ADVERTISEMENT

18 ಮಹಿಳೆಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’

ಮಹಿಳೆಯರ ಅಭಿವೃದ್ಧಿಗೆ ಶ್ರಮಿಸಿದ 6 ಸಂಸ್ಥೆಗಳು ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2023, 16:24 IST
Last Updated 7 ಮಾರ್ಚ್ 2023, 16:24 IST
   

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 6 ಸಂಸ್ಥೆಗಳು ಹಾಗೂ 18 ಮಹಿಳೆಯರಿಗೆ ‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ಯನ್ನು ಘೋಷಿಸಿದ್ದು, ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇಲಾಖೆಯು ಬುಧವಾರ ಹಮ್ಮಿಕೊಂಡಿರುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ 8 ಮಂದಿ, ಕಲಾ ಕ್ಷೇತ್ರದಲ್ಲಿ 5 ಮಂದಿ, ಕ್ರೀಡಾ ಕ್ಷೇತ್ರದಲ್ಲಿ ಎರಡು ಮಂದಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಮೂರು ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಂಸ್ಥೆಗಳಿಗೆ ತಲಾ ₹ 50 ಸಾವಿರ ಹಾಗೂ ವ್ಯಕ್ತಿಗಳಿಗೆ ತಲಾ ₹ 25 ಸಾವಿರ ನಗದು ಬಹುಮಾನ ನೀಡಲಾಗುವುದು.

ಮಹಿಳೆಯರ ಅಭಿವೃದ್ಧಿಗಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 3 ಸ್ತ್ರೀಶಕ್ತಿ ಗುಂಪುಗಳು ಹಾಗೂ 3 ಸ್ತ್ರಿ ಶಕ್ತಿ ಒಕ್ಕೂಟಗಳನ್ನೂ ರಾಜ್ಯಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರು ಗ್ರಾಮಾಂತರದ ಅನ್ನಪೂರ್ಣೇಶ್ವರಿ ಸ್ತ್ರೀಶಕ್ತಿ ಗುಂಪು ಪ್ರಥಮ ಸ್ಥಾನ (₹ 50 ಸಾವಿರ ನಗದು), ಕೊಡಗಿನ ಅಮೃತವರ್ಷಿಣಿ ಸ್ತ್ರೀಶಕ್ತಿ ಗುಂಪು ದ್ವಿತೀಯ ಸ್ಥಾನ (₹ 30 ಸಾವಿರ ನಗದು) ಹಾಗೂ ಕೊಪ್ಪಳದ ಕಾಳಿಕಾದೇವಿ ಸ್ತ್ರೀಶಕ್ತಿ ಸ್ವ ಸಹಾಯ ಗುಂಪು ತೃತೀಯ ಸ್ಥಾನ (₹ 20 ಸಾವಿರ ನಗದು) ಪಡೆದಿವೆ.

ADVERTISEMENT

ದಾವಣಗೆರೆಯ ಲಕ್ಷ್ಮೀಸರಸ್ವತಿ ಮಹಿಳಾ ಸ್ವ ಸಹಾಯ ಸಂಘ, ದಕ್ಷಿಣ ಕನ್ನಡದ ಸೌಜನ್ಯ ಸ್ತ್ರೀಶಕ್ತಿ ಸ್ವ ಸಹಾಯ ಸಂಘ, ಬಾಗಲಕೋಟೆಯ ಆಶಾದೀಪ ಸ್ತ್ರೀಶಕ್ತಿ ಸ್ವ ಸಹಾಯ ಸಂಘ ಹಾಗೂ ಕಲಬುರಗಿಯ ಕಲ್ಯಾಣಮ್ಮ ಮಹಿಳಾ ಸ್ವ ಸಹಾಯ ಸಂಘವು ‘ಯಶೋಧರಮ್ಮ ದಾಸಪ್ಪ ವಿಭಾಗೀಯ ಮಟ್ಟದ ಪ್ರಶಸ್ತಿ’ಗೆ ಭಾಜನವಾಗಿವೆ. ಈ ಪ್ರಶಸ್ತಿಯು ತಲಾ ‌₹ 25 ಸಾವಿರ ನಗದು ಒಳಗೊಂಡಿವೆ.

