ADVERTISEMENT

ನಮ್ಮ ಭೂಮಿ ನಮ್ಮ ಹಕ್ಕು: ರೈತರ ಸ್ಪಷ್ಟೋಕ್ತಿ

ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆ ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 20:12 IST
Last Updated 24 ಮಾರ್ಚ್ 2021, 20:12 IST
ಪ್ರತಿಭಟನಕಾರರು ಬಿಡಿಎ ಕೇಂದ್ರ ಕಚೇರಿ ತಲುಪುವ ಮುನ್ನವೇ ಪೊಲೀಸರು ಬಂಧಿಸಿದರು– ಪ್ರಜಾವಾಣಿ ಚಿತ್ರ
ಪ್ರತಿಭಟನಕಾರರು ಬಿಡಿಎ ಕೇಂದ್ರ ಕಚೇರಿ ತಲುಪುವ ಮುನ್ನವೇ ಪೊಲೀಸರು ಬಂಧಿಸಿದರು– ಪ್ರಜಾವಾಣಿ ಚಿತ್ರ   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಡಾ.ಶಿವರಾಮ ಕಾರಂತ ಬಡಾವಣೆ ಯೋಜನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಈ ಬಡಾವಣೆಯ ಸಂತ್ರಸ್ತರು ಬುಧವಾರ ಇಲ್ಲಿ ಪ್ರತಿಭಟನೆ ನಡೆಸಿದರು.

‘ನಮ್ಮ ಭೂಮಿ ನಮ್ಮ ಹಕ್ಕು. ನಮ್ಮ ಇಚ್ಛೆಗೆ ವಿರುದ್ದವಾಗಿ ಜಮೀನು ಕಿತ್ತುಕೊಳ್ಳಲು ಬಿಡುವುದಿಲ್ಲ’ ಎಂದು ಈ ಬಡಾವಣೆಗಾಗಿ ಭೂಸ್ವಾಧೀನಪಡಿಸಲು ಗೊತ್ತುಪಡಿಸಿರುವ ಗ್ರಾಮಗಳ ರೈತರು ಸ್ಪಷ್ಟ ಸಂದೇಶ ಸಾರಿದರು.

ಶಿವರಾಮ ಕಾರಂತ ಬಡಾವಣೆ ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಅರಮನೆ ಮೈದಾನದ ಬಳಿಯಿಂದ ಬಿಡಿಎ ಕೇಂದ್ರ ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಲು ಪ್ರತಿಭಟನಕಾರರು ಉದ್ದೇಶಿಸಿದ್ದರು. ಆದರೆ, ಪೊಲೀಸರು ಅವಕಾಶ ನೀಡಲಿಲ್ಲ. ಬಿಡಿಎ ಕಚೇರಿ ತಲುಪುವ ಮುನ್ನವೇ ಪ್ರತಿಭಟನಕಾರರನ್ನು ತಡೆದರು. ಬಳಿಕ ರೈತರು ಮೌರ್ಯ ವೃತ್ತದಲ್ಲಿ ಪ್ರತಿಭಟನೆ ಮುಂದುವರಿಸಿದರು.

ADVERTISEMENT

ರೈತಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, 'ಜನ ನ್ಯಾಯ ಕೇಳಲು ಬಂದಾಗ ಪೊಲೀಸರನ್ನು ಮುಂದೆ ಬಿಟ್ಟು ತಡೆಯುವುದು ಪ್ರಜಾಪ್ರಭುತ್ವವೇ. ಈ ಪ್ರವೃತ್ತಿ ಮುಂದುವರಿಸಿದರೆ ನಿಮ್ಮ ಗುಂಡಿಯನ್ನು ನೀವೇ ತೋಡಿಕೊಂಡಂತೆ' ಎಂದು ಎಚ್ಚರಿಕೆ ನೀಡಿದರು.

'ಈ ಬಡಾವಣೆ ಬಗ್ಗೆ ಪರಿಶೀಲಿಸಲು ಸುಪ್ರಿಂ ಕೋರ್ಟ್ 2018ರಲ್ಲಿ ನ್ಯಾ.ಕೇಶವನಾರಾಯಣ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಅದರ ವರದಿ ಏನಾಯಿತು‘ ಎಂದು ಪ್ರಶ್ನಿಸಿದರು.

