ADVERTISEMENT

ಮಹಿಳಾ ಪ್ರಧಾನ ಮಹಾಭಾರತಕ್ಕೆ ಮುನ್ನುಡಿ

ಮೊಯಿಲಿ ಅವರ ‘ಯಾಜ್ಞಸೇನಿ ಸಿರಿಮುಡಿ ಪರಿಕ್ರಮಣಮು‘ ಕೃತಿ ಕುರಿತು ಕಂಬಾರ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 19:35 IST
Last Updated 1 ಸೆಪ್ಟೆಂಬರ್ 2018, 19:35 IST
ಸಂಸದ ಎಂ.ವೀರಪ್ಪ ಮೊಯಿಲಿ ಅವರ ‘ಯಾಜ್ಞಸೇನಿ ಸಿರಿಮುಡಿ ಪರಿಕ್ರಮಣಮು’ (ತೆಲಗು ಅನುವಾದ) ಗ್ರಂಥವನ್ನು ಸಾಹಿತಿ ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಿದರು. ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರಾಜು ಇದ್ದಾರೆ -ಪ್ರಜಾವಾಣಿ ಚಿತ್ರ
ಸಂಸದ ಎಂ.ವೀರಪ್ಪ ಮೊಯಿಲಿ ಅವರ ‘ಯಾಜ್ಞಸೇನಿ ಸಿರಿಮುಡಿ ಪರಿಕ್ರಮಣಮು’ (ತೆಲಗು ಅನುವಾದ) ಗ್ರಂಥವನ್ನು ಸಾಹಿತಿ ಚಂದ್ರಶೇಖರ ಕಂಬಾರ ಬಿಡುಗಡೆ ಮಾಡಿದರು. ತೆಲುಗು ವಿಜ್ಞಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರಾಜು ಇದ್ದಾರೆ -ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವ್ಯಾಸ, ರನ್ನ, ಪಂಪ ಸೇರಿದಂತೆ ಇಲ್ಲಿಯವರೆಗೂ ಬಂದಿರುವ ಮಹಾಕಾವ್ಯಗಳಲ್ಲಿ ಪುರುಷ ಪ್ರಧಾನ ಪಾತ್ರಗಳು ಎದ್ದು ಕಾಣುತ್ತವೆ. ಆದರೆ ಮೊಯಿಲಿ ಅವರ ಕಾವ್ಯದಲ್ಲಿ ದ್ರೌಪದಿ ನಾಯಕಿಯಾಗಿದ್ದಾಳೆ. ಇದು ಮಹಿಳಾ ಪ್ರಧಾನ ಕಾವ್ಯಕ್ಕೆ ಮುನ್ನುಡಿಯಾಗಿದೆ’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು.

ತೆಲುಗು ವಿಜ್ಞಾನ ಸಮಿತಿ ನಗರದಲ್ಲಿ ಶನಿವಾರ ಆಯೋಜಿಸಿದ್ದ, ಸಂಸದ ಎಂ.ವೀರಪ್ಪ ಮೊಯಿಲಿ ಅವರ ‘ಯಾಜ್ಞಸೇನಿ ಸಿರಿಮುಡಿ ಪರಿಕ್ರಮಣಮು‘ ತೆಲುಗು ಅನುವಾದ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಮೊಯಿಲಿ ಅವರ ಕಾವ್ಯ ಮಹಿಳೆಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತದೆ. ತೀರಾ ಇತ್ತೀಚಿನ ಆತಂಕ ಹಾಗೂ ಸಮಸ್ಯೆಗಳನ್ನೂ ಇದರಲ್ಲಿ ಹೇಳಲಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಬಹುಶಃ ಬೇರೊಂದು ಕಾವ್ಯ, ಮಹಾಭಾರತದಷ್ಟು ಬೆಳೆದಿರಲು ಸಾಧ್ಯವೇ ಇಲ್ಲ. ಇದು ಪ್ರಪಂಚದ ದೊಡ್ಡ ಪವಾಡಗಳಲ್ಲಿ ಒಂದು. ಈ ಕಾವ್ಯದ ಮೇಲೆ ಮೊದಲು ಎಂಟು ಸಾವಿರ ಶ್ಲೋಕಗಳಿದ್ದವು. ಈಗ 1.4 ಲಕ್ಷಕ್ಕೆ ಏರಿಕೆಯಾಗಿವೆ. ಕುವೆಂಪು, ಎಸ್‌.ಎಲ್‌.ಭೈರಪ್ಪ ಅವರ ಬಳಿಕ ಬಂದ ಆಧುನಿಕ ಕಾವ್ಯವಾಗಿದ್ದರಿಂದ ಮೊಯಿಲಿ ಅವರ ಕೃತಿ ಹೊಸ ಹೊಳಹುಗಳನ್ನು ನೀಡುತ್ತದೆ’ ಎಂದು ವಿಶ್ಲೇಷಿಸಿದರು.

