ADVERTISEMENT

ಚಿಂಚನಸೂರ ವಿರುದ್ಧ ದೂರು ನೀಡಿದ್ದ ಮಹಿಳೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 19:52 IST
Last Updated 3 ನವೆಂಬರ್ 2019, 19:52 IST
ಬಾಬುರಾವ್ ಚಿಂಚನಸೂರ
ಬಾಬುರಾವ್ ಚಿಂಚನಸೂರ   

ಬೆಂಗಳೂರು: ‘ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರು ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಮೂರು ವರ್ಷಗಳ ಹಿಂದೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದ ಅಂಜನಾ ವಿ.ಶಾಂತವೀರ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯ ಆದರ್ಶನಗರದಲ್ಲಿ ವಾಸವಿದ್ದ ಮನೆಯಲ್ಲೇ ಅಂಜನಾ ಅವರು ಸಾವಿಗೆ ಶರಣಾಗಿದ್ದಾರೆ. ಪತಿ ವಿಜಯಕುಮಾರ್‌ ಅವರಿಂದ ವಿಚ್ಛೇದನ ಪಡೆದಿದ್ದ ಅಂಜನಾ, ಮಗ ಸುಮಂತ್‌ ಜೊತೆ ವಾಸವಿದ್ದರು.

ಅ. 30ರಂದು ಮಗ ಸುಮಂತ್, ಉಲ್ಲಾಳದಲ್ಲಿರುವ ಅಜ್ಜಿ ಮನೆಗೆ ಹೋಗಿದ್ದರು. ರಾತ್ರಿ 10ರ ಸುಮಾರಿಗೆ ಮಗನಿಗೆ ಕರೆ ಮಾಡಿದ್ದ ಅಂಜನಾ, ‘ನಾನು ಸಾಯುತ್ತಿದ್ದೇನೆ. ನನ್ನ ಚಿತೆಗೆ ನೀನೇ ಬೆಂಕಿ‌ ಇಡಬೇಕು’ ಎಂದು ಹೇಳಿ ಕರೆ ಕಡಿತಗೊಳಿಸಿದ್ದರು. ಗಾಬರಿ ಗೊಂಡಿದ್ದ ಮಗ ಮನೆಗೆ ಬಂದಿದ್ದರು. ಮನೆಯ ಕೊಠಡಿಯಲ್ಲೇ ತಾಯಿಯ ಮೃತದೇಹ ಕಂಡಿದ್ದರು’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮೃತದೇಹವಿದ್ದ ಸ್ಥಳದಲ್ಲಿ ಮರಣಪತ್ರ ಸಿಕ್ಕಿದೆ.‘ನನ್ನ ಸಾವಿಗೆ ನಾನೇ ಕಾರಣ’ ಎಂದು ಪತ್ರದಲ್ಲಿ ಬರೆಯಲಾಗಿದೆ. ಇದೊಂದು ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಮರಣಪತ್ರ ಅಂಜನಾ ಅವರದ್ದೇ ಎಂಬುದು ತಿಳಿಯಬೇಕಿದೆ. ಮರಣಪತ್ರವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

‘ಆರ್ಥಿಕ ಸಮಸ್ಯೆ ಕಾರಣಕ್ಕೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಮಗ ಸುಮಂತ್ ದೂರು ನೀಡಿದ್ದಾರೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ವಿವರಿಸಿದರು. ‘ಅಂಜನಾ 2016ರಲ್ಲಿ ಬಾಬುರಾವ್ ಚಿಂಚನಸೂರ ಅವರಿಗೆ ₹ 11.88 ಕೋಟಿ ಸಾಲ ನೀಡಿದ್ದರು ಎಂಬ ಮಾಹಿತಿ ಇದೆ. ಅದೇ ವಿಚಾರಕ್ಕಾಗಿ ಅವರು ಚಿಂಚನಸೂರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅದರ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.