ಬೆಂಗಳೂರು: ‘ಪ್ರತಿಯೊಬ್ಬರೂ ತಮ್ಮ ತಂದೆ–ತಾಯಿ ಹೆಸರಿನಲ್ಲಿ ಗಿಡ ನೆಟ್ಟು ಪೋಷಿಸಿ ಪರಿಸರ ಉಳಿಸಿ, ಬೆಳೆಸಬೇಕು’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವ ರಾಮದಾಸ್ ಅಠವಳೆ ಹೇಳಿದರು.
ರಾಷ್ಟ್ರೀಯ ನಾಗರಿಕ ಮತ್ತು ಪರಿಸರ ಸಂರಕ್ಷಣೆ ಸಂಸ್ಥೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪರಿಸರಕ್ಕೆ ನಾವೆಲ್ಲರೂ ಹೆಚ್ಚು ಒತ್ತು ನೀಡಬೇಕು. ನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ, ಮನೆಗಳ ಸಮೀಪ ಗಿಡನೆಟ್ಟು ಪೋಷಿಸಬೇಕು. ಇರುವ ಮರಗಳನ್ನು ರಕ್ಷಿಸಬೇಕು. ಹೆಚ್ಚು ಮರಗಳು ಬೆಳೆದರೆ ಪರಿಸರವೂ ಉತ್ತಮವಾಗುತ್ತದೆ. ಪ್ರಕೃತಿ ಮುಖ್ಯವಾಗಿದ್ದು, ಅದನ್ನು ರಕ್ಷಿಸುವುದರಿಂದ ಉತ್ತಮ ಆರೋಗ್ಯ, ಗಾಳಿ, ನೀರು ಪಡೆಯಬಹುದು’ ಎಂದು ಹೇಳಿದರು.
‘ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸರ್ಕಾರದ ಪ್ರತಿನಿಧಿಗಳು ಬಾರದಿರುವುದು ವಿಷಾದನೀಯ. ಪರಿಸರವನ್ನು ನಾಶ ಮಾಡುವುದರಲ್ಲಿ ಸರ್ಕಾರವೇ ಮುಂದಿದೆ. ಅದರ ಪ್ರತಿನಿಧಿಗಳು ಇಂದು ಬಂದಿಲ್ಲ. ಭೂಮಿ, ಮರ, ನೀರು ಲೂಟಿಯಾದರೆ ಪರಿಸರ ಉಳಿಯುತ್ತದೆಯೇ? ಇವೆಲ್ಲವನ್ನೂ ನಾವೆಲ್ಲರೂ ಸೇರಿಕೊಂಡು ಉಳಿಸಬೇಕು, ಸಂರಕ್ಷಿಸಬೇಕು’ ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ ಹೇಳಿದರು.
‘ಪರಿಸರ ರಕ್ಷಣೆ ಮಾಡಬೇಕು ಎಂದು ಸಂವಿಧಾನದ ಮೂಲಕ ಅಂಬೇಡ್ಕರ್ ಅವರು ಹೇಳಿದ್ದಾರೆ. ಆ ಮೂಲಕವೇ ನಾವು ಪರಿಸರದ ಹಕ್ಕನ್ನು ಉಳಿಸಿಕೊಳ್ಳಬೇಕು’ ಎಂದರು.
ಪರಿಸರತಜ್ಞ ಅ.ನ. ಯಲ್ಲಪ್ಪ ರೆಡ್ಡಿ ಮಾತನಾಡಿ, ‘ಪರಿಸರ ಉಳಿಸುವ ವಿಚಾರದಲ್ಲಿ ನಾವೆಲ್ಲ ಬಹಳ ಬುದ್ದಿವಂತರೆಂದು ತಿಳಿದುಕೊಂಡಿದ್ದೇವೆ. ಆದರೆ, ರಾಜ್ಯದ ಹಲವು ಕಡೆ ಸಾವಿರಾರು ಮರಗಳನ್ನು ಕಡಿಯಲಾಗುತ್ತದೆ. ಅದರ ಬಗ್ಗೆ ತಿಳಿದುಕೊಂಡು, ಮರಗಳನ್ನು ಉಳಿಸಬೇಕು’ ಎಂದು ಹೇಳಿದರು.
‘ನಾವು ಬೆಟ್ಟ, ಗುಡ್ಡ, ಪರ್ವತ, ಸರೋವರಗಳನ್ನು ರಕ್ಷಣೆ ಮಾಡುದಕ್ಕಿಂತ, ಅದಕ್ಕಾಗುತ್ತಿರುವ ಹಾನಿಯನ್ನು ತಪ್ಪಿಸಬೇಕು, ಮುನ್ನೆಚ್ಚರಿಕೆ ವಹಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.