ADVERTISEMENT

ನಗರಕ್ಕೆ 50 ಮಹಿಳಾ ಪೊಲೀಸ್‌ ಗೊಂಬೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 21:01 IST
Last Updated 18 ಫೆಬ್ರುವರಿ 2020, 21:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಹಿಳೆಯರಲ್ಲಿ ಸುರಕ್ಷತೆ ಭಾವನೆ ಮೂಡಿಸುವ ಉದ್ದೇಶದಿಂದ ಮಹಿಳಾ‍ಪೊಲೀಸರನ್ನು ಹೋಲುವ ಸುಮಾರು 50 ಗೊಂಬೆಗಳನ್ನು ನಗರದ ಜನನಿಬಿಡ ಸ್ಥಳಗಳಲ್ಲಿ ನಿಲ್ಲಿಸಲು ನಗರ ಪೊಲೀಸರು ನಿರ್ಧರಿಸಿದ್ದಾರೆ.

ಮಹಿಳೆಯರ ಸಂಖ್ಯೆ ಹೆಚ್ಚಿರುವ ಶಾಲೆ, ಕಾಲೇಜು, ಚಿತ್ರಮಂದಿರ, ಮಾಲ್‌, ಗಾರ್ಮೆಂಟ್ಸ್‌ ಹಾಗೂ ಆಸ್ಪತ್ರೆಗಳ ಬಳಿ ಮಹಿಳಾ ಪೊಲೀಸರ ಸಮವಸ್ತ್ರ ಧರಿಸಿದ ಗೊಂಬೆಗಳನ್ನು ನಿಲ್ಲಿಸಲಾಗುವುದು. ಆ ಮೂಲಕ ಕಾನೂನು–ವ್ಯವಸ್ಥೆ ಪಾಲನೆಗೆ ಪೊಲೀಸರು ಸನ್ನದ್ಧವಾಗಿದ್ದು, ಸುರಕ್ಷತೆ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂಬ ಸಂದೇಶವನ್ನು ಮಹಿಳಾ ಸಮುದಾಯಕ್ಕೆ ರವಾನಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

50 ಪುರುಷ ಪೊಲೀಸ್‌ ಗೊಂಬೆಗಳ ಜೊತೆಗೆ ಈ ಮಹಿಳಾ ಪೊಲೀಸ್‌ ಗೊಂಬೆಗಳನ್ನು ನಿಲ್ಲಿಸಲು ತೀರ್ಮಾನಿಸಲಾಗಿದೆ. ಹೊಸ 100 ಪೊಲೀಸ್‌ ಗೊಂಬೆಗಳು ನಗರ ಪೊಲೀಸ್‌ ಕಾನೂನು– ಸುವ್ಯವಸ್ಥೆ ವಿಭಾಗಕ್ಕೆ ಸೇರ್ಪಡೆ ಆಗುತ್ತಿವೆ. ಈ ಮೊದಲು ನಿಲ್ಲಿಸಿರುವ 250 ಪುರುಷ ಪೊಲೀಸ್‌ ಗೊಂಬೆಗಳು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯುವಲ್ಲಿ ಸಹಕಾರಿಯಾಗಿರುವುದನ್ನು ಮನಗಂಡು ಇನ್ನಷ್ಟು ಗೊಂಬೆಗಳನ್ನು ನಿಲ್ಲಿಸಲಾಗುತ್ತಿದೆ ಎಂದೂ ಮೂಲಗಳು ಹೇಳಿವೆ.

ADVERTISEMENT

ಈಗಾಗಲೇ 50 ಗೊಂಬೆಗಳು ಪೊಲೀಸ್‌ ಕಮಿಷನರ್‌ ಕಚೇರಿಗೆ ಬಂದಿದ್ದು, ಬೇರೆ ಬೇರೆ ಸ್ಥಳಗಳಿಗೆ ಸಾಗಿಸಲು ಸಜ್ಜಾಗಿವೆ. ಪ್ರತಿ ಗೊಂಬೆ ಬೆಲೆ ₹ 4ರಿಂದ ₹ 6 ಸಾವಿರದವರೆಗಿದೆ. ಖಾಕಿ ಹಾಗೂ ಬಿಳಿ ಸಮವಸ್ತ್ರ, ಷೂ ಮತ್ತು ಸನ್‌ ಗ್ಲಾಸ್‌ನಲ್ಲಿ ಗೊಂಬೆಗಳು ಕಂಗೊಳಿಸುವುದರಿಂದ ಪೊಲೀಸರು ಇರಬಹುದು ಎಂದು ವಾಹನ ಚಾಲಕರು ಭಾವಿಸಿ ನಿಯಮಗಳನ್ನು ಪಾಲಿಸುತ್ತಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪೊಲೀಸ್‌ ಗೊಂಬೆ ಮಾದರಿಗಳನ್ನು ಕಂಡು ಪ್ರಭಾವಿತರಾಗಿರುವ ಪ್ಯಾರಿಸ್‌ ಪೊಲೀಸರು ಈ ವರ್ಷದ ಆರಂಭದಲ್ಲಿ ನಗರಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲೂ ಇಂಥ ಗೊಂಬೆ ಮಾದರಿಗಳನ್ನು ನಿಲ್ಲಿಸಲು ಈ ಅಧಿಕಾರಿಗಳು ಉತ್ಸುಕರಾಗಿದ್ದು ಕಮಿಷನರ್‌ ಭಾಸ್ಕರ್‌ರಾವ್‌ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ.

ಈ ಗೊಂಬೆಗಳ ಜಾಗವನ್ನು ಪ್ರತಿದಿನ ಬದಲಾಯಿಸಿ, ಪೊಲೀಸರನ್ನು ನಿಯೋಜಿಸಲಾಗುವುದು. ಇದರಿಂದಾಗಿ ಪೊಲೀಸರನ್ನು ಸಾರ್ವಜನಿಕರನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದೂ ಮೂಲಗಳು ಅಭಿಪ್ರಾಯಪಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.