ADVERTISEMENT

ಮಲದ ಗುಂಡಿಯಲ್ಲಿ ಬಿದ್ದು ಕಾರ್ಮಿಕ ಸಾವು

ಹೊಂಗಸಂದ್ರದ ಜೈ ಹಿಂದ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಘಟನೆ * ಪ್ರಾಂಶುಪಾಲ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 20:15 IST
Last Updated 4 ಮಾರ್ಚ್ 2019, 20:15 IST
   

ಬೆಂಗಳೂರು: ಹೊಂಗಸಂದ್ರದ ಜೈ ಹಿಂದ್ ಇಂಟರ್‌ನ್ಯಾಷನಲ್ ಶಾಲೆಯ ಆವರಣದಲ್ಲಿರುವ ಮಲದ ಗುಂಡಿಯೊಳಗೆ ಬಿದ್ದು ಮನು ಎಂಬುವರು ಮೃತಪಟ್ಟಿದ್ದು, ಆ ಸಂಬಂಧ ಶಾಲೆಯ ಪ್ರಾಂಶುಪಾಲ ಸೇರಿ ಮೂವರನ್ನು ಬಂಧಿಸಲಾಗಿದೆ.

‘ಪ್ರಾಂಶುಪಾಲ ರಾಘವನ್, ಶಾಲೆಯ ಉಪಾಧ್ಯಕ್ಷೆ ಸರೋಜಾ ಹಾಗೂ ಕೋ– ಆಡಿನೇಟರ್ ವಿನಯ್ ಬಂಧಿತರು. ಮೂವರನ್ನೂ ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಆ ಪೈಕಿ ಸರೋಜಾ ಅವರಿಗೆ ಜಾಮೀನು ಸಿಕ್ಕಿದ್ದು, ಉಳಿದಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಬೇಗೂರು ಠಾಣೆ ಪೊಲೀಸರು ತಿಳಿಸಿದರು.

‘ಸ್ಥಳೀಯ ನಿವಾಸಿ ಆಗಿದ್ದ ಮನು, ಮಾ. 2ರಂದು ಮಧ್ಯಾಹ್ನ ಶಾಲೆಯ ಆವರಣದಲ್ಲಿದ್ದ ಮಲದ ಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆಯಲ್ಲಿ ಮೃತಪಟ್ಟಿದ್ದರು. ಆ ಸಂಬಂಧ ಅವರ ಪತ್ನಿ ನಂದಿನಿ ದೂರು ನೀಡಿದ್ದರು. ಮಲ ಬಾಚುವ ವೃತ್ತಿ ನಿಷೇಧ ಹಾಗೂ ಪುನರ್‌ವಸತಿ ಕಾಯ್ದೆ– 2013 ಅಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದರು.

ADVERTISEMENT

‘ಸಂಬಂಧಿಕರೇ ಟ್ರಸ್ಟ್ ಮಾಡಿಕೊಂಡು ಶಾಲೆ ನಡೆಸುತ್ತಿದ್ದಾರೆ. ರಾಘವನ್ ಅವರು ಪ್ರಾಂಶುಪಾಲ ಆಗಿದ್ದರೆ, ಪತ್ನಿ ಸರೋಜಾ ಉಪಾಧ್ಯಕ್ಷೆ ಹಾಗೂ ಮಗ ವಿನಯ್ ಕೋ–ಆಡಿನೇಟರ್ ಆಗಿದ್ದಾರೆ’ ಎಂದು ಹೇಳಿದರು.

ತಲೆ ಕೆಳಗಾಗಿ ಬಿದ್ದಿದ್ದರು: ‘ಶೌಚಾಲಯಗಳ ಮಲ ಸಂಗ್ರಹಕ್ಕಾಗಿ ಶಾಲೆಯ ಆವರಣದಲ್ಲಿ 2x2 ಅಡಿ ಸುತ್ತಳತೆಯ 5 ಅಡಿ ಉದ್ದದ ಗುಂಡಿ ತೊಡಲಾಗಿದೆ. ಅದೇ ಗುಂಡಿಯನ್ನು ಸ್ವಚ್ಛಗೊಳಿಸುವುದಕ್ಕಾಗಿ ಮನು ಅವರನ್ನು ಆಡಳಿತ ಮಂಡಳಿಯವರು ಶಾಲೆಗೆ ಕರೆಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

’ಗುಂಡಿ ಪಕ್ಕವೇ ನಿಂತುಕೊಂಡಿದ್ದ ಮನು, ಮಲವನ್ನು ಹೊರಗೆ ತೆಗೆಯುತ್ತಿದ್ದರು. ಅದೇ ವೇಳೆ ಏಕಾಏಕಿ ಗುಂಡಿಯೊಳಗೆ ತಲೆ ಕೆಳಗಾಗಿ ಬಿದ್ದಿದ್ದರು. ಅದನ್ನು ಗಮನಿಸಿ ರಕ್ಷಣೆಗೆ ಹೋಗಿದ್ದ ಶಾಲಾ ಸಿಬ್ಬಂದಿ, ಮನು ಅವರನ್ನು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದರು. ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ಹೇಳಿದರು. ಘಟನೆ ಸಂಬಂಧ ಶಾಲಾ ಸಿಬ್ಬಂದಿಯಿಂದಲೂ ಹೇಳಿಕೆ ಪಡೆಯಲಾಗಿದೆ’ ಎಂದು ತಿಳಿಸಿದರು.

‘ಮಲದ ಗುಂಡಿಯಿಂದ ಬರುತ್ತಿದ್ದ ದುರ್ನಾತದಿಂದಾಗಿ ಮನು ಪ್ರಜ್ಞೆ ತಪ್ಪಿ ಗುಂಡಿಯೊಳಗೆ ಬಿದ್ದಿದ್ದರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಬಂದ ಬಳಿಕ ಮತ್ತಷ್ಟು ಮಾಹಿತಿ ದೊರೆಯಲಿದೆ’ ಎಂದು ಪೊಲೀಸರು ಹೇಳಿದರು.

ಪ್ರೀತಿಸಿ ಮದುವೆಯಾಗಿದ್ದ ಮನು: ಹೊಂಗಸಂದ್ರದಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ ಮನು, ನಂದಿನಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಯು ಹೊಂಗಸಂದ್ರದ ವಿದ್ಯಾ ಜ್ಯೋತಿ ಶಾಲೆ ಬಳಿಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅವರ ಸಾವಿನಿಂದಾಗಿ ಕುಟುಂಬವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.‌

‘ಪತಿ ಹಾಗೂ ನಾನು ಅನ್ಯೋನ್ಯವಾಗಿದ್ದೆವು. ಮಲದ ಗುಂಡಿ ಸ್ವಚ್ಛಗೊಳಿಸುವುದಕ್ಕಾಗಿ ಪತಿಯನ್ನು ಶಾಲೆಯವರೇ ಕರೆದುಕೊಂಡು ಹೋಗಿದ್ದರು. ಗುಂಡಿ ಸ್ವಚ್ಛಗೊಳಿಸಲು ಅಗತ್ಯವಾದ ಸುರಕ್ಷತೆ ಸಾಧನೆಗಳನ್ನು ಕೊಟ್ಟಿರಲಿಲ್ಲ. ಆಡಳಿತ ಮಂಡಳಿ ನಿರ್ಲಕ್ಷ್ಯದಿಂದಲೇ ನನ್ನ ಪತಿ ಮೃತಪಟ್ಟಿದ್ದಾರೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಪತ್ನಿ ನಂದಿನಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.