ಬೆಂಗಳೂರು: ‘ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಚೇರಿಯಲ್ಲಿಯೇ ಕೂರದೇ ಆಗಾಗ ಕಾಡಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸಬೇಕು. ವನ್ಯಜೀವಿಗಳು ಕಾಡಿನಿಂದ ಹೊರ ಬಾರದಂತೆ ತಡೆಯಲು ಅಲ್ಲಿಯೇ ಆಹಾರ ಲಭ್ಯವಾಗುವಂತೆ ನೋಡಿಕೊಳ್ಳಬೇಕು ́ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ನಗರದ ಮಲ್ಲೇಶ್ವರದಲ್ಲಿರುವ ಅರಣ್ಯಭವನದಲ್ಲಿ ಗುರುವಾರ ನಡೆದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಹುಲಿ, ಚಿರತೆ, ಆನೆ ಸಹಿತ ಇತರೆ ಪ್ರಾಣಿಗಳು ಹೊರ ಬಂದು ದಾಳಿ ಮಾಡುವುದರಿಂದ ಸಾವಿನ ಸಂಖ್ಯೆ, ಮಾನವ ವನ್ಯಜೀವಿಗಳ ಸಂಘರ್ಷ ಹೆಚ್ಚಾಗಿದೆ. ಆಹಾರ, ನೀರು ಅಲ್ಲಿಯೇ ಸಿಕ್ಕರೆ ಪ್ರಾಣಿಗಳು ಹೊರಕ್ಕೆ ಬರುವುದಿಲ್ಲ. ವಿಶೇಷವಾಗಿ ಆನೆಗಳಿಗೆ ಈ ವ್ಯವಸ್ಥೆ ಮಾಡಿದರೆ ಸಂಘರ್ಷ ತಗ್ಗಿಸಬಹುದು ́ ಎಂದರು.
‘ಕಾಡಾನೆಗಳ ನಿಗ್ರಹಕ್ಕೆ ಅರಣ್ಯದಂಚಿನಲ್ಲಿ ನಿರ್ಮಿಸಿರುವ ಕಂದಕಗಳಲ್ಲಿ ಬಿದ್ದ ಹೂಳನ್ನು ಇಲಾಖೆಯವರು ಸರಿಯಾಗಿ ತೆಗೆಸುತ್ತಿಲ್ಲ. ನಿರ್ವಹಣೆಯನ್ನೂ ಮಾಡದೇ ಇದ್ದರೆ ಕಂದಕಗಳು ಉಪಯೋಗ ಆಗುವುದಾದರೂ ಹೇಗೆʼ ಎಂದು ಪ್ರಶ್ನಿಸಿದರು.
‘ಈವರೆಗೂ ಕೋಟ್ಯಂತರ ಸಸಿಗಳನ್ನು ನೆಟ್ಟಿರಬಹುದು. ಆದರೆ, ಕರ್ನಾಟಕದಲ್ಲಿ ಅರಣ್ಯ ಪ್ರಮಾಣ ನಿರೀಕ್ಷೆಯಷ್ಟು ಹೆಚ್ಚಾಗಿಲ್ಲ. ಈಗಲೂ ಅರಣ್ಯ ಪ್ರದೇಶ ಶೇ 20ರಷ್ಟು ಮಾತ್ರ ಇದೆ ́ ಎಂದು ಬೇಸರ ವ್ಯಕ್ತಪಡಿಸಿದರು.
‘ಅರಣ್ಯ ಸೇವೆಯಲ್ಲಿರುವಾಗಲೇ ಅಧಿಕಾರಿ, ಸಿಬ್ಬಂದಿ ಸಹಿತ 62 ಮಂದಿ ಹುತಾತ್ಮರಾಗಿದ್ದಾರೆ. ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರೂ ಕಳೆದುಕೊಂಡವರನ್ನು ಹಿಂತಿರುಗಿಸಲಾಗದು. ಇಲಾಖೆಯಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಿದರೆ ಜೀವಹಾನಿ ತಪ್ಪಿಸಬಹುದು ́ ಎಂದು ತಿಳಿಸಿದರು.
