ADVERTISEMENT

ಬೆಂಗಳೂರು: ಕಾರು ಸಮೇತ ಮಹಿಳೆ ಪರಾರಿ; ಚಾಲಕ ಶೌಚಗೃಹಕ್ಕೆ ಹೋಗಿದ್ದ ವೇಳೆ ಘಟನೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 0:16 IST
Last Updated 14 ಮೇ 2025, 0:16 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬೆಂಗಳೂರು ಹಾಗೂ ಮೈಸೂರು ಸುತ್ತಾಡಲು ಪರಿಚಯಸ್ಥ ಚಾಲಕರೊಬ್ಬರನ್ನು ಸಂಪರ್ಕಿಸಿ, ಬಾಡಿಗೆಗಾಗಿ ಬುಕ್ ಮಾಡಿದ್ದ ಕಾರು ಸಮೇತ ಪರಾರಿಯಾಗಿರುವ ಮಹಿಳೆ ವಿರುದ್ಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಎಚ್​ಎಂಟಿ ಲೇಔಟ್ ನಿವಾಸಿ ಅನಂತಕುಮಾರ್ ಅವರ ದೂರು ಆಧರಿಸಿ ಅಪರಿಚಿತ ಮಹಿಳೆ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಅನಂತ್‌ ಅವರು 15 ದಿನಗಳ ಹಿಂದೆ ಬಾಡಿಗೆ ನಿಮಿತ್ತ ಕಾರವಾರಕ್ಕೆ ಹೋಗಿದ್ದಾಗ ಮಹಿಳೆಯ ಪರಿಚಯವಾಗಿದೆ. ಬೆಂಗಳೂರು ಹಾಗೂ ಮೈಸೂರು ಸುತ್ತಾಡಲು ಬಾಡಿಗೆ ಕಾರು ಬೇಕೆಂದು ಹೇಳಿ ಚಾಲಕನಿಂದ ಮೊಬೈಲ್ ನಂಬರ್ ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಮೇ 6ರ ರಾತ್ರಿ ವಾಟ್ಸ್​ಆ್ಯಪ್​ ಕರೆ ಮಾಡಿದ ಮಹಿಳೆ ಬೆಂಗಳೂರಿಗೆ ಬಂದಿರುವುದಾಗಿ ಚಾಲಕನಿಗೆ ಹೇಳಿದ್ದಳು. ತಾನು ಹುಬ್ಬಳ್ಳಿಯಲ್ಲಿದ್ದು, ಮೇ 7ರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿಗೆ ಬರುವುದಾಗಿ ಚಾಲಕ ಹೇಳಿದ. ಮಾರನೇ ದಿನ ಬೆಂಗಳೂರಿಗೆ ಬಂದಿರುವುದಾಗಿ ಚಾಲಕ ಆಕೆಗೆ ವಿಷಯ ಮುಟ್ಟಿಸಿದ. ನಿತ್ಯ ಕರ್ಮ ಮುಗಿಸಲು ಲಾಡ್ಜ್‌ವೊಂದರಲ್ಲಿ ರೂಮ್ ಬುಕ್ ಮಾಡುವಂತೆ ಮಹಿಳೆ, ದಾಖಲಾತಿಗಳನ್ನು ಚಾಲಕನ ವಾಟ್ಸ್​ಆ್ಯಪ್​ ನಂಬರ್‌ಗೆ ಕಳುಹಿಸಿದ್ದಳು. ಇದರಂತೆ ಸಿಡೇದಹಳ್ಳಿ ಬಳಿಯ ಪಿ.ವಿ.ರೆಸಿಡೆನ್ಸಿಯಲ್ಲಿ ಚಾಲಕ ರೂಮ್ ಬುಕ್ ಮಾಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬುಕ್ ಮಾಡಿದ್ದ ರೂಮಿಗೆ ಇಬ್ಬರು ಬಂದರು. ಚಾಲಕನಿಗೆ ತಾನು ಬ್ಯೂಟಿಪಾರ್ಲರ್‌ಗೆ ಹೋಗಬೇಕಿದೆ. ಹಾಗಾಗಿ ನೀವೂ ಸಿದ್ಧರಾಗಿ ಎಂದು ಸೂಚಿಸಿದ್ದಳು. ಇದನ್ನು ನಂಬಿದ ಚಾಲಕ ತನ್ನ ಬಳಿಯಿದ್ದ ಮೊಬೈಲ್‌ ಫೋನ್‌ ಚಾರ್ಜ್ ಹಾಕಿ ಕಾರಿನ ಕೀಯನ್ನ ಟೇಬಲ್ ಮೇಲಿಟ್ಟು ಶೌಚಗೃಹಕ್ಕೆ ಹೋಗಿದ್ದರು. ಈ ವೇಳೆ ಮಹಿಳೆಯು ಹೊರಗಿನಿಂದ ಶೌಚಗೃಹದ ಬಾಗಿಲಿನ ಚಿಲಕ ಹಾಕಿ ಮೊಬೈಲ್ ಹಾಗೂ ಕಾರಿನ ಕೀ ಸಮೇತ ಪರಾರಿಯಾಗಿದ್ದಾಳೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಕಿಟಕಿ ಮೂಲಕ ಹೊರಗಿದ್ದವರನ್ನು ಕರೆಯಿಸಿಕೊಂಡು ಬಾಗಿಲಿನ ಚಿಲಕ ತೆಗೆಸಿ ಹೊರಗೆ ಬಂದು, ನಂತರ ಪೊಲೀಸರಿಗೆ ದೂರು ನೀಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.