ಬೆಂಗಳೂರು: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದಲ್ಲಿ ಹಲವು ಸಂಘ ಸಂಸ್ಥೆಗಳು, ಇಲಾಖೆಗಳು ಶನಿವಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು.
ಪೊಲೀಸ್ ಇಲಾಖೆ: ಪೊಲೀಸ್ ಇಲಾಖೆ ಸಹಯೋಗದೊಂದಿಗೆ ನಗರ ಪೊಲೀಸ್ ಮಹಿಳಾ ಸಿಬ್ಬಂದಿಗೆ ಹಮ್ಮಿಕೊಂಡಿದ್ದ ಉಚಿತ ಸರ್ವೈಕಲ್ ಕ್ಯಾನ್ಸರ್‌ನ ಲಸಿಕೆ ಹಾಗೂ ಕ್ಯಾನ್ಸರ್ ತಪಾಸಣೆಗೆ ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ ಚಾಲನೆ ನೀಡಿದರು.
ಕಾನೂನು ಸುವ್ಯವಸ್ಥೆ ನಿರ್ವಹಣೆಯಲ್ಲಿ ಪೊಲೀಸ್ ಮಹಿಳಾ ಸಿಬ್ಬಂದಿಯ ಕಾರ್ಯ ಅವಶ್ಯಕ. ಕರ್ತವ್ಯ ನಿರ್ವಹಣೆಯ ಭರದಲ್ಲಿ ತಮ್ಮ ಆರೋಗ್ಯವನ್ನು ನಿರ್ಲಕ್ಷಿಸಬಾರದು. ಕ್ಯಾನ್ಸರ್ ಬಗ್ಗೆ ತಪಾಸಣೆಯನ್ನು ಆಗಾಗ ಮಾಡಿಸಬೇಕು. ಎಚ್‌ಸಿಜಿ ಕ್ಯಾನ್ಸರ್ ಕೇಂದ್ರವು ಸರ್ವೈಕಲ್ ಕ್ಯಾನ್ಸರ್ ಲಸಿಕೆ ನೀಡುತ್ತಿರುವುದು ಶ್ಲಾಘನೀಯ ಎಂದು ದಯಾನಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಎಚ್‌ಸಿಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ಮನೀಶಾ ಕುಮಾರ್ ಮಾತನಾಡಿ, ಮಹಿಳೆ ಆರೋಗ್ಯವಾಗಿದ್ದರೆ ಸಮಾಜವೇ ಆರೋಗ್ಯವಾಗಿರುತ್ತದೆ’ ಎಂದರು.
ಕಾರ್ಯಕ್ರಮದಲ್ಲಿ ನಗರದ 250ಕ್ಕೂ ಹೆಚ್ಚು ಮಹಿಳಾ ಪೊಲೀಸ್ ಸಿಬ್ಬಂದಿಗೆ ಸರ್ವೈಕಲ್ ಕ್ಯಾನ್ಸರ್ ಲಸಿಕೆ ನೀಡಲಾಯಿತು. ಜೊತೆಗೆ, ಸ್ತನ ಕ್ಯಾನ್ಸರ್, ಪಿಎಪಿ ಸ್ಪೀಯರ್ ಟೆಸ್ಟ್ ಸೇರಿದಂತೆ ಹಲವು ತಪಾಸಣೆ ಮಾಡಲಾಯಿತು.
ಪೊಲೀಸ್ ನಿರ್ವಹಣಾ ಜಂಟಿ ಕಮಿಷನರ್ ಕುಲ್ದೀಪ್ ಕುಮಾರ್ ಆರ್. ಜೈನ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್, ಹೆಚ್ಚುವರಿ ಪೊಲೀಸ್ ಕಮಿಷನರ್ ಚಂದ್ರಗುಪ್ತಾ ಉಪಸ್ಥಿತರಿದ್ದರು.
