
ಪವನ ವಿದ್ಯುತ್
ಬೆಂಗಳೂರು: ಅತ್ಯಧಿಕ ಪವನ ವಿದ್ಯುತ್ ಉತ್ಪಾದನೆ ಮೂಲಕ 2024-25ನೇ ಸಾಲಿನಲ್ಲಿ ಪ್ರಶಸ್ತಿ ಪಡೆದಿದ್ದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು(ಕ್ರೆಡಲ್), ಇದೇ ಸಾಲಿನಲ್ಲಿ'ಅನುಷ್ಠಾನದ ಹಂತದಲ್ಲಿರುವ ಅತ್ಯಧಿಕ ಪವನ ವಿದ್ಯತ್ ಸಾಮರ್ಥ್ಯ'ಕ್ಕಾಗಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನೂ ತನ್ನದಾಗಿಸಿಕೊಂಡಿದೆ.
ವಿಂಡ್ ಟರ್ಬೈನ್ ತಯಾರಕರ ಸಂಘ (ಐಡಬ್ಲ್ಯುಟಿಎಂಎ) ಚೆನ್ನೈನ ಟ್ರೇಡ್ ಸೆಂಟರ್‌ನಲ್ಲಿ ಆಯೋಜಿಸಿದ್ದ ‘ವಿಂಡ್ ಎನರ್ಜಿ ಇಂಡಿಯಾ 2025’ರ ಏಳನೇ ಆವೃತ್ತಿಯಲ್ಲಿ ಕೇಂದ್ರ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಅವರು ಕ್ರೆಡಲ್ ಅಧ್ಯಕ್ಷರೂ ಆದ ಶಾಸಕ ಟಿ.ಡಿ. ರಾಜೇಗೌಡ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನಂತರ ಮಾತನಾಡಿದ ರಾಜೇಗೌಡ, ‘ಇದು ನಮ್ಮ ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಶುದ್ಧ ಇಂಧನ ಉತ್ಪಾದನೆ ಮತ್ತು ಬಳಕೆಗೆ ಆದ್ಯತೆ ನೀಡಿ, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವ ಎಲ್ಲಾ ಪಾಲುದಾರರ ಬೆಂಬಲಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ’ ಎಂದರು.
‘ಅನುಷ್ಠಾನ ಹಂತದಲ್ಲಿರುವ ಪವನ ವಿದ್ಯುತ್ ಸಾಮರ್ಥ್ಯದಲ್ಲಿ ಕರ್ನಾಟಕವು ದೇಶದಲ್ಲಿ ಮೊದಲ ಸ್ಥಾನ ಹೊಂದಿದೆ. ಇದನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ’ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
‘ಇಂಧನ ವಲಯದಲ್ಲಿನ ಹೊಸ ನೀತಿಗಳು ರಾಜ್ಯವನ್ನು ನವೀಕರಿಸಬಹುದಾದ ಇಂಧನದ ಶಕ್ತಿ ಕೇಂದ್ರವನ್ನಾಗಿ ರೂಪಿಸುತ್ತಿವೆ’ ಎಂದು ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಹೇಳಿದ್ದಾರೆ.
‘ನವೀಕರಿಸಬಹುದಾದ ಇಂಧನದ ರಾಷ್ಟ್ರೀಯ ಗುರಿಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಅವಿರತ ಪ್ರಯತ್ನಕ್ಕೆ ಈ ಪ್ರಶಸ್ತಿ ಸಂದಿದೆ’ ಎಂದು ಕೆ.ಪಿ. ರುದ್ರಪ್ಪಯ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.