ADVERTISEMENT

ಭೂಮಿಗೆ ಹಸಿರ ಹೊದಿಕೆ ತೊಡಿಸುವ ಸಂಕಲ್ಪ

ಮೊಳಗಿದ ಪರಿಸರ ಸಂರಕ್ಷಣೆಯ ಮಂತ್ರ * ಸಸಿ ನೆಟ್ಟು ಪರಿಸರ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 22:18 IST
Last Updated 5 ಜೂನ್ 2020, 22:18 IST
ಪರಿಸರ ದಿನದ ಅಂಗವಾಗಿ ಸಮಗ್ರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಡಾ. ಸ್ನೇಹಾ ರಾಕೇಶ್ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು
ಪರಿಸರ ದಿನದ ಅಂಗವಾಗಿ ಸಮಗ್ರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಡಾ. ಸ್ನೇಹಾ ರಾಕೇಶ್ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು    

ಬೆಂಗಳೂರು: ನಗರದೆಲ್ಲೆಡೆ ಶುಕ್ರವಾರ ಪರಿಸರ ಸಂರಕ್ಷಣೆಯ ಮಂತ್ರ ಕೇಳಿ ಬಂತು. ಭೂಮಿಯ ಮೇಲೆ ಮತ್ತಷ್ಟು ಹಸಿರು ಹೊದಿಕೆ ತೊಡಿಸುವ ಸಂಕಲ್ಪದೊಂದಿಗೆ ಸಾರ್ವಜನಿಕರು ಪರಿಸರ ದಿನ ಆಚರಿಸಿದರು.

ನಗರದಲ್ಲಿನ ಸರ್ಕಾರಿ ಕಚೇರಿಗಳು, ಐಟಿ ಕಂಪನಿಗಳು, ಸಂಘ–ಸಂಸ್ಥೆಗಳ ಆವರಣದಲ್ಲಿ ಗಿಡ ನೆಡುವ ಮೂಲಕ ಮತ್ತು ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು. ಪ್ಲಾಸ್ಟಿಕ್‌ ನಿರ್ಮೂಲನೆಯೊಂದಿಗೆ ಪರಿಸರಕ್ಕೆ ನೀಡಬಹುದಾದ ಕೊಡುಗೆ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಕೆಲವು ಸಂಘ–ಸಂಸ್ಥೆಗಳು ಮಾಡಿದವು.

ಗಾಂಧಿನಗರದ ಸಪ್ನ ಬುಕ್ ಹೌಸ್ ಸೇರಿದಂತೆ ಕೆಲವು ಪುಸ್ತಕ ಮಳಿಗೆಗಳು ಪರಿಸರ ಪ್ರಜ್ಞೆ ಮೂಡಿಸುವ ಹಾಗೂ ಹಸಿರು ಬಣ್ಣದ ಹೊದಿಕೆಯುಳ್ಳ ಪುಸ್ತಕಗಳನ್ನು ಪ್ರದರ್ಶಿಸಲಾಯಿತು. ಪುಸ್ತಕಗಳನ್ನು ಖರೀದಿಸಿದವರಿಗೆ ಗಿಡ–ಮರದ ಬೀಜಗಳನ್ನು ಉಚಿತವಾಗಿ ವಿತರಿಸಲಾಯಿತು.

ADVERTISEMENT

ನಡಿಗೆದಾರರ ಒಕ್ಕೂಟ: ರಾಜ್ಯ ನಡಿಗೆದಾರರ ಒಕ್ಕೂಟದ ಅಧ್ಯಕ್ಷ ಸಿ.ಕೆ. ರವಿಚಂದ್ರ ಅವರ ನೇತೃತ್ವದಲ್ಲಿ ಲಾಲ್‌ಬಾಗ್‌ ಪಶ್ಚಿಮದ್ವಾರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಜ್ಞಾನ ಲೇಖಕ ನಾಗೇಶ್ ಹೆಗಡೆ ಸಾಂಕೇತಿಕವಾಗಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪರಿಸರ ಸಂರಕ್ಷಣೆ ಕುರಿತ ಚಿತ್ರಗಳು ಮತ್ತು ಸಂದೇಶಗಳೊಂದಿಗೆ ಫೇಸ್‌ಬುಕ್‌, ಟ್ವಿಟರ್, ವಾಟ್ಸ್‌ಆ್ಯಪ್‌ಗಳಲ್ಲಿ ಸಾರ್ವಜನಿಕರು ಪರಿಸರ ದಿನದ ಶುಭಾಶಯ ವಿನಿಮಯ ಮಾಡಿಕೊಂಡರು.