'ನ್ಯಾ.ಕೇಶವ ನಾರಾಯಣ ಸಮಿತಿ ವರದಿ ನೀಡಿದ ಬಳಿಕವೂ ಪ್ರಾಧಿಕಾರವು ಸುಪ್ರೀಂ ಕೋರ್ಟ್‌ ದಾರಿ ತಪ್ಪಿಸಿದೆ. ಸುಪ್ರೀಂ ಕೋರ್ಟ್ ಕೂಡಾ ರೈತರ ಅರ್ಜಿಯನ್ನು ಪರಿಗಣಿಸಲೇ ಇಲ್ಲ. ಇದರಿಂದ ಸರ್ಕಾರ ನಡೆಸಿದ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಸಿಗಲಿದೆ' ಎಂದರು.

‘ನಾವು ಸುಪ್ರೀಂ ಕೋರ್ಟ್ ಪ್ರಸ್ತುತ ರಚಿಸಿರುವ ನ್ಯಾ.ಚಂದ್ರಶೇಖರ ಸಮಿತಿಯ ಪರವೂ ಇಲ್ಲ; ವಿರುದ್ಧವೂ ಇಲ್ಲ. ಸಮಿತಿ ನನಗೂ ನೋಟಿಸ್ ಜಾರಿ ಮಾಡಿದೆ. ಅದಕ್ಕೆ ಉತ್ತರಿಸುವೆ. ಈ ಬಡಾವಣೆ ನಿರ್ಮಾಣವಾದರೆ ರೈತರಿಗೆ ಅನ್ಯಾಯವಾಗುತ್ತದೆ. ಇದನ್ನು ಕೈಬಿಡಿ ಎಂದಷ್ಟೇ ನಮ್ಮ ಬೇಡಿಕೆ’ ಎಂದರು.

ಸ್ಥಳೀಯ ಮುಖಂಡ ಬೆಟ್ಟಹಳ್ಳಿ ವೆಂಕಟೇಶ್, 'ಬಿಡಿಎ ಅಧಿಕಾರಿಗಳು ಒಂದು ಪ್ರಕಟಣೆ ಹೊರಡಿಸಿ ಈ ಗ್ರಾಮಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನೀಡಿದ್ದ ಮಂಜೂರಾತಿಗಳನ್ನು ರದ್ದುಪಡಿಸಿದ್ದೇವೆ ಎಂದು ಹೇಳಿದ್ದಾರೆ. ಹಾಗಾದರೆ ಆ ಮಂಜೂರಾತಿ ನೀಡಿದ್ದ ಅಧಿಕಾರಿಗಳ ಸಂಬಳ ಮತ್ತು ಭತ್ಯೆಯನ್ನೂ ಹಿಂದಕ್ಕೆ ಪಡೆಯುತ್ತೀರಾ' ಎಂದು ಪ್ರಶ್ನಿಸಿದರು.

ರೈತ ಸಂಘದ ಮುಖಂಡ ರಘು, ಸ್ಥಳೀಯ ಪ್ರಮುಖರಾದ ಅಬ್ಬಿಗೆರೆ ರಾಜಣ್ಣ, ಕೃಷ್ಣಪ್ಪ, ಪಂಚಾಕ್ಷರಿ, ನಾಗಭೂಷಣ್‌ ಮತ್ತಿತರರು ನೇತೃತ್ವ ವಹಿಸಿದ್ದರು.

ಸಿ.ಎಂ. ಭರವಸೆ– ಪ್ರತಿಭಟನೆ ಕೈಬಿಟ್ಟ ರೈತರು

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪ್ರತಿಭಟನಕಾರರನ್ನು ಕರೆಸಿಕೊಂಡು ಮಾತುಕತೆ ನಡೆಸಿದರು.

‘ಈ ಯೋಜನೆ ಕೈಬಿಡುವ ಬಗ್ಗೆ ರಾಜ್ಯದ ಅಡ್ವೊಕೇಟ್‌ ಜನರಲ್‌ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ನಮ್ಮ ಸಮಕ್ಷಮದಲ್ಲಿ ಆಶ್ವಾಸನೆ ನೀಡಿದ್ದಾರೆ. ಅದರ ಆಧಾರದಲ್ಲಿ ಪ್ರತಿಭಟನೆ ಕೈಬಿಡುತ್ತಿದ್ದೇವೆ’ ಎಂದು ಕೋಡಿಹಳ್ಳಿ ಚಂದ್ರಶೇಖರ್‌ ತಿಳಿಸಿದರು.

‘ಈ ನಡುವೆ ಬಿಡಿಎ ಅಧ್ಯಕ್ಷರು ರಾಜಕೀಯ ಮಾಡಿದರೆ ನಾವು ಮತ್ತೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.