ಚಿಂತಕ ಕಬ್ಬಿನಾಲೆ ವಸಂತ ಭಾರದ್ವಾಜ್‌, ‘ವ್ಯಾಸಭಾರತದಲ್ಲಿ, ಕರ್ಣ ತನ್ನ ಮಗ ಎಂದು ಕುಂತಿ ಅಂತ್ಯದಲ್ಲಿ ಹೇಳುತ್ತಾಳೆ. ಆದರೆ ಮೊಯಿಲಿ ಅವರ ಕಾವ್ಯದಲ್ಲಿ ಅವಳು ದ್ರೌಪದಿಯೊಂದಿಗೆ ಮೊದಲೇ ಹೇಳಿಕೊಳ್ಳುತ್ತಾಳೆ. ಅರ್ಜುನನ ಸರಣಿ ವಿವಾಹಗಳಿಂದ ನೊಂದ ದ್ರೌಪದಿ, ನದಿಯಲ್ಲಿ ಸ್ನಾನ ಮಾಡುವಾಗ ಕೊಚ್ಚಿಕೊಂಡು ಹೋಗುತ್ತಾಳೆ. ಇಂತಹ ಅನೇಕ ಘಟನೆಗಳು ಮಹಿಳೆ ಹಾಗೂ ಆಕೆಯ ಆಂತರಂಗದ ಜಿಜ್ಞಾಸೆಯನ್ನು ತೆರೆದಿಡುತ್ತವೆ’ ಎಂದು ಹೇಳಿದರು.

‘ಹಾವು ಕಚ್ಚಿದ್ದ ಕರ್ಣನನ್ನು ದ್ರೌಪದಿ ಬದುಕಿಸುತ್ತಾಳೆ. ಪಗಡೆಯಾಟದಲ್ಲಿ ಸೋತ ಧರ್ಮರಾಯ, ದ್ರೌಪದಿಯನ್ನು ಒತ್ತೆಯಾಳಾಗಿಸಲು ಹೊರಟಾಗ, ನಾನು ಆಳಲ್ಲ, ವಸ್ತುವೂ ಅಲ್ಲ ಎಂದು ಆಕೆ ವಿರೋಧಿಸುತ್ತಾಳೆ. ಈ ಮೂಲಕ ಆಧುನಿಕ ಪ್ರಪಂಚದ ಮಹಿಳೆಯನ್ನು ಅವರು ಕಟ್ಟಿಕೊಟ್ಟಿದ್ದಾರೆ’ ಎಂದು ಕೃತಿಯ ಬಹುಮುಖಿ ಗುಣಗಳನ್ನು ವಿವರಿಸಿದರು.

***

ಪುಸ್ತಕದ ಬೆಲೆ: ₹200

ಪುಟಗಳ ಸಂಖ್ಯೆ: 489

ಪ್ರಕಾಶನ: ವಾಕಳಿ ಪ್ರಕಾಶನ, ಹೈದರಾಬಾದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.