ಬೆಂಗಳೂರು: ನಗರದ ಬಿಇಎಲ್ ರಸ್ತೆಯಲ್ಲಿರುವ ಥರ್ಡ್ ವೇವ್ ಕಾಫಿ ಶಾಪ್‌ನ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಇರಿಸಿ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದ ಆರೋಪದ ಮೇರೆಗೆ ಯುವಕನೊಬ್ಬನನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ.
ಕಾಫಿ ಶಾಪ್‌ನ ಸಿಬ್ಬಂದಿ ಭದ್ರಾವತಿಯ ಮನೋಜ್ (23) ಎಂಬಾತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ.
‘ಮನೋಜ್ ಶನಿವಾರ ಬೆಳಿಗ್ಗೆ ಮಹಿಳೆಯರ ಶೌಚಾಲಯಕ್ಕೆ ತೆರಳಿ ಅಲ್ಲಿದ್ದ ಕಸದ ಬುಟ್ಟಿಯಲ್ಲಿ ರಂಧ್ರ ಕೊರೆದು ಮೊಬೈಲ್ ಇಟ್ಟಿದ್ದಾನೆ. ಶಬ್ದವಾದರೆ ಗೊತ್ತಾಗಬಹುದು ಎಂಬ ಕಾರಣಕ್ಕೆ ಫೋನ್ ಅನ್ನು ಫ್ಲೈಟ್ ಮೋಡ್ನಲ್ಲಿರಿಸಿ, ಕ್ಯಾಮೆರಾ ಚಾಲನೆ ಮಾಡಿ ಹೊರಬಂದು ತನ್ನ ಕೆಲಸದಲ್ಲಿ ತೊಡಗಿಕೊಂಡಿದ್ದಾನೆ. ಬಳಿಕ ಶೌಚಾಲಯಕ್ಕೆ ತೆರಳಿದ ಮಹಿಳೆಯೊಬ್ಬರು ಮೊಬೈಲ್ ಇಟ್ಟಿರುವುದನ್ನು ಗಮನಿಸಿ, ಗಾಬರಿಗೊಂಡು ಕೆಫೆ ಸಿಬ್ಬಂದಿಗೆ ಮಾಹಿತಿ ನೀಡಿದರು’ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದಾಗ ಕೆಫೆಯ ಸಿಬ್ಬಂದಿಯೇ ಮೊಬೈಲ್ ಇರಿಸಿರುವುದಾಗಿ ಪತ್ತೆಯಾಗಿದೆ. ತಕ್ಷಣವೇ ಆರೋಪಿಯನ್ನು ಬಂಧಿಸಿ, ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಮೊಬೈಲ್‌ನಲ್ಲಿ ಕಾಫಿ ಶಾಪ್ ಶೌಚಾಲಯದ ಒಂದು ವಿಡಿಯೊ ಮಾತ್ರ ಪತ್ತೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್) ಕಳುಹಿಸಲಾಗಿದೆ. ಐ.ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ‘ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಬಗ್ಗೆ ‘ಗ್ಯಾಂಗ್ಸ್ ಆಫ್ ಸಿನಿಪುರ್’ ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮಗಾದ ಕಹಿ ಅನುಭವವನ್ನು ಮಹಿಳೆ ಬರೆದುಕೊಂಡಿದ್ದು, ‘ಗ್ರಾಹಕರು ಜಾಗರೂಕರಾಗಿಬೇಕು’ ಎಂದು ಹೇಳಿದ್ದಾರೆ.
ಈ ಘಟನೆ ಕುರಿತು ಥರ್ಡ್ ವೇವ್ ಕೆಫೆ ಆಡಳಿತ ಮಂಡಳಿ ಕ್ಷಮೆ ಕೇಳಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದೆ. ‘ಬೆಂಗಳೂರಿನ ಬಿಇಎಲ್ ರಸ್ತೆಯ ಶಾಖೆಯಲ್ಲಿ ನಡೆದ ಅಹಿತಕರ ಘಟನೆಗೆ ವಿಷಾದಿಸುತ್ತೇವೆ. ಉದ್ಯೋಗಿಯನ್ನು ತಕ್ಷಣವೇ ವಜಾಗೊಳಿಸಿದ್ದೇವೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.