ಸಾಧಕರಿಗೆ ಸನ್ಮಾನ: ಪ್ರಪಂಚದ ಅತಿ ಕಠಿಣ ಮ್ಯಾರಥಾನ್‌ಗಳಲ್ಲಿ ಒಂದಾದ ಲಡಾಖ್‌ನ 12,000 ಅಡಿ ಎತ್ತರ ಪ್ರದೇಶದಲ್ಲಿ 42 ಕಿ.ಮೀ ಓಟ ಪೂರೈಸಿ ಗೆದ್ದ ಶಿಲ್ಪಾ ಹೆಗಡೆ, ಇಸ್ರೊ ಅಂತರಿಕ್ಷಕ್ಕೆ ಚಿಮ್ಮಿಸಿದ ಮೊದಲ ಮೈಕ್ರೊ ಬಯಾಲಜಿಕಲ್ ಪೇ ಲೋಡ್ ಆರ್‌ವಿಎಸ್‌ಎಟಿ–1ರ ಸಿದ್ದತೆ ಮಾಡಿದ ತಂಡದಲ್ಲಿರುವ ವಿಜ್ಞಾನಿ ಪಾರ್ವತಿ, ಅತಿ ಚಿಕ್ಕ ವಯಸ್ಸಿನಲ್ಲಿಯೇ ದೇಶ ವಿದೇಶಗಳಲ್ಲಿ ಯೋಗ, ಭರತನಾಟ್ಯ ಪ್ರದರ್ಶಿಸಿದ ನೇಹಾ, ಬಹುಭಾಷಾ ತಜ್ಞೆ, ಸಾಹಿತಿ,ಯಕ್ಷ ನೃತ್ಯ ಸಹಿತ ಬಹುವಿಧದ ಶಾಸ್ತ್ರೀಯ ವಾದನದ ಪ್ರವೀಣೆ ಸ್ವಾತಿ ಪಂಡಿತ, ಜೆಇಇ ಬಿ ಆರ್ಚ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟದಲ್ಲಿ 5ನೇ ರ‍್ಯಾಂಕ್ ಗಳಿಸಿದ ರಕ್ಷಾ ದಿನೇಶ ಹೆಗಡೆ ಅವರನ್ನು ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಸನ್ಮಾನಿಸಲಾಯಿತು.
ರಕ್ಷಾ ದಿನೇಶ್ ಹೆಗಡೆ ಅವರ ಪರವಾಗಿ ಗೀತಾ ಸಭಾಹಿತ ಸನ್ಮಾನ ಸ್ವೀಕರಿಸಿದರು. ಸರೋಜಾ ಪ್ರಕಾಶ್ ಬರೆದ ‘ವಿಜ್ಞಾನದ ಜಾಡು ಬದಲಿಸಿದ ಜಾಣೆಯರು’ ಪುಸ್ತಕವನ್ನು ಪ್ರಕಾಶಕಿ ವಿಶಾಲಾಕ್ಷಿ ಶರ್ಮ ಅವರ ಭೂಮಿ ಬುಕ್ಸ್ ಪ್ರಕಾಶನ ಪ್ರಕಟಿಸಿದ್ದು, ಲೇಖಕಿ ದೀಪಾ ಎಂ.ಬಿ. ಹಾಗೂ ನಿವೃತ್ತ ಡಿಜಿಪಿ ಡಿ.ವಿ. ಗುರುಪ್ರಸಾದ ಬಿಡುಗಡೆ ಮಾಡಿದರು.
ಎಐಎಂಎಸ್ಎಸ್: ಮಹಿಳೆಯರ ಮತ್ತು ಮಕ್ಕಳ ಜೀವಿಸುವ ಹಕ್ಕಿಗಾಗಿ ಧ್ವನಿ ಎತ್ತಿ, ಆರೋಗ್ಯ-ಶಿಕ್ಷಣ-ಸುರಕ್ಷತೆ ಮತ್ತು ಆರ್ಥಿಕ ಭದ್ರತೆಯನ್ನು ಖಾತ್ರಿಪಡಿಸಿ ಎಂಬ ಘೋಷವಾಕ್ಯದೊಂದಿಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆಯ ಬೆಂಗಳೂರು ಜಿಲ್ಲಾ ಸಮಿತಿಯು ಮಹಿಳಾ ದಿನ ಆಚರಿಸಿತು.
