ADVERTISEMENT

ಪತ್ನಿಯ ಮೊಬೈಲ್ ನಂಬರ್ ಕೇಳಿದ್ದಕ್ಕೆ ಮಾರಾಮಾರಿ

ಸ್ನೇಹಿತನಿಗೆ ಚಾಕುವಿನಿಂದ ಇರಿದಿದ್ದ ರೌಡಿ ಬಂಧನ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 0:22 IST
Last Updated 15 ಸೆಪ್ಟೆಂಬರ್ 2023, 0:22 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಬೆಂಗಳೂರು: ಪತ್ನಿಯ ಮೊಬೈಲ್ ನಂಬರ್ ವಿಚಾರವಾಗಿ ಸ್ನೇಹಿತರ ನಡುವೆ ಮಾರಾಮಾರಿ ನಡೆದಿದ್ದು, ಈ ಪ್ರಕರಣ ಸಂಬಂಧ ರೌಡಿ ಕೆಂಪೇಗೌಡ ಅಲಿಯಾಸ್ ಕೆಂಪನನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಹೊಯ್ಸಳ ನಗರದ ನಿವಾಸಿ ಕೆಂಪೇಗೌಡ ಹಾಗೂ ಈತನ ಸ್ನೇಹಿತ ರಮೇಶ್ ನಡುವೆ ಮಾರಾಮಾರಿ ನಡೆದಿದೆ. ರಮೇಶ್ ಹಾಗೂ ಇತರರಿಗೆ ಚಾಕುವಿನಿಂದ ಇರಿಯಲಾಗಿದೆ. ಕೃತ್ಯ ಎಸಗಿರುವ ಆರೋಪದಡಿ ಕೆಂಪೇಗೌಡನನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಕೆಂಪೇಗೌಡ ಹಾಗೂ ರಮೇಶ್, ಹಲವು ವರ್ಷಗಳ ಸ್ನೇಹಿತರು. ಆಗಾಗ ಭೇಟಿಯಾಗಿ ಒಟ್ಟಿಗೆ ಮದ್ಯ ಕುಡಿಯುತ್ತಿದ್ದರು. ಬುಧವಾರವೂ ಇಬ್ಬರೂ ಸೇರಿ ಬಾರ್‌ಗೆ ಹೋಗಿದ್ದರು. ಪಾನಮತ್ತರಾಗಿದ್ದ ರಮೇಶ್, ‘ನಿನ್ನ ಪತ್ನಿಯ ಮೊಬೈಲ್ ನಂಬರ್ ಕೊಡು’ ಎಂದು ಕೆಂಪೇಗೌಡ ಅವರನ್ನು ಕೇಳಿದ್ದರು. ಅದಕ್ಕೆ ಸಿಟ್ಟಾಗಿದ್ದ ಕೆಂಪೇಗೌಡ, ‘ನನ್ನ ಪತ್ನಿ ನಂಬರ್ ಏಕೆ’ ಎಂದು ಗದರಿಸಿದ್ದರು. ನಂತರ, ಮಾತಿಗೆ ಮಾತು ಬೆಳೆದು ಬಾರ್ ಎದುರು ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದರು. ರಮೇಶ್‌ ಅವರನ್ನು ಥಳಿಸಿದ್ದ ಕೆಂಪೇಗೌಡ ಮನೆಗೆ ಹೋಗಿದ್ದರು’ ಎಂದು ಮೂಲಗಳು ತಿಳಿಸಿವೆ.

ಮನೆ ಎದುರು ಗಲಾಟೆ: ‘ರಮೇಶ್ ಹಾಗೂ ಅವರ ಸಂಬಂಧಿಕರು, ಆರೋಪಿ ಕೆಂಪೇಗೌಡ ಮನೆ ಎದುರು ರಾತ್ರಿ ಹೋಗಿದ್ದರು. ಹಲ್ಲೆಯನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಸಂದರ್ಭದಲ್ಲಿ ಆರೋಪಿ, ರಮೇಶ್ ಹಾಗೂ ಇಬ್ಬರು ಸಂಬಂಧಿಕರಿಗೆ ಚಾಕು ಇರಿದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ರಮೇಶ್ ಅವರ ಸಂಬಂಧಿಕರು, ಕೆಂಪೇಗೌಡ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿದ್ದರು. ಆರೋಪಿ ಕೆಂಪೇಗೌಡನನ್ನು ಬಂಧಿಸಿದ್ದರು. ಅಪರಾಧ ಹಿನ್ನೆಲೆಯುಳ್ಳ ಈತನ ಹೆಸರು ರೌಡಿ ಪಟ್ಟಿಯಲ್ಲಿತ್ತು’ ಎಂದು ಮೂಲಗಳು ತಿಳಿಸಿವೆ.

‘ಚಾಕು ಇರಿತದಿಂದ ಗಾಯಗೊಂಡಿರುವ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬಗ್ಗೆ ಅವರ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.