ADVERTISEMENT

ವಿಶ್ವ ಹೃದಯ ದಿನ: ಕಲಾಕೃತಿ ಮೂಲಕ ಹೃದಯದ ಆರೋಗ್ಯ ಜಾಗೃತಿ

ವಿಶ್ವ ಹೃದಯ ದಿನದ ಪ್ರಯುಕ್ತ ನಗರದ 20ಕ್ಕೂ ಅಧಿಕ ಸ್ಥಳಗಳಲ್ಲಿ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2024, 15:46 IST
Last Updated 28 ಸೆಪ್ಟೆಂಬರ್ 2024, 15:46 IST
ಮೆಟ್ರೊ ನಿಲ್ದಾಣದಲ್ಲಿ ಚಿತ್ರಿಸಿರುವ ಹೃದಯದ 3ಡಿ ಕಲಾಕೃತಿ
ಮೆಟ್ರೊ ನಿಲ್ದಾಣದಲ್ಲಿ ಚಿತ್ರಿಸಿರುವ ಹೃದಯದ 3ಡಿ ಕಲಾಕೃತಿ   

ಬೆಂಗಳೂರು: ವಿಶ್ವ ಹೃದಯ ದಿನದ ಪ್ರಯುಕ್ತ ನಗರದ ಮೆಟ್ರೊ ನಿಲ್ದಾಣಗಳು, ಉದ್ಯಾನಗಳು, ಟೆಕ್‌ ಪಾರ್ಕ್‌ಗಳು ಸೇರಿ 20ಕ್ಕೂ ಅಧಿಕ ಸ್ಥಳಗಳಲ್ಲಿ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ 3ಡಿ ಕಲಾಕೃತಿ ಚಿತ್ರಿಸಲಾಗಿದೆ. 

ಮಣಿಪಾಲ್ ಆಸ್ಪತ್ರೆಗಳ ಸಮೂಹವು ಬೆಂಗಳೂರು ಸಂಚಾರ ಪೊಲೀಸ್ ಹಾಗೂ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್‌ಸಿಎಲ್) ಸಹಯೋಗದಲ್ಲಿ ಈ ಕಲಾಕೃತಿಯ ಪ್ರದರ್ಶನ ಹಮ್ಮಿಕೊಂಡಿದೆ. 

ಧೂಮಪಾನ, ಮದ್ಯಪಾನದಂತಹ ವ್ಯಸನಗಳ ಜತೆಗೆ ಸ್ಥೂಲಕಾಯ ಸೇರಿ ವಿವಿಧ ಸಮಸ್ಯೆಗಳು ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕವಾಗಿ ಬೀರುವ ಪರಿಣಾಮವನ್ನು ಚಿತ್ರಿಸಲಾಗಿದೆ. ಈ 3ಡಿ ಕಲಾಕೃತಿಗಳನ್ನು ಕಲಾವಿದರಾದ ಬಾದಲ್ ನಂಜುಂಡಸ್ವಾಮಿ ಹಾಗೂ ಮುಖೇಶ್ ಕುಮಾರ್ ರಚಿಸಿದ್ದಾರೆ. 

ADVERTISEMENT

ಕಬ್ಬನ್ ಪಾರ್ಕ್, ಇಂದಿರಾನಗರ, ಮಹಾತ್ಮಗಾಂಧಿ ರಸ್ತೆ, ಜೆ.ಪಿ.ನಗರ ಹಾಗೂ ಬೆನ್ನಿಗಾನಹಳ್ಳಿ ಮೆಟ್ರೊ ನಿಲ್ದಾಣ, ಲಾಲ್‌ಬಾಗ್, ಮಂತ್ರಿ ಮಾಲ್, ಹೆಬ್ಬಾಳದ ಮಾನ್ಯತಾ ಎಂಬೆಸಿ ಬಿಸಿನೆಸ್ ಪಾರ್ಕ್, ದೊಮ್ಮಲೂರಿನ ಎಂಬೆಸಿ ಗಾಲ್ಫ್ ಲಿಂಕ್, ಬೆಳ್ಳಂದೂರಿನ ಎಂಬೆಸಿ ಟೆಕ್ ವಿಲೇಜ್ ಮತ್ತು  ವೈಟ್‌ಫೀಲ್ಡ್‌ನ  ಐಟಿಪಿಎಲ್ ಟೆಕ್‌ ಪಾರ್ಕ್‌, ಯಲಹಂಕದ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ಇಂತಹ ಕಲಾಕೃತಿಗಳನ್ನು ಚಿತ್ರಿಸಲಾಗಿದೆ.

