
ನಗರದಲ್ಲಿ ಗುರುವಾರ ಆರ್. ಸುನಂದಮ್ಮ (ಬಲದಿಂದ ಮೊದಲನೆಯವರು) ಅವರ ‘ಎದೆಯ ಪದ’ ಕೃತಿ ಜನಾರ್ಪಣೆ ಕಾರ್ಯಕ್ರಮದಲ್ಲಿ ಹೇಮಲತಾ ಮಹಿಷಿ ಮತ್ತು ಸಬೀಹಾ ಭೂಮಿಗೌಡ ಸಮಾಲೋಚನೆಯಲ್ಲಿ ತೊಡಗಿದರು. ಎನ್. ಗಾಯತ್ರಿ, ಆರ್. ಪೂರ್ಣಿಮಾ ಉಪಸ್ಥಿತರಿದ್ದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಹಲವು ಪ್ರತಿಭಾವಂತ ಮಹಿಳೆಯರು ಮತ್ತು ವಿವಿಧ ಕ್ಷೇತ್ರದ ಸಾಧಕರು ಇದ್ದಾರೆ. ಆದರೆ, ಹಲವರ ಜೀವನ ಚರಿತ್ರೆಗಳು ಪುಸ್ತಕಗಳಲ್ಲಿ ದಾಖಲಾಗುತ್ತಿಲ್ಲ ಎಂದು ವಕೀಲೆ ಹೇಮಲತಾ ಮಹಿಷಿ ಬೇಸರ ವ್ಯಕ್ತಪಡಿಸಿದರು.
ನಗರದ ಚಿತ್ರಕಲಾ ಪರಿಷತ್‌ನಲ್ಲಿ ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಮತಾ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಆರ್.ಸುನಂದಮ್ಮ ಅವರ ‘ಎದೆಯ ಪದ’ (ಎಸ್.ಜಿ. ಲಕ್ಷ್ಮೀ ದೇವಮ್ಮ ಅವರ ಆತ್ಮಕಥನ) ಕೃತಿ ಜನಾರ್ಪಣೆ ಮಾಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಎಲೆಮರೆ ಕಾಯಿಯಂತಿರುವ ಮಹಿಳಾ ಸಾಧಕರ ಚರಿತ್ರೆ ಪುಸ್ತಕ ರೂಪದಲ್ಲಿ ದಾಖಲಾದಾಗ ನಗರವಾಸಿಗಳು ಸೇರಿದಂತೆ ಇಡೀ ಸಮಾಜಕ್ಕೆ ಪರಿಚಯವಾಗುತ್ತದೆ. ಆಗ ಅದು ಮಹಿಳಾ ಸಾಹಿತ್ಯ, ಚರಿತ್ರೆಗೆ ಸೇರಿಕೊಳ್ಳುತ್ತದೆ ಎಂದು ಹೇಳಿದರು.
ಜಾನಪದ ಕಲಾವಿದೆಯ ಜೀವನ ಸಾಧನೆಯ ಕುರಿತು ಪುಸ್ತಕ ತಂದಿರುವುದು ಸಂತೋಷದ ಸಂಗತಿ. ಗ್ರಾಮೀಣ ಪ್ರದೇಶದ ಮಹಿಳೆ ತನ್ನ ಪ್ರತಿಭೆಯಿಂದ ಸಾಧನೆ ಮಾಡಿದ್ದಾರೆ ಎಂಬುದು ಈ ಪುಸ್ತಕ ಓದಿದಾಗ ಅರ್ಥವಾಗುತ್ತದೆ. ಲಕ್ಷ್ಮೀ ದೇವಮ್ಮ ಜಾನಪದ ಕಲಾವಿದೆಯಾಗಿಯೇ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯು ದೊರಕಿದೆ. ಅವರ ಸಾಧನೆ ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಓದು, ಬರಹ ತಿಳಿಯದ ಹಲವರಿಗೆ ತಮ್ಮ ಆತ್ಮಚರಿತ್ರೆ ಬರೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಬರೆಯಲು ಗೊತ್ತಿದ್ದರೂ ಕೃತಿ ಬರೆಯುವಷ್ಟು ಬರವಣಿಗೆ ಅವರಲ್ಲಿ ಇರುವುದಿಲ್ಲ. ಅಂತಹ ಸಂದರ್ಧದಲ್ಲಿ ಸಾಧಕರ ಬಾಯಿಯಿಂದಲೇ ಅವರ ಜೀವನ ಚರಿತ್ರೆ ಕೇಳಿಸಿಕೊಂಡು ಮತ್ತೊಬ್ಬರು ಬರೆಯುವುದು ಅದೃಷ್ಟದ ಕೆಲಸ ಎಂದರು.
ಸಾಹಿತಿ ಸಬೀಹಾ ಭೂಮಿಗೌಡ ಮಾತನಾಡಿ, ‘ಸಾಹಿತ್ಯ, ಮಹಿಳಾ ಅಧ್ಯಯನ ಮತ್ತು ವಿವಿಧ ಚಳವಳಿಗಳಲ್ಲಿ ತೊಡಗಿಸಿಕೊಂಡಿರುವ ಹಲವರು ಕಾರ್ಯಕ್ರಮದಲ್ಲಿ ಸೇರಿರುವುದು ಬಹಳ ಅರ್ಥಪೂರ್ಣವಾದದ್ದು. ಈ ಮೂರು ಕ್ಷೇತ್ರದಲ್ಲಿ ಇರುವವರನ್ನು ವೇದಿಕೆಗೆ ತಂದಿದ್ದು ‘ಎದೆಯ ಪದ’ ಪುಸ್ತಕ. ಇದು ಎಲ್ಲರನ್ನೂ ಒಳಗೊಳ್ಳುವ ಕೃತಿಯಾಗಿದೆ’ ಎಂದು ನುಡಿದರು.
ಕೃತಿ ಕುರಿತು ಸಾಹಿತಿ ಎನ್.ಗಾಯತ್ರಿ ಮಾತನಾಡಿದರು. ಪತ್ರಕರ್ತೆ ಆರ್.ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಸಂವಾದದಲ್ಲಿ ಆರ್.ಸುನಂದಮ್ಮ, ಪೂರ್ಣಿಮಾ ಮಂಡ್ಯ, ದು.ಸರಸ್ವತಿ, ಎಸ್.ರಶ್ಮಿ, ಗೌರಿ, ಕಾವ್ಯಶ್ರೀ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.