‘ಅತ್ಯುತ್ತಮ ತಾಲ್ಲೂಕು ಒಕ್ಕೂಟ ಪ್ರಶಸ್ತಿ’ ವಿಭಾಗದಲ್ಲಿ ಚಾಮರಾಜನಗರದ ಸ್ತ್ರೀಶಕ್ತಿ ಯೋಜನೆ ಬ್ಲಾಕ್ ಸೊಸೈಟಿ ಪ್ರಥಮ (₹ 80 ಸಾವಿರ ನಗದು), ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲ್ಲೂಕು ಮಹಿಳಾ ಸ್ತ್ರೀಶಕ್ತಿ ಸ್ವ ಸಹಾಯ ಸಂಘ ದ್ವಿತೀಯ (₹ 70 ಸಾವಿರ ನಗದು) ಹಾಗೂ ಉಡುಪಿಯ ಕಾರ್ಕಳ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ ತೃತೀಯ ಸ್ಥಾನ (₹ 60 ಸಾವಿರ ನಗದು) ಪಡೆದಿವೆ.

ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಸಾಲುಮರದ ತಿಮ್ಮಕ್ಕ, ಡಿಆರ್‌ಡಿಒ ವಿಜ್ಞಾನಿ ಆಶು ಭಾಟಿಯಾ ಹಾಗೂ ಮಹಿಳಾ ಬಸ್ ಚಾಲಕಿ ಪ್ರೇಮಾ ರಾಮಪ್ಪ ನಡಪಟ್ಟಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.

‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ಗೆ ಆಯ್ಕೆಯಾದ ಸಂಸ್ಥೆಗಳು

ಸಂಸ್ಥೆಯ ಹೆಸರು; ಜಿಲ್ಲೆ

ವೀರರಾಣಿ ಕಿತ್ತೂರು ಚನ್ನಮ್ಮ ಮಹಿಳಾ ಸಂಸ್ಥೆ; ಗದಗ

ಸಾಯಿ ಸಮರ್ಥ ಗೃಹ ಉದ್ಯೋಗ; ಕಲಬುರಗಿ

ವಿಜಯಲಕ್ಷ್ಮಿ ಎಜುಕೇಷನ್ ಮತ್ತು ಸೋಷಿಯಲ್ ವೆಲ್ಫೇರ್ ಸೊಸೈಟಿ; ವಿಜಯಪುರ

ಮಹಿಳಾ ಧ್ವನಿ ಶಿಕ್ಷಣ ಹಾಗೂ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ; ಕೊಪ್ಪಳ

ಕಾರ್ಕಳ ತಾಲ್ಲೂಕು ಮಹಿಳಾ ಮಂಡಳಿಗಳ ಒಕ್ಕೂಟ; ಉಡುಪಿ

ಪ್ರೇರಣ ರೊಸೋರ್ಸ್ ಸೆಂಟರ್; ಬೆಂಗಳೂರು

‘ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ’ಗೆ ಆಯ್ಕೆಯಾದ ವ್ಯಕ್ತಿಗಳು

ಹೆಸರು; ಜಿಲ್ಲೆ

ಜಯಮ್ಮ ಎಲ್. ಆರುಂಡಿ; ದಾವಣಗೆರೆ

ಟಿ.ಸಿ. ವಸಂತಾ; ಮಂಡ್ಯ

ರತ್ನಮ್ಮ; ಚಿಕ್ಕಬಳ್ಳಾಪುರ

ಭಾಗ್ಯಲಕ್ಷ್ಮಿ ಎಂ.; ಕಲಬುರಗಿ

ಗೀತಾ ಚೆಂಗಪ್ಪ; ಕೊಡಗು

ಸುನೀತಾ ಲೋಕನಾಥ್ ಕೋಟ್ಯಾನ್; ಉಡುಪಿ

ಸುಮಂಗಲಾ ಡಿ. ಕೋಟಿ; ವಿಜಯಪುರ

ಎನ್. ಸುಲೋಚನಾ; ಕೋಲಾರ

ಹಂಸಿಕಾ ವಿನಾಯಕ; ಬೆಂಗಳೂರು

ಸಿ.ಡಿ. ರಕ್ಷಿತಾ; ಶಿವಮೊಗ್ಗ

ಅನ್ನಪೂರ್ಣಾ ಎಂ. ಮನ್ನಾಪೂರ; ಕೊಪ್ಪಳ

ಪವನಾ ಬಿ. ಆಚಾರ್; ಉಡುಪಿ

ಭಾರತಿ ವರ್ಧಮಾನ ಛಬ್ಬಿ; ಹಾವೇರಿ

ಸುಕನ್ಯಾ ತ್ಯಾವಣಗಿ; ದಾವಣಗೆರೆ

ಜ್ಯೋತಿ ಎಂ. ಲೋಣಿ; ಗದಗ

ವಾಣಿಶ್ರೀ ಪಾಟೀಲ್ ಗುಂಡೂರು; ಕೊಪ್ಪಳ

ಚಂದನಾ ವಿ. ಗರಸಂಗಿ; ಬಾಗಲಕೋಟೆ

ನಿಧಿ ಶಿವರಾಮ ಸುಲಾಖೆ; ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.