
ಬೆಂಗಳೂರು: ರೋಟರಿ ಬೆಂಗಳೂರು ಗ್ಲೋಬಲ್ ಯೋಗಾ ಟ್ರಸ್ಟ್‌ನಿಂದ ಡಿಸೆಂಬರ್ 6ರಿಂದ 7ರವರೆಗೆ ಜಿಕೆವಿಕೆ ಆವರಣದಲ್ಲಿರುವ ಬಾಬು ರಾಜೇಂದ್ರಪ್ರಸಾದ್ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ನಾಲ್ಕನೇ ವಿಶ್ವ ಆಹಾರ ಆರೋಗ್ಯ ಎಕ್ಸ್‌ಪೊ ಹಾಗೂ ಗ್ಲೋಬಲ್ ಯೋಗ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಂತರರಾಷ್ಟ್ರೀಯ ಯೋಗಗುರು ಯೋಗಿ ದೇವರಾಜ್, ‘ಮಾನಸಿಕ ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷಣೆಯಡಿ ಈ ಬಾರಿಯ ಸಮ್ಮೇಳನ ಆಯೋಜಿಸಲಾಗುತ್ತದೆ. ಇದರಲ್ಲಿ ಕನಿಷ್ಠ ಐದು ಸಾವಿರ ಯೋಗ ಶಿಕ್ಷಕರು, ಥೆರಪಿಸ್ಟ್, ಯೋಗ ಕನ್ಸಲ್ಟೆಂಟ್ಸ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶ ಇದೆ. ಮುಖ್ಯವಾಗಿ ಗೃಹಿಣಿಯರಿಗೆ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಲಾಗುತ್ತದೆ. ಮಾನಸಿಕ ದೃಢತೆ, ಕೌಟುಂಬಿಕ ಒತ್ತಡ ನಿವಾರಣೆ, ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.
ಉದ್ಘಾಟನಾ ಸಮಾರಂಭದಲ್ಲಿ ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ವಿನಯ್ ಗುರೂಜಿ, ಅರಳು ಮಲ್ಲಿಗೆ ಪಾರ್ಥಸಾರಥಿ, ಸಚಿವ ದಿನೇಶ್ ಗುಂಡೂರಾವ್, ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಎಚ್.ಎಂ. ರೇವಣ್ಣ ಭಾಗವಹಿಸಲಿದ್ದಾರೆ’ ಎಂದರು.
ನಾಗೇಂದ್ರ ಪ್ರಸಾದ್, ಲಕ್ಷ್ಮೀಕಾಂತ್, ವಿ.ಬಿ. ನಾಗೇಶ್, ಜ್ಯೋತಿ ಮಂಜುನಾಥ್, ಸಂಧ್ಯಾಪ್ರಕಾಶ್, ಲೇಖಕಿ ನಳಿನಾ ಡಿ. ಉಪಸ್ಥಿತರಿದ್ದರು.