ADVERTISEMENT

ಚಿಲ್ಲರೆ ಮದ್ಯ ಮಾರಾಟ: ಶೇ 20ರಷ್ಟು ಲಾಭಾಂಶ ನೀಡುವಂತೆ ಆಗ್ರಹ, ಪ್ರತಿಭಟನೆ

ಫೆಡರೇಷನ್ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ನ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:29 IST
Last Updated 21 ಜೂನ್ 2025, 15:29 IST
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಸದಸ್ಯರು ಪಾಲ್ಗೊಂಡಿದ್ದರು               ಪ್ರಜಾವಾಣಿ ಚಿತ್ರ 
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ನ ಸದಸ್ಯರು ಪಾಲ್ಗೊಂಡಿದ್ದರು               ಪ್ರಜಾವಾಣಿ ಚಿತ್ರ    

ಬೆಂಗಳೂರು: ಚಿಲ್ಲರೆ ಮದ್ಯ ಮಾರಾಟದ ಮೇಲಿನ ಲಾಭಾಂಶವನ್ನು ಶೇಕಡ 20ರಷ್ಟು ನೀಡಬೇಕು. ಸನ್ನದು ಶುಲ್ಕದ ಮೇಲೆ ವಿಧಿಸುತ್ತಿರುವ ಶೇ 15ರಷ್ಟು ಹೆಚ್ಚುವರಿ ಶುಲ್ಕಕ್ಕೆ 2025–26ನೇ ಸಾಲಿನಿಂದ ವಿನಾಯಿತಿ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆಡರೇಷನ್ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ನ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಪ್ರತಿಭಟನಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 

‘2025-26ನೇ ಸಾಲಿನ ಸನ್ನದು ಶುಲ್ಕವನ್ನು ದುಪ್ಟಟ್ಟುಗೊಳಿಸುವಂತೆ ಮೇ 15ರಂದು ಹೊರಡಿಸಿರುವ ಕರಡು ಅಧಿಸೂಚನೆ ಪರಿಷ್ಕರಿಸಬೇಕು. 2016 ರಿಂದ 2025ರವರೆಗೆ 2,936 ಸನ್ನದುಗಳು ಹೆಚ್ಚಾಗಿದ್ದು, ಮದ್ಯ ಹಾಗೂ ಬಿಯರ್‌ ಮಾರಾಟ ಮಾತ್ರ ಹೆಚ್ಚಾಗಿಲ್ಲ’ ಎಂದು ಫೆಡರೇಷನ್‌ನ ರಾಜ್ಯ ಘಟಕದ ಅಧ್ಯಕ್ಷ ಎಸ್. ಗುರುಸ್ವಾಮಿ ತಿಳಿಸಿದರು.  

ADVERTISEMENT

‘2016–17ರಲ್ಲಿ ಎಲ್ಲ ವರ್ಗದ ಸನ್ನದುಗಳಿಂದ ಒಟ್ಟು ₹591.33 ಕೋಟಿ ಶುಲ್ಕ ಸಂಗ್ರಹವಾಗಿತ್ತು. 2024–25ರಲ್ಲಿ ₹820 ಕೋಟಿಗೂ ಹೆಚ್ಚು ಶುಲ್ಕ ಸಂಗ್ರಹವಾಗಿದೆ. ಅಬಕಾರಿ ರಾಜಸ್ವ ಸಂಗ್ರಹಕ್ಕೆ ಸನ್ನದು ಶುಲ್ಕವನ್ನು ಪರಿಗಣಿಸಬಾರದು. ಕೇವಲ ಅಬಕಾರಿ ಮತ್ತು ಹೆಚ್ಚುವರಿ ಅಬಕಾರಿ ಶುಲ್ಕವನ್ನು ಮಾತ್ರ ರಾಜಸ್ವ ಸಂಗ್ರಹಕ್ಕೆ ಪರಿಗಣಿಸಬೇಕು’ ಎಂದು ಆಗ್ರಹಿಸಿದರು. 

‘ಒಂಬತ್ತು ವರ್ಷಗಳಲ್ಲಿ ಕಟ್ಟಡದ ಬಾಡಿಗೆ, ನೌಕರರ ಸಂಬಳ, ವಿದ್ಯುತ್ ಶುಲ್ಕ ಹೆಚ್ಚಾಗುತ್ತಿದೆ. ಶೇ 10ರಷ್ಟು ಲಾಭಾಂಶದಲ್ಲಿ ಸನ್ನದು ನಿರ್ವಹಿಸಲು ಆಗುತ್ತಿಲ್ಲ. ಆದ್ದರಿಂದ ಲಾಭಾಂಶವನ್ನು ಶೇ 20ರಷ್ಟು ಹೆಚ್ಚಿಸಬೇಕು. 2025–26ನೇ ಸಾಲಿನ ಸನ್ನದು ಶುಲ್ಕವನ್ನು ಎರಡು ಕಂತುಗಳಲ್ಲಿ ಪಾವತಿಸಲು ಅವಕಾಶ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.  

ಬೇಡಿಕೆಗಳನ್ನು ಈಡೇರಿಸುವಂತೆ ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಟಿ. ನಾಗರಾಜಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿದರು. 

‍ಪ್ರತಿಭಟನೆಯಲ್ಲಿ ಫೆಡರೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ, ಕೋಶಾಧಿಕಾರಿ ಟಿ.ಎಂ. ಮೆಹರ್‌ವಾಡೆ, ವಿಭಾಗೀಯ ಅಧ್ಯಕ್ಷ ಕರುಣಾಕರ ಹೆಗ್ಡೆ, ಜಿ. ರಾಮುಲು ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಪ್ರತಿಭಟನಕಾರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.