ADVERTISEMENT

ವೈಟ್‌ಟಾಪಿಂಗ್‌: 3ನೇ ಹಂತಕ್ಕೆ ಮಂಜೂರಾತಿ?

ಮೂಲೆ ಸೇರಿದ್ದ ಕಡತಗಳನ್ನು ಮತ್ತೆ ತರಿಸಿಕೊಂಡ ಮುಖ್ಯಮಂತ್ರಿ * ಉನ್ನತ ಅಧಿಕಾರಿಗಳ ಜೊತೆ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 20:31 IST
Last Updated 29 ನವೆಂಬರ್ 2021, 20:31 IST
ವೈಟ್‌ಟಾಪಿಂಗ್‌
ವೈಟ್‌ಟಾಪಿಂಗ್‌   

ಬೆಂಗಳೂರು: ರಾಜ್ಯ ಸರ್ಕಾರವು, 2019ರ ಮಧ್ಯದಲ್ಲಿ ಶೈತ್ಯಾಗಾರಕ್ಕೆ ಸೇರಿಸಲಾಗಿದ್ದ ವೈಟ್‌ಟಾಪಿಂಗ್‌ ಯೋಜನೆಯ ಮೂರನೇ ಹಂತಕ್ಕೆ ಮಂಜೂರಾತಿ ನೀಡಲು ಮತ್ತೆ ಆಸಕ್ತಿ ತೋರಿಸಿದೆ.

ವೈಟ್‌ಟಾಪಿಂಗ್‌ ಯೋಜನೆಯ ಮೂರನೇ ಹಂತವನ್ನು ಸರ್ಕಾರ ₹ 1,154 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಈ ಹಿಂದೆ ಯೋಜನೆ ರೂಪಿಸಿತ್ತು. ಆದರೆ, ಇದು ಇನ್ನೂ ಅನುಷ್ಠಾನವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಗೆ ವಿಶೇಷ ಅನುದಾನ ಒದಗಿಸುವ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವೈಟ್‌ಟಾಪಿಂಗ್‌ ಮೂರನೇ ಹಂತದಲ್ಲಿ 121.70 ಕಿ.ಮೀ ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ತೀರ್ಮಾನಿಸಿತ್ತು. ಆದರೆ, ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಬಳಿಕ ಈ ಯೋಜನೆಗೆ ಮಂಜೂರಾಗಿದ್ದ ಅನುದಾನವನ್ನು ಹಿಂಪಡೆದಿದ್ದರು.ಈ ಯೋಜನೆಯ ಟೆಂಡರ್‌ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಹಾಗೂ ವೈಟ್‌ಟಾಪಿಂಗ್‌ ಯೋಜನೆಯ ಮೊದಲ ಹಂತ (94 ಕಿ.ಮೀ) ಹಾಗೂ ಎರಡನೇ ಹಂತದ(63 ಕಿ.ಮೀ) ಕಾಮಗಾರಿಗಳ ಅನುಷ್ಠಾನ ವಿಳಂಬವಾಗಿದೆ ಎಂಬ ಟೀಕೆ ವ್ಯಕ್ತವಾಗಿದ್ದರಿಂದ ಈ ನಿರ್ಧಾರ ತಳೆದಿದ್ದರು.

ADVERTISEMENT

ಮೂರು ವರ್ಷಗಳವರೆಗೆ ಮರೆಯಲ್ಲೇ ಉಳಿದಿದ್ದ ಈ ಯೋಜನೆಯ ಕಡತಗಳನ್ನು ಮತ್ತೆ ಮುಖ್ಯಮಂತ್ರಿಯವರು ಇತ್ತೀಚೆಗೆ ತರಿಸಿಕೊಂಡಿದ್ದಾರೆ. ಈಗಾಗಲೇ ಪೂರ್ಣಗೊಂಡಿರುವ ಟೆಂಡರ್‌ ಪ್ರಕ್ರಿಯೆ ಪ್ರಕಾರ ಕಾಮಗಾರಿ ಗುತ್ತಿಗೆ ಪಡೆದ ಕಂಪನಿಗಳಿಗೇ ಕಾರ್ಯಾದೇಶ ನೀಡಬಹುದು ಅಥವಾ ಹೊಸತಾಗಿ ಟೆಂಡರ್‌ ಕರೆಯುವಂತೆ ಬಿಬಿಎಂಪಿಗೆ ಸೂಚಿಸಬಹುದು ಎಂದು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೂ ಹೊಂದಿರುವ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ.

