ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಸಾಫ್ಟ್‌ವೇರ್ ಕಂಪನಿಯಲ್ಲಿ ₹87 ಕೋಟಿ ಮೌಲ್ಯದ ದತ್ತಾಂಶ ಕಳ್ಳತನ ಮಾಡಿದ್ದ ಕಂಪನಿಯ ಮಾಜಿ ಹಿರಿಯ ವ್ಯವಸ್ಥಾಪಕರ ವಿರುದ್ಧ ವೈಟ್‌ಫೀಲ್ಡ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾರತ್‌ಹಳ್ಳಿಯ ಅಮೇಡಿಯಸ್ ಸಾಫ್ಟ್‌ವೇರ್ ಲ್ಯಾಬ್ಸ್ ಕಂಪನಿಯ ಸಂಶೋಧನಾ ವಿಭಾಗದ ಮಾಜಿ ಹಿರಿಯ ವ್ಯವಸ್ಥಾಪಕ, ಐಟಿಪಿಎಲ್ ಮುಖ್ಯರಸ್ತೆಯ ಪ್ರೆಸ್ಟೀಜ್ ಶಾಂತಿನಿಕೇತನ್‌ನ ನಿವಾಸಿ ಅಶುತೋಷ್ ನಿಗಮ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಕಂಪನಿಯ ಪ್ರತಿನಿಧಿ ಜುಲ್ ಕಫೀಲ್ ಅವರು ದೂರು ನೀಡಿದ್ದಾರೆ.
ಅಶುತೋಷ್ ನಿಗಮ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 65, 66 ಮತ್ತು 66(ಸಿ)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೈಬರ್ ಅಪರಾಧ ವಿಭಾಗದ ಪೊಲೀಸರು ಹೇಳಿದರು.
‘2020ರ ಫೆಬ್ರುವರಿ 1ರಿಂದ ಅಶುತೋಷ್ ನಿಗಮ್ ಎಂಬುವವರು ಕಂಪನಿಯ ಸಂಶೋಧನಾ ವಿಭಾಗದ ಹಿರಿಯ ವ್ಯವಸ್ಥಾಪಕರಾಗಿ ಕೆಲಸಕ್ಕೆ ಸೇರಿದ್ದರು. ಕಂಪನಿಯ ಬಹುಕೋಟಿ ಮೌಲ್ಯದ ಸಾಫ್ಟ್‌ವೇರ್ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಅರಿವಿದ್ದ ಅಶುತೋಷ್ ನಿಗಮ್ ಅವರು ಕಳೆದ ಅ.11ರಂದು ಕಂಪನಿಯ ಅನುಮತಿಯಿಲ್ಲದೇ, ಭದ್ರತಾ ವ್ಯವಸ್ಥೆಗಳನ್ನು ದಾಟಿ ಅತ್ಯಂತ ರಹಸ್ಯವಾದ ‘ಸೋರ್ಸ್ ಕೋಡ್’ ಮತ್ತು ಇತರೆ ಗೋಪ್ಯ ದಾಖಲೆಗಳನ್ನು ತಮ್ಮ ವೈಯಕ್ತಿಕ ಇ–ಮೇಲ್ ಮೂಲಕ ಕಳ್ಳತನ ಮಾಡಿದ್ದಾರೆ. ₹87 ಕೋಟಿ ಮೌಲ್ಯದ ಡಿಜಿಟಲ್ ಆಸ್ತಿಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಲೆಕ್ಕ ಪರಿಶೋಧನೆ ವೇಳೆ ಪತ್ತೆ: ಕಂಪನಿಯ ಆಂತರಿಕ ಭದ್ರತಾ ತಪಾಸಣೆಯ ವೇಳೆ ದತ್ತಾಂಶ ಕಳವು ಮಾಡಿರುವುದು ಪತ್ತೆ ಆಗಿತ್ತು. ಕಂಪನಿಯ ಅಧಿಕಾರಿಗಳು ಡಿಜಿಟಲ್ ಸಾಕ್ಷ್ಯಗಳೊಂದಿಗೆ ಅಶುತೋಷ್ ಅವರನ್ನು ವಿಚಾರಣೆ ನಡೆಸಿದಾಗ, ಅವರು ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಜುಲ್ ಕಫೀಲ್ ಅವರು ದೂರಿನಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.