ಬೆಂಗಳೂರು: ಕನ್ನಡ ಸಾಹಿತ್ಯದಲ್ಲಿ ವಿಮರ್ಶಕರ ಸಂಖ್ಯೆ ಕಡಿಮೆ ಆಗಿದ್ದು, ಸಂಖ್ಯೆ ಹೆಚ್ಚಾಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜು ಅಭಿಪ್ರಾಯಪಟ್ಟರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿ ಶನಿವಾರ ಜಂಟಿಯಾಗಿ ಆಯೋಜಿಸಿದ್ದ ಸಮಕಾಲೀನ ವಿಮರ್ಶೆಯ ಸ್ವರೂಪ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
‘ವಿಮರ್ಶೆ ಕಷ್ಟದ ಕೆಲಸ. ಒಂದು ಪದ್ಯ ಬರೆಯುವುದು ಸುಲಭ. ಆದರೆ, ಗದ್ಯ ಬರೆಯುವುದು ಕಷ್ಟ. ಬಾಯಿಗೆ ಬಂದಂತೆ ಗೀಚುತ್ತಾನೆ ಎಂದು ಕೆಲವರು ಲೇವಡಿ ಮಾಡುತ್ತಾರೆ. ಆದರೆ, ಲೇಖಕ ಏನನ್ನು ಬರೆಯಬೇಕು ಎಂಬುದನ್ನು ಕಾಲ ನಿರ್ಣಯಿಸುತ್ತದೆ. ಎಲ್ಲಾ ಕಾಲದ ಲೇಖಕರು ಕಾಲ ಧರ್ಮವನ್ನು ಅನುಸರಿಸಿಯೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವುದು’ ಎಂದು ತಿಳಿಸಿದರು.
ವಿಮರ್ಶಾ ಪ್ರಜ್ಞೆ ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹಾಗೂ ದೀಪಾ ಅವರನ್ನು ಪ್ರಧಾನಿ ಅಭಿನಂದಿಸಲಿಲ್ಲ. ಪ್ರಧಾನಿ ಅವರನ್ನು ವಿಮರ್ಶೆ ಮಾಡುವವರು ಯಾರು? ಹಿಂದೆ ಅಡಿಗರು, ‘ನೆಹರು ನಿವೃತರಾಗುವುದಿಲ್ಲ’ ಎಂಬ ಪದ್ಯದ ಮೂಲಕ ವಿಮರ್ಶೆ ಮಾಡಿದ್ದರು ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಸಾಹಿತಿ ಹಂಪ ನಾಗರಾಜಯ್ಯ, ಕನ್ನಡ ಸಾಹಿತ್ಯಕ್ಕೆ ಎರಡೂ ಸಾವಿರ ವರ್ಷಗಳ ಪರಂಪರೆ ಇದೆ. ಅನೇಕ ಬದಲಾವಣೆಗಳನ್ನು ಮಾಡಿಕೊಂಡು ಬಂದಿದೆ. ಕನ್ನಡ ಸಾಹಿತ್ಯದ 21ನೇ ಶತಮಾನದ ಕಾಲಘಟ್ಟದಲ್ಲಿ ಯುವಜನರ ಬರವಣಿಗೆ ಅದ್ಬುತವಾಗಿದೆ. ಹೊಸಕಾಲದ ಲೇಖಕರ ಬರಹಗಳನ್ನು ಓದಲು ಸಂತೋಷವಾಗುತ್ತದೆ. ಪ್ರಗತಿಪರವಾದ, ಮೌಲಿಕವಾದ ಮತ್ತು ಅರ್ಥಗರ್ಭಿತವಾದ ಕೃತಿಗಳು ಬರುತ್ತಿವೆ ಎಂದರು.
ಬುಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳ ಮಹಾಪೂರವೇ ಬಂದಿದೆ. ಆದರೆ ಈ ವಿಚಾರದಲ್ಲಿ ದೇಶದ ಪ್ರಧಾನಿ ಮೌನ ವಹಿಸಿದ್ದು ಏಕೆ ಎಂಬುದು ಗೊತ್ತಿಲ್ಲ? ಎಂದು ಬೇಸರ ವ್ಯಕ್ತಪಡಿಸಿದರು.
ವಿಮರ್ಶಕಿ ಎಂ.ಎಸ್.ಆಶಾದೇವಿ ಮಾತನಾಡಿ, ‘ವರಕವಿ, ಗಾರುಡಿಗ ಎಂದು ಕರೆಯುವ ದ.ರಾ.ಬೇಂದ್ರೆ ಅವರ ವಿಮರ್ಶೆ ಇಲ್ಲಿಯ ತನಕ ಗಂಭೀರ ಅಧ್ಯಯನಕ್ಕೆ ಒಳಗಾಗಿಯೇ ಇಲ್ಲ. ದೇಶದ ಶ್ರೇಷ್ಠ ವಿಮರ್ಶಕರಲ್ಲಿ ಬೇಂದ್ರೆ ಒಬ್ಬರು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ’ ಎಂದರು.
ನಂತರ ನಡೆದ ಗೋಷ್ಠಿಯಲ್ಲಿ ಪ್ರಾಧ್ಯಾಪಕರಾದ ತಾರಿಣಿ ಶುಭದಾಯಿನಿ, ಎ.ರಘುರಾಮ್, ಧನಂಜಯ ಕುಂಬ್ಳೆ ಅವರು ವಿಚಾರ ಮಂಡಿಸಿದರು.
ಶಿಕ್ಷಣ ತಜ್ಞ ವೂಡೇ ಪಿ.ಕೃಷ್ಣ, ಕನ್ನಡ ವಿಭಾಗದ ಮುಖ್ಥಸ್ಥೆ ಡಿ.ಸಿ.ಗೀತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.