ಒಟ್ಟು ಆರು ಪ್ಯಾಕೇಜ್‌ಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಮೂರನೇ ಹಂತದಲ್ಲಿ ಒಟ್ಟು 89 ರಸ್ತೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಪ್ರತಿ ಪ್ಯಾಕೇಜ್‌ 8 ರಿಂದ 19 ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಒಳಗೊಂಡಿದೆ. ಜೆಎಂಸಿ ಪ್ರಾಜೆಕ್ಟ್ಸ್‌, ಜೆಎಸ್‌ಪಿ ಪ್ರಾಜೆಕ್ಟ್ಸ್‌, ಬಿಎಸ್‌ಸಿಪಿಎಲ್‌ ಇನ್‌ಫ್ರಾಸ್ಟ್ರಕ್ಚರ್‌, ರಾಮಲಿಂಗಂ ಕನ್‌ಸ್ಟ್ರಕ್ಷನ್ಸ್‌, ಆರ್‌ಪಿಎನ್‌ ಇನ್‌ಫ್ರಾಟೆಕ್‌ ಹಾಗೂ ಆರ್‌ಪಿಪಿ ಇನ್‌ಫ್ರಾ ಪ್ರಾಜೆಕ್ಟ್ಸ್‌ಗಳು ಅತಿ ಕಡಿಮೆ ಮೊತ್ತ ನಮೂದಿಸಿದ ಕಂಪನಿಗಳು. ಈ ಯೋಜನೆಗೆ ರಾಜ್ಯ ಸರ್ಕಾರವೇ ಅನುದಾನ ನೀಡುತ್ತಿದೆ. ಹಾಗಾಗಿ ಈ ಟೆಂಡರ್‌ಗಳ ಕಡತಗಳಿಗೆ ಮುಖ್ಯಮಂತ್ರಿಯವರ ಅನುಮೋದನೆಗಾಗಿ ಈ ಗುತ್ತಿಗೆದಾರರು ಎದುರು ನೋಡುತ್ತಿದ್ದಾರೆ.

ಶೇ 19ರಷ್ಟು ಟೆಂಡರ್‌ ಪ್ರೀಮಿಯಂ

ವಿವಿಧ ಮೂಲಗಳ ಪ್ರಕಾರ, ಟೆಂಡರ್‌ ಪ್ರೀಮಿಯಂ ಮೊತ್ತ ಭಾರಿ ಹೆಚ್ಚು ಇರುವುದೇ ಈಗಾಗಲೇ ಅಂತಿಮಗೊಂಡಿರುವ ಟೆಂಡರ್‌ಗಳಿಗೆ ಮಂಜೂರಾತಿ ನೀಡುವುದಕ್ಕೆ ತೊಡಕಾಗಿಬಿಟ್ಟಿದೆ. ಪ್ರತಿ ಪ್ಯಾಕೇಜ್‌ನಲ್ಲೂ ಅತ್ಯಂತ ಕಡಿಮೆ ದರವನ್ನು ನಮೂದಿಸಿರುವ ಗುತ್ತಿಗೆದಾರರು ಉಲ್ಲೇಖಿಸಿರುವ ಮೊತ್ತವೇ ಅಂದಾಜು ಮೊತ್ತಕ್ಕಿಂತ ಶೇ 15ರಿಂದ ಶೇ 19ರಷ್ಟು ಹೆಚ್ಚು ಇದೆ.

* ಯೋಜನೆಗೆ ಮಂಜೂರಾತಿ ನೀಡುವ ಮುನ್ನವೇ ವೈಜ್ಞಾನಿಕ ಅಧ್ಯಯನ ಕೈಗೊಳ್ಳಬೇಕು. ವೈಟ್‌ಟಾಪಿಂಗ್‌ ಮಾಡಲಾದ ರಸ್ತೆಗಳು ಗುಂಡಿಗಳಿಂದ ಮುಕ್ತವಾಗಿವೆಯೇ ಎಂದೂ ತಜ್ಞರಿಂದ ಪರಿಶೀಲನೆ ನಡೆಸಬೇಕು. ಹೆಚ್ಚು ಕಾಂಕ್ರೀಟ್‌ ಎಂದರೆ ಹೆಚ್ಚು ಶಾಖ ಎಂದರ್ಥ

- ಶ್ರೀನಿವಾಸ ಅಲವಿಲ್ಲಿ, ಜನಾಗ್ರಹ

* ರಸ್ತೆ ಬಳಕೆದಾರರಲ್ಲಿ ಪಾದಚಾರಿಗಳ ಕುರಿತು ಹೆಚ್ಚಿನ ಕಾಳಜಿ ಅಗತ್ಯ. ಯಾವುದೇ ರಸ್ತೆ ಅಭಿವೃದ್ಧಿ ಯೋಜನೆ ಇರಲಿ, ಅದರಲ್ಲಿ ಪಾದಚಾರಿ ಸ್ನೇಹಿ ಮೂಲಸೌಕರ್ಯ ಅಳವಡಿಸಿಕೊಳ್ಳಬೇಕು. ರಸ್ತೆಯ ಮೇಲ್ಮೈ ನುಣುಪಾದಷ್ಟೂ ವಾಹನಗಳ ವೇಗವೂ ಹೆಚ್ಚುತ್ತದೆ

- ಅಖಿಲಾ ಸೂರಿ, ವರ್ಲ್ಡ್‌ ರಿಸೋರ್ಸಸ್ ಇನ್‌ಸ್ಟಿಟ್ಯೂಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.