ಬೊಮ್ಮನಹಳ್ಳಿ: ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಮೇಲಿನ ಶೋಷಣೆ ತಡೆಗಟ್ಟಲು ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಮತ್ತು ವಿದ್ಯಾಭ್ಯಾಸಕ್ಕಾಗಿ ‘ಕನ್ಯಾಥಾನ್‘ ಶೀರ್ಷಿಕೆಯಡಿ ‘ರನ್ ಫಾರ್ ಹರ್’ ಎಂಬ ಓಟವನ್ನು ಆಯೋಜಿಸಲಾಗಿತ್ತು.
ಐಎಫ್‌ಐಎಂ ಕಾಲೇಜು, ಜಾಕ್ಸಾನ್ ಬಿ ಸ್ಕೂಲ್ ಹಾಗೂ ವಿಜಯ್ ಭೂಮಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಎಲೆಕ್ಟ್ರಾನಿಕ್ ಸಿಟಿಯ ಇನ್ಫೊಸಿಸ್ ಮೈದಾನದಲ್ಲಿ ಭಾನುವಾರ ಈ ಓಟವನ್ನು ಆಯೋಜಿಸಲಾಗಿತ್ತು. 10 ಕಿಮೀವರೆಗಿನ ಓಟದಲ್ಲಿ 2 ವರ್ಷದ ಮಕ್ಕಳಿಂದ 80 ವರ್ಷದ ವಯೋವೃದ್ಧರವರೆಗೂ ನೂರಾರು ಮಂದಿ ಭಾಗಿಯಾಗಿದ್ದರು.
ಬೆಳಿಗ್ಗೆ 6 ಗಂಟೆಗೆ ಆರಂಭವಾದ ಓಟ, ಎಲೆಕ್ಟ್ರಾನಿಕ್ ಸಿಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದುವರಿಯಿತು. ಐಟಿಬಿಟಿ ಉದ್ಯೋಗಿಗಳು, ವಿಧ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ದಾರಿಯುದ್ದಕ್ಕೂ ನೀರು, ತಂಪು ಪಾನೀಯ ವಿತರಿಸಲಾಯಿತು. ಸಂಚಾರ ದಟ್ಟಣೆಯಾಗದಂತೆ ಸ್ವಯಂಸೇವಕರು ಕಾರ್ಯನಿರ್ವಹಿಸಿದರು.
ಐಎಫ್‌ಐಎಂ ಕಾಲೇಜಿನ ಪ್ರೊ. ಬಿ.ವಿ.ವೆಂಕಟೇಶ್ ʼಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ಹಣದಲ್ಲಿ ಐದು ಸರ್ಕಾರಿ ಶಾಲೆಗಳಲ್ಲಿ ’ಕನ್ಯಾಥಾನ್’ ಶಿಕ್ಷಾ ಕೇಂದ್ರ ಶಾಖೆ ತೆರೆದು, ಸರ್ಕಾರಿ ಶಾಲೆಯ 300 ಹೆಣ್ಣು ಮಕ್ಕಳಿಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ಕೌಶಲ ತರಬೇತಿ ನೀಡಲಾಗುವುದು. ಬಡ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಲೈಂಗಿಕ ಕಾರ್ಯಕರ್ತರ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವ ಗುರಿಯನ್ನೂ ಹೊಂದಲಾಗಿದೆ’ ಎಂದರು.
ವಿದ್ಯಾರ್ಥಿನಿ ಮುತ್ತಾನಲ್ಲೂರು ರಕ್ಷಿತಾ ಮಾತನಾಡಿ ʼನಾನು ಇದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ. ಪ್ರತಿ ವರ್ಷ ವಿದ್ಯಾರ್ಥಿ ವೇತನದ ಮೂಲಕ ನನ್ನ ಶಿಕ್ಷಣಕ್ಕೆ ಸಹಾಯ ಮಾಡಲಾಗುತ್ತಿದೆ. ವಿದ್ಯಾರ್ಥಿನಿಯರಿಗಾಗಿ ಪ್ರತಿ ವರ್ಷ ಈ ಓಟವನ್ನು ಆಯೋಜಿಸಿ, ಇದರಿಂದ ಸಂಗ್ರಹವಾಗುವ ಹಣವನ್ನು ನಮ್ಮಂತಹ ವಿದ್ಯಾರ್ಥಿಗಳಿಗೆ ಕ್ಷೇಮಾಭಿವೃದ್ಧಿಗೆ ನೀಡುತ್ತಿದ್ದಾರೆʼ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
10 ಕಿಮೀ ಹಾಗೂ 5 ಕಿಮೀ, ಕುಟುಂಬದ ಜೊತೆಗೆ 3 ಕಿಮೀ ಓಟ, ಫನ್ ರನ್ ವಿಭಾಗಗಳಲ್ಲಿ ಭಾಗವಹಿಸಿ, ವೇಗವಾಗಿ ಗುರಿ ಮುಟ್ಟಿದ ಸ್ಪರ್ಧಿಗಳಿಗೆ ವಿಶೇಷ ಬಹುಮಾನ ನೀಡಲಾಯಿತು. ಓಟದಲ್ಲಿ ಗಣನೀಯ ಸಂಖ್ಯೆಯಲ್ಲಿ ಪುರುಷರು ಪಾಲ್ಗೊಂಡಿದ್ದರು.
ಒಲಿಂಪಿಕ್ ಆಟಗಾರ್ತಿ ಈಜುಪಟು ಧಿನಿಧಿ ದೇಸಿಂಗು, ಐ.ಎಪ್.ಐ.ಎಮ್ ಕಾಲೇಜಿನ ಕಾರ್ಯದರ್ಶಿ ಕಲ್ಪನ ಪಡೋಡೆ, ನಿರ್ದೇಶಕಿ ವಿ.ಶ್ರೀದೇವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.