ADVERTISEMENT

ಮಹಿಳಾ ಸಮೀಕ್ಷೆದಾರರಿಗೆ ಭದ್ರತೆ ಕಲ್ಪಿಸಿ: ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 14:58 IST
Last Updated 13 ಅಕ್ಟೋಬರ್ 2025, 14:58 IST
ಡಾ.ನಾಗಲಕ್ಷ್ಮಿ ಚೌಧರಿ
ಡಾ.ನಾಗಲಕ್ಷ್ಮಿ ಚೌಧರಿ   

ಬೆಂಗಳೂರು: ‘ನಗರದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನೇಮಕವಾಗಿರುವ ಮಹಿಳಾ ಸಮೀಕ್ಷೆದಾರರನ್ನು ಸಾರ್ವಜನಿಕರು ಅವಮಾನಿಸಿರುವ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಮಹಿಳಾ ಸಿಬ್ಬಂದಿಗೆ ಭದ್ರತೆ ಕಲ್ಪಿಸಬೇಕು’ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ತಿಳಿಸಿದ್ದಾರೆ.   

ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ಅವರು, ‘ಸಮೀಕ್ಷೆದಾರರಿಗೆ ವಾರ್ಡ್‌ ಹಂಚಿಕೆಯಾಗಿದೆ. ಆದರೆ, ಮನೆಗಳನ್ನು ಸರಿಯಾಗಿ ಹಂಚಿಕೆ ಮಾಡದೇ ಇರುವುದರಿಂದ ಗೊಂದಲ ಉಂಟಾಗಿದೆ. ಕೂಡಲೇ ವಾರ್ಡ್‌ ಹಾಗೂ ಮನೆಗಳನ್ನು ಸರಿಯಾಗಿ ಹಂಚಿಕೆ ಮಾಡಬೇಕು. ಕೆಲವು ಸಮೀಕ್ಷೆದಾರರ ಮೊಬೈಲ್‌ನಲ್ಲಿ ಆ್ಯಪ್‌ ಕಾರ್ಯನಿರ್ವಹಿಸುತ್ತಿಲ್ಲ. ಆಧಾರ್‌ ಒಟಿಪಿ ಸರಿಯಾಗಿ ಬರುತ್ತಿಲ್ಲ ಹಾಗೂ ಆ್ಯಪ್‌ನ ಸರ್ವರ್‌ ಸೇರಿದಂತೆ ತಾಂತ್ರಿಕ ಸಮಸ್ಯೆಗಳು ಆಗುತ್ತಿದ್ದು, ಇದರಿಂದ ಸಮೀಕ್ಷೆಗೆ ಅಡ್ಡಿಯಾಗುತ್ತಿದೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 

‘ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ, ಕೆಲವರ ಬಳಿ ಮತದಾರರ ಚೀಟಿ ಇಲ್ಲ. ಹೀಗಾಗಿ ಮತದಾರರ ಚೀಟಿ ಇಲ್ಲವೆಂದು ನಮೂದಿಸಿ ಮುಂದಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ. ಇದರಿಂದ ಸಮೀಕ್ಷಾ ಕಾರ್ಯ ವಿಳಂಬವಾಗುತ್ತಿದೆ. ಆದ್ದರಿಂದ ಮತದಾರರ ಚೀಟಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸೂಚಿಸಿದ್ದಾರೆ.

ADVERTISEMENT

‘ಕೆಲ ಸಮೀಕ್ಷೆದಾರರಿಗೆ ಇದುವರೆಗೂ ಗುರುತಿನ ಚೀಟಿ, ಸಮೀಕ್ಷೆಗೆ ಬೇಕಾದ ಫಾರಂಗಳು ಹಾಗೂ ಕಿಟ್‌ಗಳನ್ನು ಪೂರೈಕೆ ಮಾಡಿಲ್ಲ. ಮಹಿಳಾ ಸಿಬ್ಬಂದಿಗೆ ದೂರದ ವಾರ್ಡ್‌ಗಳನ್ನು ನಿಗದಿಪಡಿಸಿರುವುದರಿಂದ ನಿತ್ಯ ಓಡಾಡಲು ತೊಂದರೆ ಆಗುತ್ತಿದೆ. ಆದ್ದರಿಂದ ಅವರನ್ನು ಹತ್ತಿರದ ವಾರ್ಡ್‌ಗಳಲ್ಲಿ ನೇಮಿಸಬೇಕು. ಇದೇ ತಿಂಗಳಲ್ಲಿ ದೀಪಾವಳಿ ಹಬ್ಬ ಬರುತ್ತಿದೆ. ಮಾನವೀಯ ನೆಲೆಯಲ್ಲಿ ಸಮೀಕ್ಷೆದಾರರಿಗೆ ಹಬ್ಬ ಆಚರಿಸಲು ಅವಕಾಶ ನೀಡಬೇಕು. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕೈಗೊಂಡ ಕ್ರಮದ ಕುರಿತು ಆಯೋಗಕ್ಕೆ ವರದಿ ನೀಡಬೇಕು’ ಎಂದು ಸೂಚಿಸಿದ್ದಾರೆ. 

‘ಸಮೀಕ್ಷೆಯ ಅವಧಿ ಕಡಿತಗೊಳಿಸಿ’

‘ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆಯವರೆಗೆ ಸಮೀಕ್ಷೆ ನಡೆಸಲು ಮಹಿಳಾ ಸಿಬ್ಬಂದಿಗೆ ಸೂಚಿಸಲಾಗುತ್ತಿದೆ. ಮಹಿಳಾ ಸಿಬ್ಬಂದಿ ಮನೆಯಲ್ಲಿ ಚಿಕ್ಕ ಮಕ್ಕಳು ಅನಾರೋಗ್ಯ ಪೀಡಿತ ಅತ್ತೆ–ಮಾವು ಹಾಗೂ ತಂದೆ–ತಾಯಿಗಳನ್ನು ಹೊಂದಿರುತ್ತಾರೆ. ಇವರನ್ನು ನೋಡಿಕೊಳ್ಳಲು ಸಮಸ್ಯೆ ಆಗುತ್ತಿದೆ. ಹಾಗಾಗಿ ಮಹಿಳಾ ಸಮೀಕ್ಷೆದಾರರಿಗೆ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ ಸಮೀಕ್ಷಾ ಅವಧಿಯನ್ನು ಕಡಿತಗೊಳಿಸಿ ಸಂಜೆ 6 ಗಂಟೆವರೆಗೆ ನಿಗದಿಪಡಿಸುವ ಆದೇಶ ಹೊರಡಿಸಬೇಕು’ ಎಂದು ಡಾ. ನಾಗಲಕ್ಷ್ಮೀ ಚೌಧರಿ ಜಿಬಿಎ ಮುಖ್ಯ ಆಯುಕ್ತರಿಗೆ ಮನವಿ ಮಾಡಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.