ADVERTISEMENT

‘ಆರ್ಥಿಕ ದಿವಾಳಿತನದಿಂದ ಕಾರ್ಮಿಕರು ಬೀದಿಗೆ’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 8:56 IST
Last Updated 3 ಸೆಪ್ಟೆಂಬರ್ 2019, 8:56 IST
ಸಿಐಟಿಯು ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಸಿಐಟಿಯು ಕಾರ್ಯಕರ್ತರು ಮೆರವಣಿಗೆ ನಡೆಸಿದರು.   

ಬೊಮ್ಮನಹಳ್ಳಿ: ‘ಕೇಂದ್ರ ಸರ್ಕಾರದ ಆರ್ಥಿಕ ಅಜ್ಞಾನದಿಂದಾಗಿ ಕೈಗಾರಿಕಾ ವಲಯ ದಿವಾಳಿಯಾಗಿದೆ. ಇದರಿಂದ ಒಂದು ಕೋಟಿಗೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಿದಾರೆ. ಇದಕ್ಕೆ ಮೋದಿ ಸರ್ಕಾರವೇ ಹೊಣೆ’ ಎಂದು ಸಿಐಟಿಯು ಕರ್ನಾಟಕ ರಾಜ್ಯ ಕಾರ್ಯದರ್ಶಿ ಕೆ.ಎನ್. ಉಮೇಶ್ ಕಿಡಿಕಾರಿದರು.

ಬೇಗೂರಿನಲ್ಲಿ ನಡೆದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಬೆಂಗಳೂರು ದಕ್ಷಿಣ ಜಿಲ್ಲಾ 12 ನೇ ಕಾರ್ಮಿಕ ಸಮ್ಮೇಳನದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ಜವಳಿ ಉದ್ಯಮ, ಆಟೊಮೊಬೈಲ್ ಕ್ಷೇತ್ರದ ಬೃಹತ್ ಕೈಗಾರಿಕೆಗಳು ಮುಚ್ಚುವ ಹಂತದಲ್ಲಿವೆ. ಕೇಂದ್ರದ ಅರೆಜ್ಞಾನದ ಅವೈಜ್ಞಾನಿಕ ನಿಲುವುಗಳು ದೇಶದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದೆ. ಇಂತಹ ಸ್ಥಿತಿಯಲ್ಲಿ ಕಾರ್ಮಿಕರ ಬದುಕಿಗೆ ರಕ್ಷಣೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ADVERTISEMENT

ಬೊಮ್ಮನಹಳ್ಳಿ ಜಂಕ್ಷನ್‍ನಲ್ಲಿ ಸೇರಿದ ಕಾರ್ಮಿಕರು ಕೆಂಬಾವುಟಗಳೊಂದಿಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಿ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ಎಂ.ಆಂಜನಪ್ಪ, ಸಿಐಟಿಯು ರಾಜ್ಯ ಕಾರ್ಯದರ್ಶಿ ಎನ್.ಪ್ರತಾಪ್ ಸಿಂಹ, ಮಾದರಿ ಕೃಷಿಕ ಬಿಳೇಕ ಹಳ್ಳಿ ನಾರಾಯಣ ವೇದಿಕೆಯಲ್ಲಿದ್ದರು.

ಡಾ.ಕೆ.ಪ್ರಕಾಶ್ ಮುಂದಿನ ಮೂರು ವರ್ಷದ ಅವಧಿಗೆ ಅಧ್ಯಕ್ಷರಾಗಿ ಪುನರಾಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎನ್. ಮಂಜುನಾಥ್, ಖಜಾಂಚಿಯಾಗಿ ಟಿ.ಜೆ. ಥಾಮಸ್ ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.