ಕಾಡಿನಲ್ಲಿ ಈಗ ವೀರಪ್ಪನ್‌ಗಳು ಇಲ್ಲ. ಆದರೆ ಸಣ್ಣಪುಟ್ಟ ಕಾಡುಗಳ್ಳರು ದುಷ್ಟರು ಬೇಟೆಯಾಡುವವರನ್ನು ಅರಣ್ಯ ಇಲಾಖೆ ನಿಗ್ರಹಿಸಬೇಕು.ಸಿದ್ದರಾಮಯ್ಯ, ಮುಖ್ಯಮಂತ್ರಿ
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಬೆಂಗಳೂರಿನ ಮಾದಪ್ಪನಹಳ್ಳಿಯಲ್ಲಿ 153 ಎಕರೆಯಲ್ಲಿ ವಿಶಾಲ ಉದ್ಯಾನ ನಿರ್ಮಿಸಲು ಅಕ್ಟೋಬರ್ ಮೊದಲ ವಾರ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ́ ಎಂದು ತಿಳಿಸಿದರು.
ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥೆ ಮೀನಾಕ್ಷಿ ನೇಗಿ ಮತ್ತಿತರರು ಹಾಜರಿದ್ದರು.
‘ದುಡ್ಡು ಇಟ್ಟುಕೊಂಡರೆ ಮೊಟ್ಟೆ ಹಾಕುತ್ತಾʼ
‘ಅರಣ್ಯ ಇಲಾಖೆ ಬಡ ಇಲಾಖೆಯೇನೂ ಅಲ್ಲ. ಇರುವ ಹಣವನ್ನು ಸರಿಯಾಗಿ ಖರ್ಚು ಮಾಡಬೇಕು. ಅದನ್ನು ಬಿಟ್ಟು ಹಣ ಇಟ್ಟುಕೊಂಡು ಕುಳಿತರೇ ಮೊಟ್ಟೆ ಹಾಕುತ್ತೇನ್ರಿʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗದರಿದ ಪ್ರಸಂಗ ನಡೆಯಿತು.
‘ಆನೆಗಳು ಕಾಡಿನಿಂದ ಹೊರಕ್ಕೆ ಬಾರದಂತೆ ತಡೆಯಲು 410 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಿದ್ದೀರಿ. ಇನ್ನೂ ಕೆಲಸ ಆಗಬೇಕಿದೆ. ಬೇಕಾದ ಅನುದಾನವನ್ನು ನೀಡಲಾಗಿದೆʼ ಎಂದು ಹೇಳಿದರು. ‘ಇದಕ್ಕಾಗಿ ಇಲಾಖೆಗೆ ಇನ್ನೂ ಹಣ ಬೇಕಾಗಿದೆʼ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
‘ಅಲ್ರೀ ಅರಣ್ಯೀಕರಣ ಪರಿಹಾರ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ( ಕಾಂಪಾ) ಪರಿಸರ ಇಲಾಖೆಯಲ್ಲಿಯೇ ದುಡ್ಡಿದೆಯಲ್ಲʼ ಎಂದು ಸಿದ್ದರಾಮಯ್ಯ ಹೇಳಿದರು.
‘ಮಂಡಳಿಯವರು ತಿರಸ್ಕರಿಸುತ್ತಾರೆ ́ಎಂದು ಸಚಿವರು ದನಿಗೂಡಿಸಿದರು. ಆಗ ಸಿಟ್ಟುಗೊಂಡ ಸಿದ್ದರಾಮಯ್ಯ ‘ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರಸ್ವಾಮಿಗೆ ನಾನೇ ಹೇಳ್ತಿನಿ. ನೀವೂ ಕೂಡ ಮಾತನಾಡಬೇಕು ́ ಎಂದು ಖಂಡ್ರೆಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.