ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಹೇಗೆ ಅಧಿಕಾರಕ್ಕೆ ಬಂದಿತು ಎಂಬ ಸಂದರ್ಭವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವಿಶ್ವ ಆರ್ಥಿಕ ಸಮಾವೇಶದಲ್ಲಿ ಉಕ್ಕು ತಯಾರಿಕಾ ಕಂಪನಿ ಅರ್ಸೆಲರ್ ಮಿತ್ತಲ್‌ನ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಅವರೊಂದಿಗೆ ಔಪಚಾರಿಕವಾಗಿ ಹಂಚಿಕೊಂಡಿದ್ದಾರೆ.
ಕರ್ನಾಟಕ ಪೆವಿಲಿಯನ್‌ನಲ್ಲಿ ಸೋಮವಾರ ಮಿತ್ತಲ್ ಮತ್ತು ಬೊಮ್ಮಾಯಿ ಅವರು ಮಾತನಾಡಿರುವ ಕೆಲ ಕ್ಷಣಗಳ ವಿಡಿಯೊ ತುಣುಕೊಂದನ್ನು ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆ ಮಾಡಿದೆ.
ಈ ವಿಡಿಯೊ ದಲ್ಲಿ ಮಿತ್ತಲ್, ‘ವಿಧಾನಸಭೆಯ 224ರಲ್ಲಿ ನಿಮ್ಮ ಸಂಖ್ಯೆ ಎಷ್ಟಿದೆ’ ಎಂದು ಕೇಳುತ್ತಾರೆ. ಅದಕ್ಕೆ ಸ್ವಲ್ಪ ತಡೆದು ಉತ್ತರಿಸುವ ಬೊಮ್ಮಾಯಿ, ‘ಮೊದಲಿಗೆ ನಾವು 104 ಇದ್ದೆವು. ಪ್ರತಿಪಕ್ಷದ 17 ಶಾಸಕರು ರಾಜೀನಾಮೆ ಕೊಟ್ಟು ನಮ್ಮ ಪಕ್ಷ ಸೇರಿದರು. ಅವರಲ್ಲಿ 15 ಜನ ಪುನಃ ಆಯ್ಕೆಯಾಗಿ ಬಂದರು. ಈಗ 119 ಸಂಖ್ಯೆ ಇದೆ. ನಾವು ಸ್ಥಿರವಾಗಿದ್ದೇವೆ. ಇಬ್ಬರು ಮೂವರು ಬಿಟ್ಟು ಹೋದರೂ, ಸರ್ಕಾರದ ಸ್ಥಿರತೆಗೆ ತೊಂದರೆ ಇಲ್ಲ’ ಎಂದುವಿವರಿಸಿದ್ದಾರೆ.
ಇದೇ ವೇಳೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ‘ಮಿತ್ತಲ್ ಅವರ ಜೊತೆಗಿನ ಭೇಟಿ ಅಪೂರ್ವವಾದುದು’ ಎಂದು ಬಣ್ಣಿಸಿದ್ದಾರೆ.
2019 ರಲ್ಲಿ ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರದ 17 ಶಾಸಕರು ತಂತಮ್ಮ ಪಕ್ಷಗಳನ್ನು ತೊರೆದು ಬಿಜೆಪಿ ಸರ್ಕಾರ ರಚಿಸಲು ನೆರವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.