ಪ್ರಾಧ್ಯಾಪಕಿ ಎಂ.ಎಸ್. ಆಶಾದೇವಿ ಮಾತನಾಡಿ, ‘ಬದಲಾದ ಹೆಣ್ಣನ್ನು ಈ ಸಮಾಜ ಸುಲಭವಾಗಿ ಒಪ್ಪುವುದಿಲ್ಲ. ಮಹಿಳೆಯರ ಸಹಿಸಿಕೊಳ್ಳುವ ಗುಣವೇ ಅವರಿಗೆ ಇಂದು ಮುಳ್ಳಾಗಿದೆ. ಹೆತ್ತವರು ಸಹ ಹೆಣ್ಣುಮಕ್ಕಳಿಗೆ ಎಲ್ಲವನ್ನು ಸಹಿಸಿಕೊಳ್ಳುವ ಬೋಧನೆಯನ್ನು ಮಾಡುತ್ತಾರೆ. ಮಹಿಳೆಯರು ಎಲ್ಲವನ್ನೂ ಸಹಿಸಿಕೊಳ್ಳಬೇಕಿಲ್ಲ’ ಎಂದು ಹೇಳಿದರು.
ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಶೋಭಾ ಎಸ್. ಮಾತನಾಡಿ, ‘ವ್ಯವಸ್ಥೆಯು ಮಹಿಳೆ ಮತ್ತು ಮಕ್ಕಳ ಜೀವಿಸುವ ಹಕ್ಕನ್ನೇ ಕಸಿದುಕೊಳ್ಳುತ್ತಿದೆ. ಇತ್ತೀಚೆಗೆ ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧದಿಂದಾಗಿ ಉಂಟಾದ ಸಾಲು ಸಾಲು ಬಾಣಂತಿಯರ ಸಾವುಗಳು ಹಾಗು ಶಿಶುಮರಣಗಳು ರಾಜ್ಯದ ಜನರನ್ನು ತಲ್ಲಣಗೊಳಿಸಿವೆ’ ಎಂದರು.
‘ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳು ರಕ್ತಹೀನತೆ ಹಾಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೀಗಿದ್ದರೂ ರಾಜ್ಯ ಸರ್ಕಾರವು ಈ ಬಾರಿಯು ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಮೀಸಲಿಟ್ಟ ಹಣ ಶೇಕಡಾ 4 ಮಾತ್ರ’ ಎಂದು ಬೇಸರ ವ್ಯಕ್ತಪಡಿಸಿದರು.
ಎಐಎಂಎಸ್ಎಸ್ ಜಿಲ್ಲಾಧ್ಯಕ್ಷೆ ಹೇಮಾವತಿ ಕೆ., ಜಿಲ್ಲಾ ಕಾರ್ಯದರ್ಶಿ ನಿರ್ಮಲಾ ಎಚ್.ಎಲ್. ಭಾಗವಹಿಸಿದ್ದರು.
ಮಹಿಳಾ ಪೊಲೀಸರಿಂದ ಕವಾಯತು
ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಮೈಸೂರು ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿ ಶನಿವಾರ ಮಹಿಳಾ ಪೊಲೀಸ್ ಸಿಬ್ಬಂದಿ ಕವಾಯತು ನಡೆಯಿತು. ರಾಣಿ ಚೆನ್ನಮ್ಮ ಪಡೆಯು ವಿಶೇಷ ಪ್ರದರ್ಶನ ನೀಡಿತು. ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಕವಾಯತು ವೀಕ್ಷಿಸಿದರು. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ಫಲಾನುಭವಿಗಳಿಗೆ 32 ಎಲೆಕ್ಟ್ರಿಕ್ ಆಟೊಗಳು ಎರಡು ಚಾಯ್ ಬಂಡಿ 10 ಹೊಲಿಗೆ ಯಂತ್ರಗಳನ್ನು ಇದೇ ವೇಳೆ ವಿತರಣೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.