ಬೇಗ ಬಗೆಹರಿಸಲಾಗುವುದು’ ಎಂದು ಹೇಳಿದರು.
‘ಕೆ.ಆರ್.ಪುರ ಸಂತೆ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಜನಸಂಖ್ಯೆ ಹೆಚ್ಚಳವಾದ ಕಾರಣಕ್ಕೆ ಈಗ ತೊಂದರೆಯಾಗುತ್ತಿದೆ. ಸಂತೆ ನಡೆಯುವ ಜಾಗವನ್ನು ನಾನು ಪರಿಶೀಲನೆ ಮಾಡುತ್ತೇನೆ ಹಾಗೂ ಅದನ್ನು ಎಲ್ಲಿಗೆ ಸ್ಥಳಾಂತರ ಮಾಡಬಹುದು ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.
‘ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ನೀಡಲಾಗಿದ್ದು, ಮೇಲ್ಸೇತುವೆ, ಮೆಟ್ರೊ ಸೌಕರ್ಯ ಇದೆ. ಟನಲ್ ರಸ್ತೆಯನ್ನು ಕಲ್ಪಿಸಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.