ಸಾವಿರ ಸಸಿ ನೆಟ್ಟರು: ಹಾರೋಹಳ್ಳಿಯ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಪ್ರಿಂಟೆಕ್‌ ಪಾರ್ಕ್‌ ಕ್ಲಸ್ಟರ್‌ನಲ್ಲಿ ಸಾವಿರ ಸಸಿಗಳನ್ನು ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

‘ಪ್ರಿಂಟೆಕ್‌ ಟೆಕ್‌ ಪಾರ್ಕ್‌ ಕ್ಲಸ್ಟರ್‌ 57 ಎಕರೆ ವಿಸ್ತೀರ್ಣದಲ್ಲಿ ಹಮ್ಮಿಕೊಂಡಿದೆ. ವಿದ್ಯಾರ್ಥಿಗಳು ಸ್ವಂತ ಉದ್ಯೋಗವನ್ನು ಹೊಂದಲು ಮುದ್ರಣ ಸಂಬಂಧಿತ ವಿಷಯಗಳ ಬಗ್ಗೆ ಇಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ’ ಎಂದು ಜನಾರ್ದನ ತಿಳಿಸಿದರು.

ಕೆಎಸ್‌ಆರ್‌ಟಿಸಿ: ದೈನಂದಿನ ಸರ್ವಜನಿಕ ಸಾರಿಗೆ ಕಾರ್ಯಾಚರಣೆ ಜೊತೆಗೆ ನಿಗಮವು ಪರಿಸರ ದಿನ ಆಚರಿಸಿತು. ಕೇಂದ್ರ ಕಚೇರಿ ಆವರಣದಲ್ಲಿ ಸಸಿ ನೆಟ್ಟ ನಿಗಮದ ನಿರ್ದೇಶಕಿ ಕವಿತಾ ಎಸ್. ಮನ್ನಿಕೇರಿ, ‘ನಿಗಮದ ವತಿಯಿಂದ ಈವರೆಗೆ 1.56 ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಈ ವರ್ಷ 5,200 ಸಸಿ ನಡೆಸಲು ಯೋಜಿಸಲಾಗಿದೆ’ ಎಂದರು.

ಪರಿಸರ ಸಂರಕ್ಷಣೆಗೆ ನಿಗಮದಿಂದ ಹಾಕಿಕೊಂಡಿರುವ ಯೋಜನೆಗಳು, ಕೈಗೊಂಡಿರುವ ಕ್ರಮಗಳ ಬಗ್ಗೆ ಅವರು ವಿವರಿಸಿದರು.

ಕೆವಿಎಸ್‌ ಅಭಿಯಾನ: ಕರ್ನಾಟಕ ವಿದ್ಯಾರ್ಥಿ ಸಂಘಟನೆಯು (ಕೆವಿಎಸ್‌) 'ನಮ್ಮ ಪರಿಸರವನ್ನು ಉಳಿಸಿಕೊಳ್ಳೋಣ ಬನ್ನಿ', 'ನಾಳೆಯ ನಾಡನ್ನು ನೆಡೋಣ' ಶೀರ್ಷಿಕೆಯಡಿ ಪರಿಸರ ಸಂರಕ್ಷಣೆ ಅಭಿಯಾನ ಕೈಗೊಂಡಿತು. ರಾಜ್ಯದಾದ್ಯಂತ ಸಾವಿರಾರು ಕಾಡುಜಾತಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುವ ಅಭಿಯಾನ ಇದಾಗಿದ್ದು, ಆಸಕ್ತರು96868 42196 ದೂರವಾಣಿ ಸಂಪರ್ಕಿಸಬಹುದು.

ಕೆನರಾ ಬ್ಯಾಂಕ್‌: ನಗರದಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯು ‘ವಿಶ್ವ ಪರಿಸರ ದಿನ‘ ವನ್ನು ವಿನೂತನವಾಗಿ ಆಚರಿಸಲಾಯಿತು. ಸಾಮಾಜಿಕ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು,ಪರಿಸರ ರಕ್ಷಣೆ, ಪ್ಲಾಸ್ಟಿಕ್ ಮುಕ್ತ ಭಾರತ, ಮನೆಗೊಂದು ಮರ, ತಾರಸಿತೋಟಗಾರಿಕೆ, ಸ್ವಚ್ಛ ಭಾರತ ಇತ್ಯಾದಿ ವಿಷಯಗಳ ಬಗ್ಗೆ ಪರಿಸರ ತಜ್ಞರ ಭಾಷಣ ಮತ್ತು ಸಂದೇಶಗಳನ್ನು ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತಲುಪಿಸುವ ಕೆಲಸ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.