ADVERTISEMENT

ಬೆಂಗಳೂರು | ಕಾರ್ಖಾನೆಯಲ್ಲಿ ಯಂತ್ರಕ್ಕೆ ತಲೆಕೂದಲು ಸಿಲುಕಿ ಮಹಿಳೆ ಸಾವು

‌ನೆಲಗದರನಹಳ್ಳಿಯ ಶ್ರೀಪೈಂಟರ್ಸ್‌ ಕಾರ್ಖಾನೆಯಲ್ಲಿ ದುರಂತ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 15:59 IST
Last Updated 8 ನವೆಂಬರ್ 2023, 15:59 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ನೆಲಗದರನಹಳ್ಳಿಯ ಶ್ರೀಪೇಂಟರ್ಸ್‌ ಕಾರ್ಖಾನೆಯಲ್ಲಿ ಬಣ್ಣ ಮಿಶ್ರಣ ಮಾಡುವ ಸಂದರ್ಭದಲ್ಲಿ ಯಂತ್ರಕ್ಕೆ ತಲೆಯ ಕೂದಲು ಸಿಲುಕಿ ಮಹಿಳೆಯೊಬ್ಬರ ತಲೆ ತುಂಡಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ರಾಮನಗರದ ಶ್ವೇತಾ(34) ಮೃತಪಟ್ಟವರು.

ADVERTISEMENT

‘ಕಾರ್ಖಾನೆ ಮಾಲೀಕನ ವಿರುದ್ದ ನಿರ್ಲಕ್ಷ್ಯ ಆರೋಪದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.‌

ರಾಮನಗರದ ಸುರೇಶ್‌ ಎಂಬುವರನ್ನು ಮದುವೆಯಾಗಿದ್ದ ಶ್ವೇತಾ ಅವರು, ನಗರದ ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದರು. ದಂಪತಿಗೆ ಮಗುವಿದೆ. ಸುರೇಶ್‌ ಅವರು ಗಾರೆ ಕೆಲಸ ಮಾಡಿಕೊಂಡಿದ್ದರು.

‘ಮಲ್ಲತ್ತಹಳ್ಳಿಯಿಂದಲೇ ಶ್ವೇತಾ ಅವರು ಕಾರ್ಖಾನೆಯ ಕೆಲಸಕ್ಕೆ ಬರುತ್ತಿದ್ದರು. ಇದು ಸಣ್ಣ ಪ್ರಮಾಣದ ಬಣ್ಣ ತಯಾರಿಸುವ ಕಾರ್ಖಾನೆಯಾಗಿದೆ. ಮಂಗಳವಾರ ಸಂಜೆ ಪೇಂಟ್‌ ತಯಾರಿಸಲು ಬಳಸುವ ಕಚ್ಚಾ ಸಾಮಗ್ರಿಗಳನ್ನು ಮಿಶ್ರಣ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಯಂತ್ರಕ್ಕೆ ವಿದ್ಯುತ್‌ ಸಂಪರ್ಕ ಕಡಿತ ಮಾಡಿಕೊಳ್ಳದೆ ಬಣ್ಣವನ್ನು ಹೊರಕ್ಕೆ ತೆಗೆಯಲು ಶ್ವೇತಾ ಮುಂದಾಗಿದ್ದರು. ಆಗ ತಲೆಯ ಕೂದಲು ಯಂತ್ರಕ್ಕೆ ಸಿಲುಕಿಕೊಂಡು ಅವರನ್ನು ಯಂತ್ರದ ಹತ್ತಿರಕ್ಕೆ ಎಳೆದಿದೆ. ಅವರು ಕೂಗಾಟ ನಡೆಸಿದ್ದರೂ ಶಬ್ದದಿಂದ ಯಾರಿಗೂ ಕೇಳಿಸಿರಲಿಲ್ಲ. ಕೆಲ ಸಮಯದ ಬಳಿಕ ಕಾರ್ಮಿಕರು ಬಂದು ನೋಡುವಷ್ಟರಲ್ಲಿ ಅವರು ಮೃತಪಟ್ಟಿದ್ದರು’ ಎಂದು ಪೊಲೀಸರು ಹೇಳಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಯಂತ್ರದಿಂದ ಹೊರ ತೆಗೆದು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಸುರೇಶ್ ನೀಡಿದ ದೂರಿನ ಮೇರೆಗೆ ಕಾರ್ಖಾನೆ ಮಾಲೀಕನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.