ಬೆಂಗಳೂರು: ‘ನಾಡಿಗೆ ವನ್ಯಜೀವಿ ಬಂದರೆ ಸ್ಥಳೀಯರು 1926 ಸಂಖ್ಯೆಗೆ ಉಚಿತ ಕರೆ ಮಾಡಬಹುದು. ದೂರು ದಾಖಲಾದ ಕೂಡಲೇ ಸಂಬಂಧಿತ ವಲಯಕ್ಕೆ ಮಾಹಿತಿ ರವಾನಿಸಿ ಕ್ರಮ ವಹಿಸಲಾಗುವುದು’ ಎಂದು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಹಿರಿಯ ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿದ ಅವರು, ಹೀಗೆ ಮಾಡಿದ ಕರೆ ಕೇಂದ್ರ ಕಚೇರಿಯಲ್ಲಿ ದೂರು ದಾಖಲಾಗುತ್ತದೆ. ಈ ದೂರುಗಳಿಗೆ ಸ್ಪಂದಿಸಲಾಗಿದೆಯೇ ಇಲ್ಲವೇ ಎಂಬುದನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಲಿದ್ದು, ವಲಯ ಅಧಿಕಾರಿಗಳು ತುರ್ತಾಗಿ ಸ್ಪಂದಿಸಲಿದ್ದಾರೆ ಎಂದರು.
‘ಸಂಘರ್ಷ ಹೆಚ್ಚಾಗಿರುವ ಜಿಲ್ಲೆಗಳಿಗೆ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಿ ಉಸ್ತುವಾರಿ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
‘ಹೆಚ್ಚುತ್ತಿರುವ ವನ್ಯಜೀವಿಗಳಿಗೆ ಅನುಗುಣವಾಗಿ ಅರಣ್ಯ ಪ್ರದೇಶ ಇದೆಯೇ ಎನ್ನುವ ನಿಖರ ಅಧ್ಯಯನಕ್ಕೆ ತಜ್ಞರ ತಂಡ ರಚಿಸಬೇಕು. ವನ್ಯಜೀವಿಗಳು ಕಾಡಿನಿಂದ ನಾಡಿಗೆ ಬರುವುದಕ್ಕೆ ಕಾರಣವೇನು ಎಂಬ ಬಗ್ಗೆ ಸಮಿತಿ ತಿಳಿಸಬೇಕು. ಆ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.
‘ಸನ್ನಾ ಮತ್ತು ಲಂಟನಾ ಕಳೆ ಅರಣ್ಯದಲ್ಲಿ ಬೆಳೆದು ಸಸ್ಯಹಾರಿ ಪ್ರಾಣಿಗಳಿಗೆ ಹುಲ್ಲು ಸಿಗುತ್ತಿಲ್ಲ. ಇದರಿಂದ ಆನೆಗಳು ಹೊರಬರುತ್ತಿವೆ ಎನ್ನುವ ಅಭಿಪ್ರಾಯವಿದೆ. ಇವುಗಳ ತೆರವಿಗೆ ವೈಜ್ಞಾನಿಕವಾಗಿ ಕ್ರಮ ಕೈಗೊಳ್ಳಿ, ಬೇರೆ ರಾಜ್ಯಗಳು ಸನ್ನಾ, ಲಂಟನಾ ತೆರವಿಗೆ ಕೈಗೊಂಡಿರುವ ಕ್ರಮಗಳ ಅಧ್ಯಯನ ಮಾಡಿ, ಉತ್ತಮ ಕ್ರಮವನ್ನು ಅಳವಡಿಸಿಕೊಳ್ಳಿ’ ಎಂದರು.
ಅರಣ್ಯ ಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಪಿ.ಸಿ. ರೇ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ( ಸಮನ್ವಯ) ಕುಮಾರ್ ಪುಷ್ಕರ್, ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ್‌ಕುಮಾರ್ ಉಪಸ್ಥಿತರಿದ್ದರು.
ಸಚಿವರ ಸೂಚನೆ ಏನೇನು
*ಕಾಡಿನಂಚಿನ ಪ್ರದೇಶದಲ್ಲಿ ಕ್ಯಾಮರಾ ಅಳವಡಿಸಿ ಹುಲಿಗಳ ಸಂಚಾರದ ಮೇಲೆ ನಿಗಾ ಇರಿಸಿ ಸ್ಥಳೀಯರಿಗೆ ಸಕಾಲಿಕ ಮಾಹಿತಿ ನೀಡಿ
*ಜನ ವಸತಿ ರೈತರ ಜಮೀನಿನ ಬಳಿ ಕ್ಯಾಮರಾ ಅಳವಡಿಸಿ ನಿಗಾ ಇಟ್ಟು ಮುನ್ನೆಚ್ಚರಿಕೆ ನೀಡಿ ಜೀವಹಾನಿ ಬೆಳೆ ಹಾನಿ ತಪ್ಪಿಸಿ
*ಥರ್ಮಲ್ ಕ್ಯಾಮರಾಗಳ ನೆರವಿನಿಂದ ನಿಗಾ ಇಡುವುದರ ಜೊತೆಗೆ ಗಸ್ತು ಹೆಚ್ಚಳ ಮಾಡಿ
*ಮಾನವ-ವನ್ಯಜೀವಿ ಸಮಸ್ಯೆಗೆ ಅಲ್ಪಾವಧಿ ದೀರ್ಘಕಾಲೀನ ಪರಿಹಾರ ಕ್ರಮಗಳನ್ನು ರೂಪಿಸಿ
*5ರಿಂದ 6 ಕಿ.ಮೀ. ವ್ಯಾಪ್ತಿಗೆ ಒಂದೊಂದು ಅರಣ್ಯ ಗಸ್ತು ಶಿಬಿರ ಸ್ಥಾಪಿಸಿ ಸ್ಥಳೀಯ ಯುವಕರನ್ನೂ ನೇಮಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.