ಬಿಎಂಟಿಸಿ ಬಸ್
ಬೆಂಗಳೂರು: ಬಿಎಂಟಿಸಿ ಬಸ್ ಚಾಲಕನಿಗೆ ಮಹಿಳೆಯೊಬ್ಬರು ಚಪ್ಪಲಿಯಲ್ಲಿ ಹೊಡೆದ ಘಟನೆ ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಜಾಪುರ ರಸ್ತೆಯ ಕೈಕೊಂಡ್ರಹಳ್ಳಿಯಲ್ಲಿ ನಡೆದಿದೆ.
ಬಸ್ ನಿಲ್ದಾಣವಲ್ಲದ ಸ್ಥಳದಲ್ಲಿ ನಿಲುಗಡೆ ಮಾಡಲು ನಿರಾಕರಿಸಿದ ಕಾರಣಕ್ಕೆ ಮಹಿಳೆ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎನ್ನಲಾಗಿದೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದರು. ಕ್ಷಮೆಯಾಚಿಸಿದ ಕಾರಣ ಅವರನ್ನು ಬಿಟ್ಟು ಕಳುಹಿಸಲಾಗಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಕಾವ್ಯಾ ಅವರು ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಬಿಎಂಟಿಸಿಯ 38ನೇ ಡಿಪೊದಲ್ಲಿ ಕಾರ್ಯನಿರ್ವಹಿಸುತ್ತಿರುವ ಹುಸೇನ್ ದೂರು ನೀಡಿದ್ಡಾರೆ. ಕಾವ್ಯಾ ವಿರುದ್ಧ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಹಲ್ಲೆ, ಶಾಂತಿ ಭಂಗ ಹಾಗೂ ಸಾರ್ವಜನಿಕ ಸೇವಕನನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಹುಸೇನ್ ಅವರು ಟಿನ್ ಫ್ಯಾಕ್ಟರಿಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬಸ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಆ ಬಸ್‌ಗೆ ಹತ್ತಿದ್ದ ಕಾವ್ಯಾ, ಕೈಕೊಂಡ್ರಹಳ್ಳಿಗೆ ಟಿಕೆಟ್ ತೆಗೆದುಕೊಂಡಿದ್ದರು. ಬಸ್ ಕೈಕೊಂಡ್ರಹಳ್ಳಿಗೆ ತಲುಪುವ ಮುನ್ನವೇ ಕಾವ್ಯಾ, ತಮ್ಮ ಕಚೇರಿ ಮುಂದೆ ಬಸ್ ನಿಲ್ಲಿಸುವಂತೆ ಚಾಲಕನಿಗೆ ಕೇಳಿದ್ದಾರೆ. ಆದರೆ, ಅಲ್ಲಿ ನಿಲುಗಡೆ ಇಲ್ಲದ ಕಾರಣಕ್ಕೆ ಬಸ್ ನಿಲ್ಲಿಸಿಲ್ಲ. ಇದರಿಂದ ಕೋಪಗೊಂಡ ಕಾವ್ಯಾ, ಚಾಲಕನ ಜತೆ ವಾಗ್ವಾದ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ, ಚಪ್ಪಲಿಯಿಂದ ಹೊಡೆದಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
ಕಾವ್ಯಾ ಅವರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಯಿತು. ಬಳಿಕ ಅವರ ಪತಿಯು ಠಾಣೆಗೆ ಬಂದು ಕ್ಷಮೆ ಯಾಚಿಸಿದರು. ಕಾವ್ಯಾ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರ ಪತಿ ತಿಳಿಸಿದರು. ನಂತರ ಕಾವ್ಯಾ ಅವರನ್ನು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.