ADVERTISEMENT

ಅರಮನೆ ಮೈದಾನದಲ್ಲಿ ನಾಳೆಯಿಂದ ‘ಆಯುರ್ವೇದ ವಿಶ್ವ ಸಮ್ಮೇಳನ’

ಅರಮನೆ ಮೈದಾನದಲ್ಲಿ ಕಜೆ ಆಯುರ್ವೇದಿಕ್ ಚಾರಿಟೆಬಲ್ ಫೌಂಡೇಷನ್ ಆಯೋಜನೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 14:57 IST
Last Updated 23 ಡಿಸೆಂಬರ್ 2025, 14:57 IST
ಸಮ್ಮೇಳನದ ಆಯೋಜಕರಾದ ಡಾ.ಗಿರಿಧರ ಕಜೆ, ಡಾ. ಅಶೋಕ್, ಅಜಿತ್ ಹಾಗೂ ಅಭಿಷೇಕ್ ಅವರು ಕರಪತ್ರವನ್ನು ಬಿಡುಗಡೆ ಮಾಡಿದರು
ಸಮ್ಮೇಳನದ ಆಯೋಜಕರಾದ ಡಾ.ಗಿರಿಧರ ಕಜೆ, ಡಾ. ಅಶೋಕ್, ಅಜಿತ್ ಹಾಗೂ ಅಭಿಷೇಕ್ ಅವರು ಕರಪತ್ರವನ್ನು ಬಿಡುಗಡೆ ಮಾಡಿದರು   

ಪ್ರಜಾವಾಣಿ ವಾರ್ತೆ

ಬೆಂಗಳೂರು: ಕಜೆ ಆಯುರ್ವೇದಿಕ್ ಚಾರಿಟೆಬಲ್ ಫೌಂಡೇಷನ್ ಇದೇ 25ರಿಂದ 28ರವರೆಗೆ ಅರಮನೆ ಮೈದಾನದ (ಗೇಟ್‌ ಸಂಖ್ಯೆ 6) ರಾಯಲ್ ಸೆನೆಟ್ ಆ್ಯಂಡ್ ದಿ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ ಹಮ್ಮಿಕೊಂಡಿದೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೌಂಡೇಷನ್‌ನ ಸಂಸ್ಥಾಪಕ ಡಾ.ಗಿರಿಧರ ಕಜೆ, ‘ಆಯುಷ್ ಸಚಿವಾಲಯದ ಸಹಯೋಗದಲ್ಲಿ ಈ ಸಮ್ಮೇಳನ ಆಯೋಜಿಸಲಾಗಿದೆ. ನಾಲ್ಕು ದಿನಗಳ ಈ ಸಮ್ಮೇಳನ ಪ್ರತಿನಿತ್ಯ ಬೆಳಿಗ್ಗೆ 9ರಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ಆಯುರ್ವೇದದ ವೈಶಿಷ್ಟ್ಯ ಅನಾವರಣ ಮಾಡುವುದು ಈ ಸಮ್ಮೇಳನದ ಉದ್ದೇಶ. ಜಗತ್ತಿನ ವಿವಿಧೆಡೆಯಿಂದ ಆರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, 400 ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಆಯುರ್ವೇದ ಚಿಕಿತ್ಸಾ ಪ್ರಾತ್ಯಕ್ಷಿಕೆ, ಸಂಶೋಧನಾ ಪ್ರಬಂಧಗಳ ಮಂಡನೆ, ಆಯುರ್ವೇದ ವಸ್ತು ಪ್ರದರ್ಶನ, ಪಾಕೋತ್ಸವ ಸೇರಿ ಹಲವು ವಿಶೇಷತೆಯನ್ನು ಒಳಗೊಂಡಿದೆ’ ಎಂದು ತಿಳಿಸಿದರು. 

ADVERTISEMENT

‘25ರಂದು ಬೆಳಿಗ್ಗೆ 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ತರಳಬಾಳು ಜಗದ್ಗುರು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ, ಬಿಹಾರದ ಸ್ವಾಮಿ ವೆಂಕಟೇಶ ಪ್ರಪನ್ನಾಚಾರ್ಯ, ಸ್ವಾಮಿ ವಚನಾನಂದ ಗುರೂಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮೊದಲಾದವರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದರು.

‘ಸಮ್ಮೇಳನದಲ್ಲಿ 10 ಆಯುರ್ವೇದ ಕೇಂದ್ರಗಳು ಇರಲಿದ್ದು, ಚಿಕಿತ್ಸಾ ಅನುಭವ ಪಡೆಯಬಹುದಾಗಿದೆ. ಆಯುರ್ವೇದ ಚಿಕಿತ್ಸೆಯಲ್ಲಿ ಬಳಸುವ ಅಪರೂಪದ ಪರಿಕರಗಳು, ಗಿಡಮೂಲಿಕೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಆಯುರ್ವೇದ ನಡೆದು ಬಂದ ಹಾದಿ ಹಾಗೂ ಮಹತ್ವ ಸಾರುವ ಲೇಸರ್ ಶೋ ಸಹ ಇರಲಿದೆ. ಪಾರಂಪರಿಕ ಹಾಗೂ ಆಯುರ್ವೇದ ಗ್ರಂಥದಲ್ಲಿ ಉಲ್ಲೇಖಿಸಿದ ತಿನಿಸುಗಳು ಕೂಡ ಲಭ್ಯ’ ಎಂದು ಹೇಳಿದರು. 

‘ಕರಕುಶಲ ಹಾಗೂ ಗೃಹೋದ್ಯಮ ಉತ್ಪನ್ನಗಳ ಪ್ರದರ್ಶನವೂ ಇರಲಿದೆ. 200 ಸ್ವದೇಶಿ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಸಮ್ಮೇಳನದಲ್ಲಿ ಔಷಧೀಯ ಸಸ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರಿಗೆ ಪ್ರವೇಶ ಉಚಿತ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.