ADVERTISEMENT

ಮತ್ತೆ ತೆರೆಯಲಿದೆ ವಂಡರ್‌ ಲಾ: ಕೋವಿಡ್‌ ವಾರಿಯರ್‌ಗಳಿಗೆ ಮೊದಲ ವಾರ ಉಚಿತ ಪ್ರವೇಶ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 9:44 IST
Last Updated 31 ಅಕ್ಟೋಬರ್ 2020, 9:44 IST
ವಂಡರ್‌ ಲಾ
ವಂಡರ್‌ ಲಾ   

ಬೆಂಗಳೂರು: ಕೋವಿಡ್‌ ಹಿನ್ನೆಲೆಯಲ್ಲಿ ಕಾರ್ಯಚಟುವಟಿಕೆ ಸ್ಥಗಿತಗೊಳಿಸಿದ್ದ ಬಿಡದಿ ಬಳಿಯ 'ವಂಡರ್‌ ಲಾ ಅಮ್ಯೂಸ್‌ಮೆಂಟ್‌ ಥೀಮ್‌ ಪಾರ್ಕ್ ಮತ್ತು ರೆಸಾರ್ಟ್‌' ಮತ್ತೆ ತೆರೆಯಲಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ವಂಡರ್‌ ಲಾ ವ್ಯವಸ್ಥಾಪಕ ಮಂಡಳಿಯು, 'ವಂಡರ್‌ ಲಾ ಥೀಮ್ ಪಾರ್ಕ್ ಮತ್ತು ರೆಸಾರ್ಟ್‌ ಬೆಂಗಳೂರಿನಲ್ಲಿ ಪುನಃ ಕಾರ್ಯಚಟುವಟಿಕೆ ಆರಂಭಿಸಲಿದ್ದು, ವಿಶೇಷವಾಗಿ ಕೋವಿಡ್ ವಾರಿಯರ್‌ಗಳಿಗೆ ಮೊದಲನೇ ವಾರ ಉಚಿತ ಪ್ರವೇಶ ಒದಗಿಸಲಾಗುವುದು. ಈ ಮೂಲಕ 12,000ಕ್ಕೂ ಅಧಿಕ ಕೋವಿಡ್‌ ವಾರಿಯರ್‌ಗಳು ಮತ್ತು ಅವರ ಕುಟುಂಬ ಸದಸ್ಯರು ಉಚಿತ ಪಾಸ್‌ ಪಡೆಯಲಿದ್ದಾರೆ.' ಎಂದು ತಿಳಿಸಿದೆ.

'ನವೆಂಬರ್ 9, 2020ರಿಂದ ನವೆಂಬರ್ 12, 2020ರವರೆಗೆ ವಂಡರ್ ಲಾ ಪಾರ್ಕ್ ವಿಶೇಷವಾಗಿ ಕೋವಿಡ್‌ ವಾರಿಯರ್‌ಗಳಿಗೆ ತೆರೆದಿರುತ್ತದೆ. ಫ್ರಂಟ್‌ಲೈನ್ ವಾರಿಯರ್‌ಗಳು ಹಾಗೂ ಅವರ ಕುಟುಂಬ ಸದಸ್ಯರು ಪಾರ್ಕ್‌ನಲ್ಲಿ ಲಭ್ಯವಿರುವ ಎಲ್ಲಾ ರೈಡ್‌ಗಳಿಗೆ ಪ್ರವೇಶ ಪಡೆಯಬಹುದು ಮತ್ತು ಆಹಾರ-ಪಾನೀಯಗಳನ್ನು ಆನಂದಿಸಬಹುದಾಗಿದೆ' ಎಂದು ವಂಡರ್ ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಚಿಟ್ಟಿಪಳ್ಳಿ ಮಾಹಿತಿ ನೀಡಿದ್ದಾರೆ.

ADVERTISEMENT

ನವೆಂಬರ್ 12, 2020ರಿಂದ ವಂಡರ್‌ ಲಾ ಪಾರ್ಕ್ ಸಾರ್ವಜನಿಕರಿಗಾಗಿ ತೆರೆಯಲಿದ್ದು, ಪ್ರತಿ ಶುಕ್ರವಾರದಿಂದ ಭಾನುವಾರದವರೆಗೆ ಕಾರ್ಯನಿರ್ವಹಿಸಲಿದೆ. ಪ್ರವೇಶದ ಪಾಸ್‌ಗಳನ್ನು ಆನ್‌ಲೈನ್‌ ಮೂಲಕವೇ ಒದಗಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.