‘ಹೃದಯಾಘಾತಕ್ಕೆ ಅಧಿಕ ರಕ್ತದೊತ್ತಡವು ಪ್ರಮುಖ ಕಾರಣವಾಗಿದೆ. ಬದಲಾದ ಜೀವನಶೈಲಿ, ಧೂಮಪಾನದಂತಹ ವ್ಯಸನಗಳು, ಪಾಶ್ಚಾತ್ಯ ಆಹಾರ ಪದ್ಧತಿ ಸೇರಿ ವಿವಿಧ ಕಾರಣಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಯುವಜನರೂ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಹೃದಯದ ಆರೋಗ್ಯದ ಬಗ್ಗೆ ಈ ಬಾರಿ 3ಡಿ ಕಲಾಕೃತಿಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮಣಿಪಾಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 

‘ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಂಡು, ಹೃದಯದ ಬಗ್ಗೆಯೂ ಕಾಳಜಿ ವಹಿಸಬೇಕು. ನಿಯಮಿತವಾಗಿ ಹೃದಯ ತಪಾಸಣೆಗೆ ಒಳಪಡಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಸೇಂಟ್ ಥೆರೆಸಾ ತಥಾಗತ ಆಸ್ಪತ್ರೆ ಹಮ್ಮಿಕೊಂಡಿದ್ದ ವಾಕಥಾನ್‌ನಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಗೋಪಾಲಯ್ಯ ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು

ವಾಕಥಾನ್ ಮೂಲಕ ಜಾಗೃತಿ

ವಿಶ್ವ ಹೃದಯ ದಿನದ (ಸೆ. 29) ಮುನ್ನಾದಿನವಾದ ಶನಿವಾರ ನಗರದ ವಿವಿಧೆಡೆ ಖಾಸಗಿ ಆಸ್ಪತ್ರೆಗಳು ವಾಕಥಾನ್‌ ನಡೆಸಿ ಹೃದಯದ ಆರೋಗ್ಯ ಬಗ್ಗೆ ಜಾಗೃತಿ ಮೂಡಿಸಿದವು.  ಸೇಂಟ್ ಥೆರೆಸಾ ತಥಾಗತ ಆಸ್ಪತ್ರೆ ರಾಜಾಜಿನಗರದಲ್ಲಿ ಹಮ್ಮಿಕೊಂಡಿದ್ದ ವಾಕಥಾನ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿ ‘ಹೃದಯದ ಆರೋಗ್ಯವೇ ನಮ್ಮ ಮೊದಲ ಆದ್ಯತೆಯಾಗಬೇಕು’ ಎಂದು ಹೇಳಿದರು.  ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾದ ದೈಹಿಕ ಚಟುವಟಿಕೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಸಕ್ರ ಆಸ್ಪ್ರತ್ರೆಯು ‘ಹಾರ್ಟ್‌ಥಾನ್’ ಅಭಿಯಾನ ಹಮ್ಮಿಕೊಂಡಿತ್ತು. ಇದಕ್ಕೆ ನಟಿ ಸಂಗೀತಾ ಶೃಂಗೇರಿ ಚಾಲನೆ ನೀಡಿದರು. ‘ಹೃದಯದ ಆರೋಗ್ಯಕ್ಕೆ ನಿಯಮಿತ ನಡಿಗೆ ವ್ಯಾಯಾಮ ಅಗತ್ಯ’ ಎಂದು ವೈದ್ಯರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.